ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಪ್ರಕರಣ: ಎರಡನೇ ಎಫ್‌ಐಆರ್ ದಾಖಲು

Update: 2022-01-03 17:30 GMT

ಡೆಹ್ರಾಡೂನ್, ಜ. 3: ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಭಾಗವಹಿಸಿದ ಕೆಲವರು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಇಲ್ಲಿನ ನಿವಾಸಿ ನದೀಮ್ ಅಲಿ ಸಲ್ಲಿಸಿದ ದೂರಿನ ಆಧಾರದಲ್ಲಿ ರವಿವಾರ ಹರಿದ್ವಾರದ ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜ್ವಾಲಾಪುರದ ಹಿರಿಯ ಸಬ್ ಇನ್ಸ್‌ಪೆಕ್ಟರ್ ನಿತೇಶ್ ಶರ್ಮಾ ಹೇಳಿದ್ದಾರೆ.

ಎರಡನೇ ಎಫ್‌ಐಆರ್‌ನಲ್ಲಿ ಕಾರ್ಯಕ್ರಮ ಆಯೋಜಕ ಯತಿ ನರಸಿಂಹಾನಂದ ಗಿರಿ, ವಸೀಮ್ ರಿಝ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿ, ಸಿಂಧು ಸಾಗರ್, ಧರ್ಮದಾಸ್, ಪರಮಾನಂದ, ಸಾಧ್ವಿ ಅನ್ನಪೂರ್ಣ, ಆನಂದ್ ಸ್ವರೂಪ್, ಅಶ್ವಿನಿ ಉಪಾಧ್ಯಾಯ, ಸುರೇಶ್ ಚವ್ಹಾಣ್ ಹಾಗೂ ಪ್ರಬೋಧಾನಂದ ಗಿರಿ ಅವರನ್ನು ಹೆಸರಿಸಲಾಗಿದೆ. ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಮೊದಲ ಎಫ್‌ಐಆರ್ ದಾಖಲಿಸಲಾದ ನಗರ ಠಾಣೆಗೆ ಈ ಎಫ್‌ಐಆರ್ ಅನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಲು ರವಿವಾರ ವಿಶೇಷ ತನಿಖಾ ತಂಡವನ್ನು ಕೂಡ ರಚಿಸಲಾಗಿದೆ. ಹರಿದ್ವಾರದಲ್ಲಿ ಡಿಸೆಂಬರ್ 16ರಿಂದ 19ರ ವರೆಗೆ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಒತ್ತಡಕ್ಕೆ ಉತ್ತರಾಖಂಡದ ಬಿಜೆಪಿ ಸರಕಾರ ಒಳಗಾಗಿದೆ. ಧರ್ಮ ಸಂಸದ್‌ನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಡೆಹ್ರಾಡೂನ್ ಹಾಗೂ ಹರಿದ್ವಾರದಲ್ಲಿ ಶುಕ್ರವಾರ ಹಾಗೂ ಶನಿವಾರ ಮುಸ್ಲಿಮರು ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News