‘ಉಮ್ರಾವೊ ಜಾನ್’ಒಂದು ನೆನಪು

Update: 2022-01-05 07:44 GMT

ಉಮ್ರಾ - ಒ - ಜಾನ್ - ಎ -ಅದಾ ಎಂಬ ಹೆಸರಿನ 1904ರಲ್ಲಿ ಪ್ರಕಟವಾದ ಕಾದಂಬರಿಯ ಕತೆಯನ್ನಾಧರಿಸಿದ ಸಿನೆಮಾ 1981ರಲ್ಲಿ ‘ಉಮ್ರಾವೋ ಜಾನ್’ ಎಂಬ ಹೆಸರಿನಲ್ಲಿ ತೆರೆ ಕಂಡಿತು. ಇದು ಹಿಂದಿ ಸಿನೆಮಾ ಜಗತ್ತಿನ ಎಂದೂ ಮರೆಯಲಾಗದ ಸಿನೆಮಾಗಳಲ್ಲಿ ಒಂದಾಗಿದ್ದು, ನಟಿ ರೇಖಾಳ ನಿಜ ಪ್ರತಿಭೆಯನ್ನು ಹೊರಹಾಕಿ ಅವಳನ್ನು ಉನ್ನತ ಕಲಾತ್ಮಕ ನಟಿಯರ ಸಾಲಿಗೆ ಸೇರಿಸಿದ ಸಿನೆಮಾವೂ ಹೌದು. ಇದೇ ಕತೆಯನ್ನಾಧರಿಸಿದ ಸಿನೆಮಾಗಳು 1958, 1975ರಲ್ಲಿಯೂ ಬೇರೆ ಬೇರೆ ಹೆಸರಿನಲ್ಲಿ ತೆರೆ ಕಂಡಿದ್ದವು. ಅಲ್ಲದೆ ಇದೇ ಹೆಸರಿನಲ್ಲಿ 2004ರಲ್ಲಿ ಮತ್ತೊಮ್ಮೆ ಈ ಕತೆಯನ್ನು ಸಿನೆಮಾ ಮಾಡಲಾಯಿತು. ಆದರೆ ಕಲಾತ್ಮಕತೆಯಲ್ಲಿ ಇವಾವುವೂ 1981ರಲ್ಲಿ ತೆರೆ ಕಂಡ ಮುಝಫ್ಫರ್ ಅಲಿ ನಿರ್ದೇಶಿಸಿದ, ರೇಖಾ ಅಭಿನಯದ ಈ ಸಿನೆಮಾಕ್ಕೆ ಸರಿ ಸಾಟಿಯಲ್ಲ ಎನ್ನುವುದು ನಿಶ್ಚಿತ. ಸುಮಾರು ಐವತ್ತು ವರ್ಷಗಳ ಅವಧಿಯಲ್ಲಿ ಹೀಗೆ ನಾಲ್ಕು ಬಾರಿ ಒಂದೇ ಕತೆಯನ್ನಾಧರಿಸಿ ಸಿನೆಮಾ ನಿರ್ಮಿಸಲಾಗಿರುವುದಕ್ಕೆ ಈ ಕತೆಯ ಕಾಡುವ ಗುಣವೇ ಕಾರಣವಾಗಿದೆ.

ಅವಳ ತಂದೆಯ ಮೇಲಿನ ದ್ವೇಷದಿಂದ ಪುಟ್ಟ ಹುಡುಗಿಯೊಬ್ಬಳನ್ನು ಗೆಳತಿಯೊಡನೆ ಆಡುತ್ತಿದ್ದಾಗ ಅಪಹರಿಸಿ ಲಕ್ನೋದಲ್ಲಿನ ಶ್ರೀಮಂತ ವೇಶ್ಯಾವಾಟಿಕೆಗೆ ಮಾರಲಾಗುತ್ತದೆ. ಅಲ್ಲಿ ಅವಳು ಸಂಗೀತ - ನೃತ್ಯಗಳಲ್ಲಿ ಪರಿಣತಳಾಗಿ ಒಳ್ಳೆಯ ಕವಯಿತ್ರಿಯೂ ಆಗಿ ಹೊರಹೊಮ್ಮುತ್ತಾಳೆ. ಅಂದಿನ ಕಾಲದ ರಿವಾಜಿನಂತೆ ನೃತ್ಯ ಕೂಟದಲ್ಲಿ ನಗರದ ಸಿರಿವಂತ ಜನರ ಮನರಂಜಿಸುವ ಕೆಲಸವನ್ನು ಮಾಡುವ ಆಕೆ ಪ್ರಸಿದ್ಧಳಾಗುತ್ತಾಳೆ. ಅಲ್ಲಿಯ ಯುವ ನವಾಬನ ಪ್ರೇಮ ಪಾಶಕ್ಕೆ ಸಿಲುಕಿ ಅವನನ್ನು ಮದುವೆಯಾಗಲಾರದ ಹತಾಶ ಸ್ಥಿತಿಯಲ್ಲಿ ನರಳುತ್ತಾಳೆ. ಅನೇಕ ತಿರುವುಗಳನ್ನು ತೆಗೆದು ಕೊಳ್ಳುವ ಅವಳ ಬದುಕು ಕೊನೆಗೆ ಅವಳ ಹುಟ್ಟೂರಿಗೆ ಕರೆದೊಯ್ಯುತ್ತದೆ. ಅಲ್ಲಿ ತನ್ನ ತಾಯಿಯನ್ನು ಅವಳು ಗುರುತಿಸಿದರೂ ಅವಳನ್ನು ತಾಯಿಯೆಂದು ಕರೆಯಲಾಗದ ಅಸಹಾಯಕ ಸ್ಥಿತಿಯಲ್ಲಿ ಬೇಯ ಬೇಕಾಗುತ್ತದೆ. ತನ್ನ ಒಡ ಹುಟ್ಟಿದ ಸಹೋದರನಿಂದಲೇ ‘‘ನೀನು ಕಲಂಕಿತಳಾಗಿ ಬದುಕಿರುವುದಕ್ಕಿಂತ ಸತ್ತಿದ್ದರೆ ಕುಟುಂಬಕ್ಕೆ ಹೆಚ್ಚು ನೆಮ್ಮದಿಯಾಗಿರುತ್ತಿತ್ತು’’ ಎನ್ನುವ ಮಾತನ್ನು ಅವಳು ಕೇಳಬೇಕಾಗುತ್ತದೆ. ತಾಯಿಯನ್ನು ಭೇಟಿಯಾಗಲಾರದೆ ಹತಾಶಳಾಗಿ ಲಕ್ನೋಗೆ ತಿರುಗಿ ಬಂದ ಅವಳಿಗೆ ತಾನು ಪ್ರೀತಿಸಿದ ಸುಲ್ತಾನ ಮದುವೆಯಾಗಿರುವುದನ್ನು ಕಾಣುತ್ತಾಳೆ. ಅವನನ್ನು ಮದುವೆಯಾದವಳು ಬೇರೆ ಯಾರೂ ಆಗಿರದೆ ಚಿಕ್ಕವಳಿದ್ದಾಗ ತನ್ನೊಡನೆ ಅಪಹರಿಸಲ್ಪಟ್ಟ ತನ್ನ ಗೆಳತಿಯೇ ಅವಳೆಂದು ತಿಳಿಯುತ್ತದೆ.

ಉರ್ದು ಕಾದಂಬರಿಯ ಈ ಕತೆ ಯಾರೊಬ್ಬಳ ನಿಜ ಜೀವನದ ಮೇಲೆ ಅವಲಂಬಿಸಿದ ಕತೆಯಾಗಿತ್ತೇ ಎನ್ನುವುದು ಇನ್ನೂ ವಿವಾದಾಸ್ಪದ ವಿಷಯವಾಗಿದೆ. ಕೆಲವರು ಇದು ಕಲ್ಪಿತ ಕತೆ ಮಾತ್ರ ಎಂದು ಅಭಿಪ್ರಾಯ ಪಟ್ಟರೆ, ಇನ್ನು ಕೆಲವರು ಉಮ್ರಾವೊ ಜಾನ್ ಹೆಸರಿನ ಶ್ರೀಮಂತ ವೇಶ್ಯೆ/ ನರ್ತಕಿ ಲಕ್ನೋದಲ್ಲಿ ಜೀವಿಸಿದ್ದರ ಬಗ್ಗೆ ಕೆಲವು ದಾಖಲೆಗಳಿವೆ ಎನ್ನುತ್ತಾರೆ. ಕಾದಂಬರಿಕಾರ ಮಿರ್ಜಾ ಮುಹಮ್ಮದ್ ರುಸುವಾ 1882ರಲ್ಲಿ ಅವಳನ್ನು ಭೇಟಿಯಾಗಿ ಅವಳ ಜೀವನ ಚರಿತ್ರೆಯ ಎಲ್ಲ ಮಾಹಿತಿ ಪಡೆದಿದ್ದ ಎನ್ನಲಾಗುತ್ತದೆ. ಆ ಕಾಲಕ್ಕಾಗಲೇ ಅವಳು ಮುದುಕಿಯಾಗಿದ್ದು ತನ್ನೆಲ್ಲ ಸಂಪತ್ತನ್ನು ಕಳೆದುಕೊಂಡು ಭಿಕಾರಿಯಾಗುವ ಹಂತದಲ್ಲಿದ್ದಳು ಎನ್ನಲಾಗುತ್ತದೆ. ಏನೇ ಇರಲಿ ಈ ಕತೆಗಿರುವ ಕಾಡುವ ಗುಣದಂತೆ ಈ ಸಿನೆಮಾದಲ್ಲಿನ ಹಾಡುಗಳೂ ಕಾಡುವ ಗುಣದ್ದಾಗಿವೆ. ಈ ಗಝಲ್‌ಗಳಿಗೆ ನೃತ್ಯಾಭಿನಯ ಮಾಡಿದ ನಟಿ ರೇಖಾ ಅತ್ಯುತ್ತಮವಾಗಿ ಮತ್ತು ಕಲಾತ್ಮಕವಾಗಿ ಅಭಿನಯಿಸಿದ್ದಾಳೆ.

ಹೀಗೆ ನನ್ನನ್ನು ಕಾಡಿದ ಈ ಸಿನೆಮಾದ ಕೆಲವು ಗಝಲ್‌ಗಳನ್ನು ಅನುವಾದಿಸುವ ಪ್ರಯತ್ನ ಮಾಡಿದ್ದೇನೆ.

ಅನುವಾದ: ‘ಇನ್ ಆಂಖೋ ಕಿ ಮಸ್ತಿ ಮೆ’

ಚಿತ್ರ: ಉಮ್ರಾವೊ ಜಾನ್,

ಲಿರಿಕ್ಸ್: ಶಹರ್ಯಾರ್,

ಸಂಗೀತ: ಖಯ್ಯಮ,

ಗಾಯಕಿ: ಆಶಾ ಭೋಸಲೆ

ಈ ಕಣ್ಣುಗಳ ಮಾದಕತೆಗೆ ಉನ್ಮತ್ತರಾದವರು ಸಾವಿರ

ಈ ಕಣ್ಣುಗಳಿಗೆ ನಂಟುಳ್ಳ ಪ್ರೇಮಕತೆಗಳಿವೆ ಸಾವಿರ

ನನ್ನ ಪ್ರೇಮಕ್ಕಾಗಿ ಲಜ್ಜೆಗೆಟ್ಟವನು ನೀನೊಬ್ಬನೇನಲ್ಲ

ಈ ನಗರದಲ್ಲಿ ನಿನ್ನಂಥ ಮರುಳರಿರುವರು ಸಾವಿರ

ಕಣ್ಣುಗಳಿಂದ ಮದ್ಯ ಕುಡಿಸುವವಳು ಇಲ್ಲಿ ನಾನೊಬ್ಬಳೆ

ಈ ಜಗತ್ತಿನಲ್ಲಿ ಹೇಳಿಕೊಳ್ಳಲಿಕ್ಕೇನು ಪಡಖಾನೆಗಳಿವೆ ಸಾವಿರ

ಈ ದೀಪವನ್ನು ಬಿರುಗಾಳಿಯಿಂದ ಹೆದರಿಸುವೆಯಾ

ಬೆಳಗುವ ಈ ದೀಪಕ್ಕೆ ಮುತ್ತುವ ಪತಂಗಗಳಿವೆ ಸಾವಿರ

Writer - ಶ್ರೀಪಾದ ಹೆಗ್ಡೆ

contributor

Editor - ಶ್ರೀಪಾದ ಹೆಗ್ಡೆ

contributor

Similar News