ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ: ಎನ್‌ಸಿಬಿಯಿಂದ ಸಮೀರ್ ವಾಂಖೆಡೆ ವಾಪಸಾತಿ

Update: 2022-01-03 16:46 GMT
ಸಮೀರ್ ವಾಂಖೆಡೆ

ಮುಂಬೈ,ಜ.3: ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ)ವು ತನ್ನ ಮುಂಬೈ ವಲಯ ಕಚೇರಿಯ ಮುಖ್ಯಸ್ಥರಾಗಿದ್ದ ಸಮೀರ್ ವಾಂಖೆಡೆ ಅವರನ್ನು ತವರು ಕೇಡರ್ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ಗೆ ಮರಳಿಸಿದ್ದು,ಈ ಬಗ್ಗೆ ಸೋಮವಾರ ಆದೇಶವನ್ನು ಹೊರಡಿಸಲಾಗಿದೆ.

ಬಾಲಿವುಡ್ ನಟ ಸುಶಾಂತ ಸಿಂಗ್ ರಾಜಪೂತ್ ಸಾವಿಗೆ ಸಂಬಂಧಿಸಿದಂತೆ ಮಾದಕ ದ್ರವ್ಯ ಆರೋಪಗಳ ಬಗ್ಗೆ ತನಿಖೆಗಾಗಿ ಎನ್‌ಸಿಬಿ ಆಗಸ್ಟ್,2020ರಲ್ಲಿ ಆರು ತಿಂಗಳ ಅವಧಿಗೆ ವಾಂಖೆಡೆಯವರ ಸೇವೆಯನ್ನು ಪಡೆದುಕೊಂಡಿತ್ತು. ಬಳಿಕ ಅದನ್ನು ವಿಸ್ತರಿಸಿದ್ದು,ಡಿ.31ಕ್ಕೆ ಅವರ ಅಧಿಕಾರಾವಧಿಯು ಅಂತ್ಯಗೊಂಡಿತ್ತು. ಕಳೆದ ವರ್ಷ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ವಾಂಖೆಡೆ ಸುದ್ದಿಯಲ್ಲಿದ್ದರು.

ಸರಕಾರಿ ನೌಕರಿ ಪಡೆಯಲು ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ,ತನ್ನ ಧರ್ಮದ ಕುರಿತು ಸುಳ್ಳು ಹೇಳಿದ್ದಾರೆ ಮತ್ತು ನಕಲಿ ಮಾದಕ ದ್ರವ್ಯ ಪ್ರಕರಣಗಳಲ್ಲಿ ಜನರನ್ನು ಬಂಧಿಸುತ್ತಿದ್ದಾರೆ ಎಂದು ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಆರೋಪಿಸಿದ ಬಳಿಕ ವಾಂಖೆಡೆ ರಾಜಕೀಯ ವಿವಾದದ ಕೇಂದ್ರಬಿಂದುವಾಗಿದ್ದರು.

ವಾಂಖೆಡೆಯವರ ಗಮನಾರ್ಹ ತನಿಖೆಗಳಲ್ಲಿ ರಾಜಪೂತ್ ನಿಧನದ ಬಳಿಕ ಬಾಲಿವುಡ್ ಡ್ರಗ್ಸ್ ಸಿಂಡಿಕೇಟ್ ಕುರಿತು ತನಿಖೆಯೂ ಸೇರಿದೆ. ರಿಯಾ ಚಕ್ರವರ್ತಿ ಮತ್ತು ಇತರರನ್ನು ವಾಂಖೆಡೆ ನೇತೃತ್ವದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗಿತ್ತು.

ಕಳೆದ ಅಕ್ಟೋಬರ್‌ನಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಬಂಧಿಸಿದ ಬಳಿಕ ಎನ್‌ಸಿಬಿಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳೆದಿದ್ದವು. ಎನ್‌ಸಿಬಿ ಅಧಿಕಾರಿಗಳು ಶಾರೂಖ್ ಖಾನ್‌ರಿಂದ ಹಫ್ತಾ ವಸೂಲಿಗಾಗಿ ಆರ್ಯನ್‌ರನ್ನು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News