×
Ad

ತನ್ನ ವಿರುದ್ಧ ಪೆಗಾಸಸ್ ಗೂಢಚರ್ಯೆ ಶಂಕೆ ವ್ಯಕ್ತಪಡಿಸಿದ ಭೀಮಾ ಕೊರೆಗಾಂವ್ ಪ್ರಕರಣದ ವಕೀಲ

Update: 2022-01-10 16:12 IST

ಹೊಸದಿಲ್ಲಿ: ಪೆಗಾಸಸ್‌ ಸ್ಪೈವೇರ್‌ ಬಳಸಿ ತನ್ನ ಮೊಬೈಲ್‌ ಫೋನ್‌ನನ್ನು ಹ್ಯಾಕ್‌ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿ ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿಗಳನ್ನು ಪ್ರತಿನಿಧಿಸುವ ವಕೀಲ ನಿಹಾಲ್‌ ಸಿಂಗ್‌ ರಾಥೋಡ್‌ ಸುಪ್ರೀಂ ಕೋರ್ಟ್‌ ನಿಯೋಜಿಸಿರುವ ಸಮಿತಿಗೆ ದೂರು ನೀಡಿದ್ದಾರೆ. 

ಇಸ್ರೇಲಿ ಮೂಲದ ಮಿಲಿಟರಿ ದರ್ಜೆಯ ಪೆಗಾಸಸ್ ಸ್ಪೈವೇರ್‌ ಬಳಸಿ ದೇಶದ ಹಲವಾರು ಪತ್ರಕರ್ತರ, ಸಾಮಾಜಿಕ ಹೋರಾಟಗಾರರ, ರಾಜಕೀಯ ನಾಯಕರ ಮೊಬೈಲ್‌ ಫೋನ್‌ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ಆರೋಪ ಕೇಂದ್ರ ಸರ್ಕಾರದ ಮೇಲಿದೆ. 

ಈ ಹಿನ್ನೆಲೆಯಲ್ಲಿ ತಮ್ಮ ಫೋನ್‌ಗಳು ಹ್ಯಾಕ್‌ಗೊಳಗಾಗಿವೆ ಎಂಬ ಶಂಕೆ ಇರುವ ನಾಗರಿಕರು, ಸ್ಪೈವೇರ್‌ ತನಿಖೆಗೆ ರಚಿಸಿರುವ ಸಮಿತಿಗೆ ಪತ್ರ ಬರೆಯುವಂತೆ ಸುಪ್ರೀಂ ಕೋರ್ಟ್‌ ಜನವರಿ 2 ರಂದು ಹೇಳಿತ್ತು. ಕೋರ್ಟ್‌ ಹೇಳಿಕೆಯಂತೆ ರಾಥೋಡ್‌ ತನಿಖಾ ಸಮಿತಿಗೆ ಈಮೇಲ್ ಮಾಡಿದ್ದು, ಪೆಗಾಸಸ್‌ ಬಳಸಿ ತನ್ನ ಮೊಬೈಲ್‌ ಹ್ಯಾಕ್‌ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ಪೆಗಾಸಸ್‌ ಬಳಕೆ ಮಾಡಿ ವಾಟ್ಸಾಪ್‌ ಅಪ್ಲಿಕೇಷನ್‌ ಪ್ರವೇಶಿಸುವ ಮೂಲಕ ನನ್ನ ಮೊಬೈಲ್‌ ಅನ್ನು ಹ್ಯಾಕ್‌ ಮಾಡಲಾಗಿದೆ. ನನ್ನ ಫೋನ್‌ ಹ್ಯಾಕ್‌ ಮಾಡಲಾಗಿದೆ ಎಂದು ವಾಟ್ಸಾಪ್‌ನಿಂದ ಅಧಿಕೃತ ಸಂದೇಶ ಬಂದಿದೆ. ಈ ಸಂದೇಶ ನನಗೆ ವಾಟ್ಸಾಪ್‌ ಮೂಲಕವೇ ಬಂದಿದ್ದು, ಅದನ್ನು (ಆ ಸಂದೇಶವನ್ನು) ಹಾಗೆಯೇ ಉಳಿಸಿಕೊಂಡಿದ್ದೇನೆ ಎಂದು ವಕೀಲ ರಾಥೋಡ್‌ ತಿಳಿಸಿದ್ದಾರೆ. 

ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿಗಳಲ್ಲಿ ಓರ್ವರಾದ ಸಾಮಾಜಿಕ ಹೋರಾಟಗಾರ ರೋನಾ ವಿಲ್ಸನ್‌ ಫೋನ್‌ ಅನ್ನು ಪೆಗಾಸಸ್‌ ಸ್ಪೈವೇರ್‌ ಬಳಸಿ ಹ್ಯಾಕ್‌ ಮಾಡಲಾಗಿತ್ತು. ಅವರ ಬಂಧನಕ್ಕೆ ಮೊದಲು ಅಂದರೆ, 2018 ರ ಜೂನ್‌ನಲ್ಲಿ ಅವರ ಫೋನ್‌ನನ್ನು ಹ್ಯಾಕ್‌ ಮಾಡಲಾಗಿತ್ತು ಎಂದು 'ದಿ ಗಾರ್ಡಿಯನ್‌' ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಥೋಡ್‌ ಅವರ ಫೋನ್‌ ಕೂಡಾ ಹ್ಯಾಕ್‌ ಆಗಿದೆ ಎಂಬ ಶಂಕೆಯು ಸಾಕಷ್ಟು ಗಮನ ಸೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News