ವಾರಣಾಸಿಯಲ್ಲಿ 'ಹಿಂದೂ ಅಲ್ಲದವರಿಗೆ ಪ್ರವೇಶವಿಲ್ಲ' ಎಂಬ ಪೋಸ್ಟರ್ ಗಳನ್ನು ಅಂಟಿಸುತ್ತಿರುವ ಹಿಂದುತ್ವ ಕಾರ್ಯಕರ್ತರು
ಲಕ್ನೋ: ಹಿಂದು ಸಂಘಟನೆಗಳಾದ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳದ ಸದಸ್ಯರೆನ್ನಲಾದ ಕೆಲವರು ವಾರಣಾಸಿಯ ಘಾಟ್‍ಗಳ ಸುತ್ತ ಪೋಸ್ಟರುಗಳನ್ನು ಅಂಟಿಸುತ್ತಿದ್ದಾರೆ. "ಹಿಂದುಗಳಲ್ಲದವರು ವಾರಣಾಸಿಯ ಗಂಗಾ ನದಿ ದಂಡೆಗೆ ಭೇಟಿ ನೀಡುವುದನ್ನು ನಿಷೇದಿಸಲಾಗಿದೆ" ಎಂದು ಈ ಪೋಸ್ಟರುಗಳಲ್ಲಿ ಬರೆಯಲಾಗಿದೆ ಎಂದು thewire.in ವರದಿ ಮಾಡಿದೆ.
ಸಂಘಟನೆಗಳ ನಾಯಕರೆಂದು ತಿಳಿಯಲಾದ ಕೆಲವರು ಈ ಪೋಸ್ಟರ್ ಗಳನ್ನು ಅಂಟಿಸುತ್ತಿರುವ ಚಿತ್ರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. "ಇದೊಂದು ಎಚ್ಚರಿಕೆ, ಮನವಿಯಲ್ಲ" ಎಂದೂ ಪೋಸ್ಟರ್‍ನಲ್ಲಿ ಬರೆಯಲಾಗಿದೆ.
Photo: Thewire.in
ಪ್ರಧಾನಿ ನರೇಂದ್ರ ಮೋದಿಯ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಪಂಚಗಂಗಾ ಘಾಟ್, ರಾಮ್ ಘಾಟ್, ಅಸ್ಸೀ ಘಾಟ್, ಮಣಿಕರ್ಣಿಕಾ ಘಾಟ್, ದಶಾಶ್ವಮೇಧ ಘಾಟ್ ಮತ್ತಿತರೆಡೆ ಪೋಸ್ಟರುಗಳಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿವೆ. ಮುಂದೆ ಇಂತಹ ಪೋಸ್ಟರ್‍ಗಳನ್ನು ವಾರಣಾಸಿಯ ದೇವಸ್ಥಾನಗಳಲ್ಲೂ ಹಾಕಲಾಗುವುದು ಎಂದು ಕೆಲ ಹಿಂದು ನಾಯಕರು ಹೇಳಿಕೊಂಡಿದ್ದಾರೆ.
"ಈ ಪೋಸ್ಟರ್‍ಗಳು ಒಂದು ಮನವಿಯಲ್ಲ, ಬದಲು ಸನಾತನ ಧರ್ಮದ ಅನುಯಾಯಿಗಳಲ್ಲದವರಿಗೆ ಎಚ್ಚರಿಕೆ, ಈ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವವರಿಗೆ ಹಿಂದು ಧರ್ಮದ ಮೇಲೆ ನಂಬಿಕೆಯಿದ್ದರೆ ಅವರಿಗೆ ಸ್ವಾಗತವಿದೆ, ಇಲ್ಲದೇ ಇದ್ದರೆ ನಾವು ಅವರನ್ನು ಇಲ್ಲಿಂದ ಹೊರಕ್ಕೆ ಕಳುಹಿಸುತ್ತೇವೆ" ಎಂದು ವಿಹಿಂಪ ವಾರಣಾಸಿ ಘಟಕದ ಕಾರ್ಯದರ್ಶಿ ರಾಜನ್ ಗುಪ್ತಾ ಹೇಳುತ್ತಾರೆ.
Photo: Thewire.in
ಈ ವಿವಾದಾತ್ಮಕ ಪೋಸ್ಟರ್‍ಗಳ ಕುರಿತಂತೆ ಪೊಲೀಸರು ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ. ಆದರೆ ಹಿರಿಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.