ನಟ ವಿಕ್ಕಿ ಕೌಶಾಲ್ ವಿರುದ್ಧ ಪೊಲೀಸ್ ದೂರಿಗೆ ಕಾರಣವಾದ ನಂಬರ್ ಪ್ಲೇಟ್ ನಲ್ಲಿನ ಬೋಲ್ಟ್!

Update: 2022-01-03 07:35 GMT
ವಿಕ್ಕಿ ಕೌಶಾಲ್ (Photo: instagram.com/vickykaushal09)

ಇಂದೋರ್: ರಾಜ್ಯದಲ್ಲಿ ಚಿತ್ರವೊಂದರ ದೃಶ್ಯದ ಚಿತ್ರೀಕರಣದ ವೇಳೆ ತನ್ನ ದ್ವಿಚಕ್ರವಾಹನದ ನೋಂದಣಿ ಸಂಖ್ಯೆಯನ್ನು ಬಳಸಿದ್ದಾರೆಂದು ಆರೋಪಿಸಿ ಇಂದೋರ್ ನಿವಾಸಿ ಜಯ್ ಸಿಂಗ್ ಯಾದವ್ ಎಂಬವರು ನಟ ವಿಕ್ಕಿ ಕೌಶಾಲ್ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಆದರೆ ಚಿತ್ರದ ದೃಶ್ಯವೊಂದರಲ್ಲಿ ವಿಕ್ಕಿ ಕೌಶಾಲ್ ಬಳಸಿದ ನಂಬರ್ ಪ್ಲೇಟ್‌ನಲ್ಲಿ ಸಿಕ್ಕಿಸಲಾಗಿದ್ದ ಬೋಲ್ಟ್ ಒಂದರಿಂದ ತಪ್ಪು ಅಭಿಪ್ರಾಯ ಮೂಡಿತ್ತು ಎಂದು ಪೊಲೀಸರು ಹೇಳಿದ್ದಾರಲ್ಲದೆ ಚಿತ್ರದಲ್ಲಿ ಬಳಸಲಾದ ದ್ವಿಚಕ್ರವಾಹನವು ದೂರುದಾರರದ್ದಲ್ಲ ಬದಲು ಚಿತ್ರ ನಿರ್ಮಾಣ ಸಂಸ್ಥೆಯದ್ದು ಎಂದೂ ತಿಳಿಸಿದ್ದಾರೆ.

ವಿಕ್ಕಿ ಕೌಶಾಲ್ ಅವರು ತಮ್ಮ ಮುಂಬರುವ ಇನ್ನೂ ಹೆಸರಿಡದ ಚಿತ್ರಕ್ಕಾಗಿ ಸಹನಟಿ ಸಾರಾ ಆಲಿ ಖಾನ್ ಅವರೊಂದಿಗೆ ಇಂದೋರ್ ನಗರದ ರಸ್ತೆಗಳಲ್ಲಿ ಬೈಕ್ ಒಂದನ್ನು ಚಲಾಯಿಸುತ್ತಿದ್ದುದನ್ನು ಕಂಡ ನಂತರ ಈ ದೂರು ದಾಖಲಾಗಿತ್ತು.

ಇಂದೋರ್‌ನ ಬಂಗಂಗ ಪ್ರದೇಶದ ನಿವಾಸಿಯಾಗಿರುವ ಜೈ ಸಿಂಗ್, ಆ ವಾಹನ ಸಂಖ್ಯೆ ತಮಗೆ ಸೇರಿದ್ದು ಹಾಗೂ ತಮ್ಮ ಅನುಮತಿಯು ಇಲ್ಲದೆ ಆ ಸಂಖ್ಯೆಯನ್ನು ಬಳಸಲಾಗಿತ್ತು ಎಂದು ದೂರಿದ್ದರು.

ಆದರೆ ದೂರುದಾರರು ತಿಳಿಸಿದಂತೆ ಅವರ ವಾಹನ ಸಂಖ್ಯೆ 4872 ಅನ್ನು ಚಿತ್ರದಲ್ಲಿ ಬಳಸಲಾಗಿಲ್ಲ, ಚಿತ್ರದಲ್ಲಿ ಬಳಸಲಾದ ವಾಹನ ಸಂಖ್ಯೆ 1872 ಆಗಿತ್ತು, ಆದರೆ ಅದು 1 ರ ಬದಲು 4 ಎಂಬಂತೆ ತೋರುತ್ತಿತ್ತು. ಆ ನಂಬರ್ ಪ್ಲೇಟ್ ಬಳಸಲು ಅವರಿಗೆ ಅನುಮತಿಯಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತರುವಾಯ ಚಿತ್ರನಿರ್ಮಾಣ ಸಂಸ್ಥೆಯ ಹರ್ಷ್ ದವೆ ಪ್ರತಿಕ್ರಿಯಿಸಿ, ಬಳಸಲಾದ ನಂಬರ್ ಪ್ಲೇಟ್ 1872 ಎಂಬುದನ್ನು ದೃಢಪಡಿಸಿದ್ದಾರೆ, ಆದರೆ 1 ಸಂಖ್ಯೆಯಿರುವಲ್ಲಿ ಬೋಲ್ಟ್ ಹಾಕಲಾಗಿದ್ದರಿಂದ ಅದು 4ರಂತೆ ಕಾಣುತ್ತಿತ್ತು, ಇದರಿಂದಾಗಿ ಗೊಂದಲ ಉಂಟಾಗಿರಬಹುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News