ಪ್ರಧಾನಿ ಮೋದಿಗೆ ಕರಿಪತಾಕೆ ಪ್ರದರ್ಶಿಸಿದ್ದ ಉತ್ತರಪ್ರದೇಶ ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಗುಂಡಿನ ದಾಳಿ

Update: 2022-01-04 12:08 GMT

ಸುಲ್ತಾನಪುರ್: ಕಳೆದ ವರ್ಷದ ನವೆಂಬರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶಕ್ಕೆ ಪೂರ್ವಾಂಚಲ್ ಎಕ್ಸಪ್ರೆಸ್‍ವೇ ಉದ್ಘಾಟನೆಗೆ ಆಗಮಿಸಿದ್ದ ವೇಳೆ ವೇದಿಕೆ ಸಮೀಪವೇ ಅವರಿಗೆ ಕರಿ ಪತಾಕೆ ಪ್ರದರ್ಶಿಸಿದ್ದೇ ಅಲ್ಲದೆ ʼಯೋಗಿ ಮುರ್ದಾಬಾದ್ʼ ಘೋಷಣೆಗಳನ್ನು ಕೂಗಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಕರ್ತೆ ರೀಟಾ ಯಾದವ್ ಅವರ ಮೇಲೆ ಸೋಮವಾರ ಸಂಜೆ ಗುಂಡಿನ ದಾಳಿ ನಡೆದಿದೆ.

ಸುಲ್ತಾನಪುರ್‍ನ ನಿರ್ಮಾಣ ಹಂತದಲ್ಲಿರುವ ಲಕ್ನೋ-ವಾರಣಾಸಿ ಚತುಷ್ಪಥ ಹೆದ್ದಾರಿ ಸಮೀಪ ರೀಟಾ ಅವರ ಕಾಲಿಗೆ ಬೈಕಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ.

ರೀಟಾ ಅವರು ಪಕ್ಷದ ಕಚೇರಿಯಲ್ಲಿ ಸಭೆಯೊಂದರಲ್ಲಿ ಭಾಗವಹಿಸಿ ತಮ್ಮ ಬೊಲೆರೋ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ವಾಹನವನ್ನು ಅಡ್ಡಗಟ್ಟಿದ್ದರು. ಚಾಲಕ ವಾಹನ ನಿಲ್ಲಿಸುತ್ತಿದ್ದಂತೆಯೇ ದುಷ್ಕರ್ಮಿಗಳು ರೀಟಾ ಕಾಲಿಗೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ.

ರೀಟಾ ಪ್ರಕಾರ ದುಷ್ಕರ್ಮಿಗಳು ಆಕೆಯನ್ನು ನಿಂದಿಸಿ ಆಕೆಯ ಚಾಲಕನತ್ತವೂ ಬಂದೂಕು ಗುರಿಯಾಗಿಸಿದ್ದರು. ತಾನು ಒಬ್ಬನ ಕೆನ್ನೆಗೆ ಬಾರಿಸಿದಾಗ ಅವರಲ್ಲೊಬ್ಬ ಗುಂಡು ಹಾರಿಸಿದ್ದ ಎಂದು ಆಕೆ ಹೇಳಿದ್ದಾರೆ.

ಈ ಹಿಂದೆ ಸಮಾಜವಾದಿ ಪಕ್ಷದಲ್ಲಿದ್ದ ರೀಟಾ ಯಾದವ್, ಡಿಸೆಂಬರ್ 17ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಝಾನ್ಸಿಯಲ್ಲಿ ಡಿಸೆಂಬರ್ 26ರಂದು ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದ ʼಲಡ್ಕೀ ಹೂಂ ಲಡ್ ಸಕ್ತೀ ಹೂಂʼ ರ್ಯಾಲಿಗೆ ಸಾವಿರಾರು ಮಹಿಳೆಯರನ್ನು ಒಟ್ಟುಗೂಡಿಸುವಲ್ಲಿ ರೀಟಾ ಪ್ರಮುಖ ಪಾತ್ರ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News