70,000 ಕುರ್ಚಿಗಳನ್ನು ಹಾಕಿದ್ದರೂ ಬಂದದ್ದು ಕೇವಲ 700 ಜನ, ನಾವೇನು ಮಾಡಲು ಸಾಧ್ಯ? ಎಂದ ಪಂಜಾಬ್‌ ಸಿಎಂ

Update: 2022-01-06 09:51 GMT

ಹೊಸದಿಲ್ಲಿ: ಬುಧವಾರ ಪ್ರಧಾನಿ ನರೇಂದ್ರ ಮೋದಿಯ ಪಂಜಾಬ್ ಭೇಟಿ ವೇಳೆ ಸಂಭವಿಸಿದ ʼಭದ್ರತಾ ಲೋಪ' ಇದೀಗ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.  ಈ ಭದ್ರತಾ ಲೋಪಕ್ಕೆ ಪಂಜಾಬ್‍ನ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಬಿಜೆಪಿ ನಾಯಕರು ದೂರುತ್ತಿದ್ದರೆ ಪ್ರಧಾನಿಯ ಫಿರೋಝ್‍ಪುರ್ ರ್ಯಾಲಿಗೆ ಕೆಲವೇ ಕೆಲವು ಜನರು ಬಂದಿದ್ದರಿಂದ  ಕಾರ್ಯಕ್ರಮ ರದ್ದುಗೊಂಡಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.

ಪ್ರಧಾನಿಯ ರ್ಯಾಲಿ ರದ್ದಾಗಿರುವ ಕುರಿತು ಅಲ್ಲಿನ ವೇದಿಕೆಯಲ್ಲಿ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದ ನಿಮಿಷದಿಂದ ವಿವಾದ ಏರ್ಪಟ್ಟಿತ್ತು.  ಆಗ ಸಚಿವರು ರ್ಯಾಲಿ ರದ್ದುಗೊಳ್ಳಲು ಕಾರಣ ನೀಡಿರಲಿಲ್ಲ. ಆದರೆ ಅಲ್ಲಿದ್ದ ಪಂಜಾಬ್‍ನ ಮಾಜಿ ಸೀಎಂ ಅಮರೀಂದರ್ ಸಿಂಗ್ ಪ್ರತಿಕ್ರಿಯಿಸಿ  ಕಾಂಗ್ರೆಸ್ ಪಕ್ಷ ರಾಜ್ಯದ ಭದ್ರತೆಗೆ ಸಂಬಂಧಿಸಿದಂತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದ್ದರು.

ಈ ನಡುವೆ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರಂತೂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರಧಾನಿಯ ರ್ಯಾಲಿಗೆಂದು 70,000 ಕುರ್ಚಿಗಳನ್ನು ಹಾಕಿದ್ದರೂ ಕೇವಲ 700 ಜನರು ಬಂದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಹೇಳುವ ಮೂಲಕ ರ್ಯಾಲಿಗೆ ಜನರಿರಲಿಲ್ಲವೆಂದೇ ಪ್ರಧಾನಿ ಕಾರ್ಯಕ್ರಮ ರದ್ದಾಗಿದೆ ಎಂದು ಪರೋಕ್ಷವಾಗಿ ಹೇಳುವ ಯತ್ನ ನಡೆಸಿದ್ದಾರೆ.

ಪ್ರತಿಭಟನಾನಿರತ ರೈತರು ಪ್ರಧಾನಿ ರ್ಯಾಲಿ ಸ್ಥಳಕ್ಕೆ ತೆರಳುವುದಕ್ಕೆ ಬಿಜೆಪಿ ಬೆಂಬಲಿಗರಿಗೆ ಅಡ್ಡಿಯುಂಟು ಮಾಡಿದ್ದಾರೆಂಬ ಆರೋಪ, ಜತೆಗೆ ರ್ಯಾಲಿ ಸ್ಥಳದಲ್ಲಿನ ಖಾಲಿ ಕುರ್ಚಿಗಳ ಚಿತ್ರಗಳು ವೈರಲ್ ಆಗಿರುವ ನಡುವೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸರಣಿ ಟ್ವೀಟ್ ಮಾಡಿ ಜನರು ರ್ಯಾಲಿಯಲ್ಲಿ ಭಾಗವಹಿಸುವುದರಿಂದ ತಡೆಯುವಂತೆ ರಾಜ್ಯ ಪೊಲೀಸರಿಗೆ ಸೂಚಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಜತೆಗೆ ಸೀಎಂ ಚನ್ನಿ ಅವರು ಫೋನ್ ಕೂಡ ಎತ್ತಲು ಸಿದ್ಧರಿರಲಿಲ್ಲ ಎಂದೂ ಅವರು ದೂರಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಪತ್ರಿಕಾಗೋಷ್ಠಿ ನಡೆಸಿ ಪ್ರಧಾನಿಗೆ ಸಂಬಂಧಿಸಿದಂತೆ ಇಂತಹ ಘಟನೆ ಭಾರತದ ಇತಿಹಾಸದಲ್ಲಿಯೇ ನಡೆದಿಲ್ಲ ಎಂದರೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿ ಘಟನೆಗೆ ಪಂಜಾಬ್ ಸರಕಾರ ಹೊಣೆ ಎಂದು ಹೇಳಿದರು.

ತರುವಾಯ ಕಿಸಾನ್ ಮೋರ್ಚಾ ನಾಯಕ ಡಾ ದರ್ಶನ್ ಪಾಲ್ ಸಿಂಗ್ ಮಾತನಾಡಿ ಪ್ರಧಾನಿಯ ರ್ಯಾಲಿಗೆ ಅಡ್ಡಿಯುಂಟು ಮಾಡುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಸಾಮಾಜಿಕ ತಾಣದಾದ್ಯಂತ ಈ ಪ್ರಕರಣದ ಕುರಿತು ವ್ಯಂಗ್ಯ ವ್ಯಕ್ತವಾಗುತ್ತಿದೆ. ಕಾಮೆಡಿಯನ್‌ ಕುನಾಲ್‌ ಕಾಮ್ರಾ ಅಂತೂ, "ಭಾರತವು ನಿಮಗೆ ಅಭದ್ರವೆನಿಸುತ್ತಿದೆ ಎಂದಾದರೆ ಪಾಕಿಸ್ತಾನಕ್ಕೆ ತೆರಳಬಹುದು" ಎಂದು ಕಟಕಿಯಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News