ಪ್ರಧಾನಿ ಭದ್ರತಾಲೋಪ ಪ್ರಕರಣ: ʼಅಪರೂಪದಲ್ಲಿ ಅಪರೂಪದ ಘಟನೆʼ ಎಂದು ಸುಪ್ರೀಂಕೋರ್ಟ್‌ ಗೆ ತಿಳಿಸಿದ ಕೇಂದ್ರ

Update: 2022-01-07 06:42 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತಾ ಲೋಪವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾದ "ಅಪರೂಪದಲ್ಲಿ ಅಪರೂಪದ" ಪ್ರಕರಣವಾಗಿದೆ ಎಂದು ಕೇಂದ್ರವು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ ಎಂದು Barandbench ವರದಿ ಮಾಡಿದೆ.

ಮೋದಿಯವರು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡುವುದನ್ನು ರದ್ದುಪಡಿಸಿದ ಬುಧವಾರದ ಘಟನೆಯು ಭಾರೀ ವಿವಾದಕ್ಕೆ ಕಾರಣವಾಯಿತು. ಜಿಲ್ಲೆಯ ಹುಸೇನಿವಾಲಾ ಗ್ರಾಮದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದರಿಂದ ಪ್ರಧಾನಿ ಬೆಂಗಾವಲು ಪಡೆ ಸುಮಾರು 15 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡಿತ್ತು.

ಕೇಂದ್ರವು ಇದನ್ನು "ಪ್ರಮುಖ ಭದ್ರತಾ ಲೋಪ" ಎಂದು ಬಣ್ಣಿಸಿದೆ. ಆದರೆ, ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ ಮತ್ತು ಪ್ರಧಾನಿಯ ಭದ್ರತೆಗೆ ಯಾವುದೇ ಬೆದರಿಕೆ ಇರಲಿಲ್ಲ ಎಂದು ಹೇಳಿದ್ದಾರೆ. ಆದರೂ ಘಟನೆ ನಡೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಶುಕ್ರವಾರದ ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಯಾವುದೇ ಬೆದರಿಕೆ ಗ್ರಹಿಕೆಯನ್ನು ಪರಿಶೀಲಿಸಲು ಪ್ರಧಾನಿಯ ವಾಹನದ ಮುಂದೆ ಕಾರೊಂದು ಚಲಿಸುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನಿಯೋಜಿತ ಕಾರಿನಲ್ಲಿರಬೇಕಾಗಿದ್ದ ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಟನಾಕಾರರೊಂದಿಗೆ ಚಹಾ ಸೇವಿಸುವುದನ್ನು ನೋಡಿದೆ ಎಂದು ಮೆಹ್ತಾ ಆರೋಪಿಸಿದ್ದಾರೆ.

ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಘಟನೆಯು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಲ್ಲ ಮತ್ತು ವೃತ್ತಿಪರವಾಗಿ ತನಿಖೆ ಮಾಡಬೇಕಾಗಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ರಾಜ್ಯವು ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News