15-18 ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಗೆ ಡಬ್ಲುಎಚ್ಓ ಅನುಮೋದನೆ ಇನ್ನೂ ದೊರೆತಿಲ್ಲ

Update: 2022-01-04 14:46 GMT

ಹೊಸದಿಲ್ಲಿ,ಜ.4: ಹದಿನೈದರಿಂದ ಹದಿನೆಂಟು ವರ್ಷದವರೆಗಿನ ಮಕ್ಕಳಿಗೆ ಕೋವಿಡ್19 ಲಸಿಕೆ ನೀಡಿಕೆ ಅಭಿಯಾನವನ್ನು ಭಾರತ ಸೋಮವಾರ ಆರಂಭಿಸಿದ್ದು, ಕೋವ್ಯಾಕ್ಸಿನ್ ಈ ವಯೋಮಾನದವರಿಗಾಗಿ ಭಾರತದಲ್ಲಿ ಲಭ್ಯವಿರುವ ಏಕಮಾತ್ರ ಲಸಿಕೆಯಾಗಿದೆ. ಆದರೆ ಕೋವ್ಯಾಕ್ಸಿನ್ ಲಸಿಕೆಯನ್ನು ವಯಸ್ಕರಿಗೆ ಮಾತ್ರ ಬಳಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಓ)ಯ ಅನುಮೋದನೆ ನೀಡಿದ್ದು, 12ರಿಂದ 18 ವರ್ಷದವರೆಗಿನ ಮಕ್ಕಳಿಗೆ ಈ ಲಸಿಕೆಯ ಬಳಕೆಗೆ ಅದು ಇನ್ನೂ ಅನುಮತಿಯನ್ನು ನೀಡಿಲ್ಲ.

ಡಿಸೆಂಬರ್ 27ರಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಕಳೆದ ವರ್ಷದ ಡಿಸೆಂಬರ್ 28ರಂದು ತನ್ನ ಜಾಲತಾಣದಲ್ಲಿ ಪ್ರಕಟಿಸಿದ ಪರಿಷ್ಕೃತ ಕೋವಿಡ್19 ಮಾರ್ಗಸೂಚಿಯಲ್ಲಿ, ಹೈದಾರಾಬಾದ್ ಮೂಲದ ಭಾರತ್ ಬಯೋಟೆಕ್ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ 15ರಿಂದ 18 ವರ್ಷ ವಯೋಮಾನದವರಿಗಾಗಿ ಲಭ್ಯವಿರುವ ಏಕೈಕ ತುರ್ತುಸನ್ನಿವೇಶದಲ್ಲಿ ಬಳಕೆಗೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ ಎಂದು ತಿಳಿಸಿದೆ.

ಆದಾಗ್ಯೂ ನವೆಂಬರ್ ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಓ) ಬಿಡುಗಡೆಗೊಳಿಸಿದ ಹೇಳಿಕೆಯೊಂದು ಭಾರತದಲ್ಲಿ 12-17 ವರ್ಷದ ವಯೋಮಾನದಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಬಳಸಲು ಭಾರತವು ಅನುಮೋದನೆ ನೀಡಿದೆಯಾದರೂ. ಆ ವಯೋಗುಂಪಿನವರಿಗೆ ನೀಡಬಹುದಾದ ತುರ್ತುಸನ್ನಿವೇಶದಲ್ಲಿ ಬಳಸುವ ಲಸಿಕೆಗಳ ಕುರಿತ ಡಬ್ಲು ಎಚ್ಓ ಪಟ್ಟಿಯಲ್ಲಿ ಅದು ಸ್ಥಾನಪಡೆದುಕೊಂಡಿಲ್ಲವೆಂದು ‘ದಿ ಪ್ರಿಂಟ್’ ವರದಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ದಿ ಪ್ರಿಂಟ್ ವರದಿಗಾರರು ಆರೋಗ್ಯ ಸಚಿವಾಲಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಸಂವಹನ ತಂಡವನ್ನು ಸಂಪರ್ಕಿಸಿದೆಯಾದರೂ, ಆ ಬಗ್ಗೆ ಅವುಗಳಿಂದ ಇನ್ನೂ ಉತ್ತರ ದೊರೆತಿಲ್ಲವೆಂದು ತಿಳಿದುಬಂದಿದೆ. ಈ ಮಧ್ಯೆ ಭಾರತ್ ಬಯೋಟೆಕ್‌ನ ವಕ್ತಾರರು ಅಪ್ರಾಪ್ತ ವಯಸ್ಕರಿಗೆ ಬಳಕೆಯಾಗುವ ಲಸಿಕೆಗಳ ದತ್ತಾಂಶದ ಕುರಿತ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇತರ ದೇಶಗಳ ನಿಯಂತ್ರಕರಿಗೆ ಸಲ್ಲಿಸಲಾಗುವುದೆಂದು ತಿಳಿಸಿದರು.

ಅಪ್ರಾಪ್ತ ವಯಸ್ಕರಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳನ್ನು ವೈದ್ಯಕೀಯ ಮೇಧಾವಿಗಳ ವಿಮರ್ಶೆಗೊಳಗಾಗುವ ವೈದ್ಯಕೀಯ ನಿಯತಕಾಲಿಕದಲ್ಲಿ ಇನ್ನೂ ಪ್ರಕಟಿಸಿಲ್ಲವದರೂ, ಅದು ಕ್ಲಿನಿಕಲ್ ಟ್ರಯಲ್‌ನ ಫಲಿತಾಂಶಗಳನ್ನು ಜಾಲತಾಣವೊಂದರಲ್ಲಿ ಪ್ರಕಟಿಸಿತ್ತು. ಈ ಅಧ್ಯಯನ ವರದಿಯು ಮಕ್ಕಳಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಪ್ರತಿಕಾಯದ ಪರಿಣಾಮಕಾರಿತ್ವ ವಯಸ್ಕರಿಗಿಂತ 1.7 ಪಟ್ಟು ಅಧಿಕವಾಗಿದೆಯೆಂದು ತಿಳಿಸಿದೆ.

ಭಾರತೀಯ ಮಹಾ ಔಷಧಿ ನಿಯಂತ್ರಣಾಧಿಕಾರಿ (ಡಿಸಿಜಿಐ) ಅವರು ಈವರೆಗೆ ಎಡು ಲಸಿಕೆಗಳನ್ನು ಮಾತ 18 ವರ್ಷಕ್ಕಿಂತ ಕೆಳವಯಸ್ಸಿನವರಿಗೆ ಬಳಸಲು ಅನುಮತಿ ನೀಡಿದ್ದಾರೆ. ಆದಾಗ್ಯೂ ಪ್ರಸಕ್ತ ಭಾರತದಲ್ಲಿ ಕೋವ್ಯಾಕ್ಸಿನ್ ಮಾತ್ರವೇ ಈ ವಯೋಮಾನದವರಿಗೆ ಲಸಿಕೀಕರಣಕ್ಕೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಝೈಡಸ್ ಕ್ಯಾಡಿಲ್ಲಾದ ಝೈಕೋವ್-ಡಿ, ಜಗತ್ತಿನ ಪ್ರಪ್ರಥಮ ಡಿಎನ್ಎ ಲಸಿಕೆಯಾಗಿದ್ದು, ಅದಕ್ಕೂ ಕೂಡಾ 12 ವರ್ಷಕ್ಕಿಂತ ಮೇಲ್ಪಟ ವಯಸ್ಸಿನವರಿಗೆ ಬಳಸಲು ಅನುಮತಿ ನೀಡಲಾಗಿದೆ. ಆದಾಗ್ಯೂ ಈ ಲಸಿಕೆಯನ್ನು ಭಾರತದ ಲಸಿಕೀಕರಣ ಅಭಿಯಾನದಲ್ಲಿ ಇನ್ನೂ ಸೇರ್ಪಡೆಗೊಳಿಸಲಾಗಿಲ್ಲ.

12-18 ವಯೋಗುಂಪಿನವರಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲು ಡಿಜಿಸಿಐ ಡಿಸೆಂಬರ್ 25ರಂದು ಅನುಮತಿ ನೀಡಿತ್ತು. ಆ ದಿನವೇ ಪ್ರಧಾನಿ ನರೇಂದ್ರ ಮೋದಿಯವರು 15-18 ವಯೋಗುಂಪಿನವರಿಗೆ ಲಸಿಕೆ ನೀಡಿಕೆ ಅಭಿಯಾನವು ಜನವರಿ 3ರಂದು ಆರಂಭವಾಗಲಿದೆಯೆಂದು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News