ಅಫ್ಘಾನ್ ಜೈಲಿನಿಂದ ಪುತ್ರಿ ಮತ್ತು ಮೊಮ್ಮಗಳ ಗಡಿಪಾರು ಕೋರಿರುವ ಅರ್ಜಿಯ ಬಗ್ಗೆ ನಿರ್ಧರಿಸಿ: ಕೇಂದ್ರಕ್ಕೆ ಸುಪ್ರೀಂ
ಹೊಸದಿಲ್ಲಿ,ಜ.3: ಹಾಲಿ ಅಫ್ಘಾನಿಸ್ತಾನದ ಪುಲ್-ಎ-ಛರ್ಕಿ ಜೈಲಿನಲ್ಲಿ ಬಂಧನದಲ್ಲಿರುವ ತನ್ನ ಪುತ್ರಿ ಮತ್ತು ಅಪ್ರಾಪ್ತವಯಸ್ಕ ಮೊಮ್ಮಗಳ ಗಡಿಪಾರಿಗಾಗಿ ಕೋರಿ ಕೇರಳದ ನಿವಾಸಿ ವಿ.ಜೆ.ಸೆಬಾಸ್ಟಿಯನ್ ಫ್ರಾನ್ಸಿಸ್ ಎನ್ನುವವರು ಸಲ್ಲಿಸಿರುವ ಅರ್ಜಿಯ ಬಗ್ಗೆ ಎಂಟು ವಾರಗಳಲ್ಲಿ ನಿರ್ಧಾರವನ್ನು ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಕೇಂದ್ರಕ್ಕೆ ನಿರ್ದೇಶ ನೀಡಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ತನ್ನ ಪುತ್ರಿಯ ವಿರುದ್ಧ ಕಾನೂನು ಬಾಹಿರ ಚಟವಟಿಕೆಗಳ (ತಡೆ) ಕಾಯ್ದೆಯಡಿ ಮತ್ತು ಇತರ ಆರೋಪಗಳಲ್ಲಿ ಭಾರತದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದೆ. ತನ್ನ ಅಳಿಯ ಪತ್ನಿ ಮತ್ತು ಇತರರೊಂದಿಗೆ ಸೇರಿಕೊಂಡು ಏಷ್ಯಾದ ರಾಷ್ಟ್ರಗಳ ವಿರುದ್ಧ ಯುದ್ಧ ಸಾರುವಲ್ಲಿ ಭತೋತ್ಪಾದಕ ಸಂಘಟನೆ ಐಸಿಸ್‌ನ್ನು ಬೆಂಬಲಿಸಲು ಸಂಚು ಹೂಡಿದ್ದರು ಎನ್ನುವುದು ಆರೋಪವಾಗಿದೆ. ಅಫ್ಘಾನಿಸ್ತಾನ ತಲುಪಿದ ಬಳಿಕ ತನ್ನ ಅಳಿಯ ಯುದ್ಧದಲ್ಲಿ ಭಾಗಿಯಾಗಿ ಕೊಲ್ಲಲ್ಪಟ್ಟಿದ್ದ ಮತ್ತು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರದಿದ್ದ ತನ್ನ ಪುತ್ರಿ ಮತ್ತು ಮೊಮ್ಮಗಳು ಇತರ ಹಲವಾರು ಮಹಿಳೆಯರೊಂದಿಗೆ 2019,ನ.15ರಂದು ಅಫ್ಘಾನ್ ಪಡೆಗಳ ಎದುರು ಶರಣಾಗುವಂತಾಗಿತ್ತು ಎಂದು ಫ್ರಾನ್ಸಿಸ್ ಅರ್ಜಿಯಲ್ಲಿ ಹೇಳಿದ್ದಾರೆ.
ಎಂಟು ವಾರಗಳ ಅವಧಿಯ ಬಳಿಕ ಕೇಂದ್ರವು ತೆಗೆದುಕೊಳ್ಳುವ ನಿರ್ಧಾರದಿಂದ ಅಸಮಾಧಾನವಾದರೆ ಕೇರಳ ಉಚ್ಚ ನ್ಯಾಯಾಲಯದ ಮೊರೆ ಹೋಗುವ ಅವಕಾಶವನ್ನು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಫ್ರಾನ್ಸಿಸ್‌ಗೆ ನೀಡಿತು.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುವ ಮುನ್ನ ಕಳೆದ ವರ್ಷದ ಜುಲೈನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು ಎಂದು ಪೀಠಕ್ಕೆ ತಿಳಿಸಿದ ಫ್ರಾನ್ಸಿಸ್ ಪರ ವಕೀಲರು,ತಾಲಿಬಾನಿಗಳು ಅಧಿಕಾರಕ್ಕೆ ಬಂದ ಬಳಿಕ ಜೈಲುಗಳನ್ನು ನೆಲಸಮಗೊಳಿಸಲಾಗಿದೆಯಾದರೂ,ಕೈದಿಗಳನ್ನು ಅಫ್ಘಾನಿಸ್ತಾನದ ಗಡಿ ಪ್ರದೇಶಗಳಲ್ಲಿ ದಿಗ್ಬಂಧನದಲ್ಲಿರಿಸಲಾಗಿದೆ ಎಂಬ ವರದಿಗಳಿರುವುದರಿಂದ ಫ್ರಾನ್ಸಿಸ್‌ರ ಪುತ್ರಿ ಮತ್ತು ಮೊಮ್ಮಗಳು ಬಂಧನದಲ್ಲಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ನಿವೇದಿಸಿಕೊಂಡರು. ಆದಾಗ್ಯೂ ಸರ್ವೋಚ್ಚ ನ್ಯಾಯಾಲಯವು,ಇವೆಲ್ಲ ಸರಕಾರವು ನಿರ್ಧರಿಸಬೇಕಾದ ವಿಷಯಗಳಾಗಿವೆ ಎಂದು ಸ್ಪಷ್ಟಪಡಿಸಿತು.
ತನ್ನ ಪುತ್ರಿ ಮತ್ತು ಮೊಮ್ಮಗಳು ಅಫ್ಘಾನಿಸ್ತಾನದಲ್ಲಿ ಐಸಿಸ್‌ಗೆ ಸೇರುವ ಉದ್ದೇಶದಿಂದ 2016,ಜು.30ರಂದು ಭಾರತವನ್ನು ತೊರೆದಿದ್ದರು. ಇಂಟರ್‌ಪೋಲ್ 2017,ಮಾ.22ರಂದು ತನ್ನ ಪುತ್ರಿಯ ಹೆಸರಿನಲ್ಲಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಸುದ್ದಿ ಜಾಲತಾಣವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಪುತ್ರಿ ತನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿದ್ದಳು ಮತ್ತು ಭಾರತಕ್ಕೆ ಮರಳಿ ಇಲ್ಲಿಯ ನ್ಯಾಯಾಲಯಗಳಲ್ಲಿ ನ್ಯಾಯಯುತ ವಿಚಾರಣೆಯನ್ನು ಎದುರಿಸಲು ಬಯಸಿದ್ದಳು ಎಂದೂ ಫ್ರಾನ್ಸಿಸ್ ತಿಳಿಸಿದ್ದಾರೆ.
ಭಾರತವು 2016ರಲ್ಲಿ ಅಫ್ಘಾನಿಸ್ತಾನದೊಂದಿಗೆ ಗಡಿಪಾರು ಒಪ್ಪಂದವನ್ನು ಮಾಡಿಕೊಂಡಿದೆ,ಆದರೆ ತನ್ನ ಪುತ್ರಿ ಮತ್ತು ಮೊಮ್ಮಗಳ ಗಡಿಪಾರಿಗಾಗಿ ಕೋರಿಕೊಳ್ಳಲು ಅದು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.