ದೇಶದಲ್ಲಿ ಒಂದೇ ದಿನ 58 ಸಾವಿರ ಕೋವಿಡ್ ಪಾಸಿಟಿವ್
ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಒಂದು ದಿನದಲ್ಲಿ ಪ್ರಕರಣಗಳ ಸಂಖ್ಯೆ ಶೇಕಡ 56ರಷ್ಟು ಹೆಚ್ಚಿದ್ದು, ಒಂದೇ ದಿನ ದೇಶದಲ್ಲಿ ಸುಮಾರು 58 ಸಾವಿರ ಪ್ರಕರಣಗಳು ವರದಿಯಾಗಿವೆ.
ಮಂಗಳವಾರ ತಡರಾತ್ರಿ ವೇಳೆಗೆ 57,974 ಪ್ರಕರಣಗಳು ವರದಿಯಾಗಿದ್ದು, ಇನ್ನೂ ಕೆಲ ರಾಜ್ಯಗಳ ಅಂಕಿ ಅಂಶ ಲಭ್ಯವಾಗಬೇಕಿರುವುದರಿಂದ ಹೊಸ ಪ್ರಕರಣಗಳ ಸಂಖ್ಯೆ 58 ಸಾವಿರದ ಗಡಿ ದಾಟುವುದು ಖಚಿತ. ಇದು ಸೋಮವಾರ ವರದಿಯಾದ 37,123 ಪ್ರಕರಣಗಳಿಗಿಂತ 20 ಸಾವಿರದಷ್ಟು ಅಧಿಕ. ದೇಶದಲ್ಲಿ 2021ರ ಜೂನ್ 19ರಂದು 58,570 ಪ್ರಕರಣಗಳು ದಾಖಲಾಗಿದ್ದವು. ಆ ಬಳಿಕ ಮಂಗಳವಾರ ದಾಖಲಾದ ಪ್ರಕರಣಗಳೇ ಗರಿಷ್ಠ.
ಇದಕ್ಕೂ ಮುನ್ನ 2021ರ ಜನವರಿ 28ರಂದು ಮಾತ್ರ ಒಂದೇ ದಿನದಲ್ಲಿ ಪ್ರಕರಣಗಳ ಸಂಖ್ಯೆ ಶೇಕಡ 63ರಷ್ಟು ಏರಿಕೆ ದಾಖಲಿಸಿತ್ತು. ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆ ವೇಳೆ ಸಂಭವಿಸಿದ ಅಹಿತಕರ ಘಟನೆಗಳಿಂದಾಗಿ ಪರೀಕ್ಷೆ ಸಾಧ್ಯವಾಗದೇ ಸಂಖ್ಯೆ ಗಣನೀಯವಾಗಿ ಕುಸಿದದ್ದು ಮರುದಿನದ ದಾಖಲೆ ಏರಿಕೆಗೆ ಕಾರಣವಾಗಿತ್ತು. ಪ್ರಕರಣಗಳು ಇಳಿಕೆಯಾಗುವ ಸಂದರ್ಭದಲ್ಲಿ ವಿಚಿತ್ರ ಎಂಬಂತೆ ಏರಿಕೆ ಕಂಡುಬಂದಿತ್ತು.
ಡಿಸೆಂಬರ್ 27ರಂದು ದೇಶದಲ್ಲಿ 6242 ಪ್ರಕರಣಗಳು ವರದಿಯಾಗಿದ್ದವು. ಇದಕ್ಕೆ ಹೋಲಿಸಿದರೆ ಎಂಟು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 9 ಪಟ್ಟು ಹೆಚ್ಚಿದಂತಾಗಿದೆ. ದೇಶದಲ್ಲಿ ಸೋಮವಾರ 8.9 ಲಕ್ಷ ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇಕಡ 5ನ್ನು ದಾಟಿದೆ. ಸೋಂಕಿತರ ಸಾವಿನ ಸಂಖ್ಯೆ ಕೂಡಾ ಸ್ವಲ್ಪಮಟ್ಟಿಗೆ ಹೆಚ್ಚಿದ್ದು, 112 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಡಿಸೆಂಬರ್ 23ರ ಬಳಿಕ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ 100ಕ್ಕಿಂತ ಅಧಿಕವಾಗಿದೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ 18466 ಪ್ರಕರಣಗಳು ವರದಿಯಾಗಿದ್ದು, ಹಿಂದಿನ ದಿನ ದಾಖಲಾದ 12160 ಪ್ರಕರಣಕ್ಕಿಂತ ಶೇಕಡ 50ರಷ್ಟು ಅಧಿಕ ಪ್ರಕರಣಗಳು ದೃಢಪಟ್ಟಿವೆ. ಬಂಗಾಳದಲ್ಲಿ 9073 ಪ್ರಕರಣಗಳು ಬೆಳಕಿಗೆ ಬಂದಿದ್ದು, 4759 ಪ್ರಕರಣಗಳು ಕಂಡು ಬಂದ ಕೊಲ್ಕತ್ತಾದಲ್ಲಿ ಪಾಸಿಟಿವಿಟಿ ದರ ಆತಂಕಕಾರಿ ಪ್ರವಾಣದಲ್ಲಿ ಅಂದರೆ ಶೇಕಡ 19ರಷ್ಟಿದೆ. ದೆಹಲಿಯಲ್ಲಿ ಕೂಡಾ 5481 ಹೊಸ ಪ್ರಕರಣಗಳೊಂದಿಗೆ ಪಾಸಿಟಿವಿಟಿ ದರ ಶೇಕಡ 5ನ್ನು ಮೀರಿದೆ.