ಸೈನಾ ನೆಹ್ವಾಲ್‌ ವಿರುದ್ಧ ಸಿದ್ದಾರ್ಥ್‌ ವಿವಾದಾತ್ಮಕ ಟ್ವೀಟ್: ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹ

Update: 2022-01-10 14:43 GMT
Photo: Photo: Siddharth, Saina/Instagram

ಹೊಸದಿಲ್ಲಿ: ಬ್ಯಾಡ್ಮಿಂಟನ್‌ ಚಾಂಪಿಯನ್‌ ಸೈನಾ ನೆಹ್ವಾಲ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ ಮಾಡಿದ್ದ ನಟ ಸಿದ್ದಾರ್ಥ್‌ ಟ್ವೀಟ್‌ ಸಾಕಷ್ಟು ವಿವಾದ ಸೃಷ್ಟಿಸಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸಿದ್ದಾರ್ಥ್‌ ಟ್ವೀಟ್‌ ಅನ್ನು ಮಹಿಳಾ ವಿರೋಧಿ ಎಂದು ಪರಿಗಣಿಸಿದ್ದು, ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸಿದ್ದಾರ್ಥ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ರೇಖಾ ಶರ್ಮ, ಸಿದ್ದಾರ್ಥ್‌ ಅವರನ್ನು ಉಲ್ಲೇಖಿಸಿ, ʼಈ ಮನುಷ್ಯನ ಟ್ವಿಟರ್‌ ಖಾತೆ ಇನ್ನೂ ಯಾಕೆ ಚಾಲ್ತಿಯಲ್ಲಿದೆ. ಈ ಮನುಷ್ಯನಿಗೆ ತಕ್ಕ ಪಾಠ ಕಲಿಸಬೇಕು" ಎಂಬರ್ಥದಲ್ಲಿ ಬರೆದಿದ್ದಾರೆ. 

ಪ್ರಧಾನಮಂತ್ರಿ ಅವರಿಗೆ ಪಂಜಾಬಿನಲ್ಲಿ ಉಂಟಾದ ಭದ್ರತಾ ಲೋಪದ ಕುರಿತಂತೆ ಟ್ವೀಟ್‌ ಮಾಡಿದ್ದ ಸೈನಾ, “ಯಾವುದೇ ಒಂದು ದೇಶ ತನ್ನ ಪ್ರಧಾನಿಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡರೆ ಆ ದೇಶವನ್ನು ಸುರಕ್ಷಿತ ದೇಶವೆಂದು ಕರೆಯಲಾಗುವುದಿಲ್ಲ. ಹೇಡಿತನದಿಂದ ಪ್ರಧಾನಿಯನ್ನು ದಾಳಿ ಮಾಡಿದ ಅರಾಜಕತಾವಾದಿಗಳ ಕೃತ್ಯವನ್ನು ನಾನು ಖಂಡಿಸುತ್ತೇನೆ. ಭಾರತ ಪ್ರಧಾನಿ ಜೊತೆ ನಿಲ್ಲಲಿದೆ ಎಂದು ಸೈನಾ ಟ್ವೀಟ್‌ ಹಾಕಿದ್ದರು. 

ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಸಿದ್ದಾರ್ಥ್‌, ʼಸೂಕ್ಷ್ಮವಾಗಿರುವ ವಿಶ್ವ ಕಾಕ್‌ ಚಾಂಪಿಯನ್‌, ನಾವೀಗಾಗಲೇ ನಮ್ಮ ರಕ್ಷಕರನ್ನು ಹೊಂದಿದ್ದೇವೆ, ದೇವರಿಗೆ ದನ್ಯವಾದ, ರಿಹಾನ್ನ ನಿಮಗೆ ನಾಚಿಕೆಯಾಗಬೇಕು.” ಎಂದು ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದರು. 

ಪ್ರಧಾನಿ ಮೋದಿ ಹಾಗೂ ಹಿಂದುತ್ವವನ್ನು ಸತತವಾಗಿ ಟೀಕಿಸುತ್ತಾ ಬಂದ ಸಿದ್ಧಾರ್ಥ್‌ ವಿರುದ್ಧ ಬಲಪಂಥೀಯರಿಗೆ ಅಸಮಾಧಾನವಿದೆ. ಸೈನಾ ನೆಹ್ವಾಲ್‌ ಹಾಗೂ ಬಿಜೆಪಿ ಸಂಬಂಧದ ಹಿನ್ನೆಲೆಯಲ್ಲಿ ಸಿದ್ದಾರ್ಥ್‌ ವಿರುದ್ಧದ ಮಹಿಳಾ ಆಯೋಗದ ನಿರ್ಧಾರವು ರಾಜಕೀಯ ಪ್ರೇರಿತ ಎಂಬುದು ಹಲವರ ಅನುಮಾನಕ್ಕೆ ಕಾರಣವಾಗಿದೆ. 

ಅದಾಗ್ಯೂ, ಶಿವಸೇನೆ  ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಸಿದ್ದಾರ್ಥ್‌ ಟ್ವೀಟ್‌ಗೆ ಖಂಡನೆ ವ್ಯಕ್ತಪಡಿಸಿದ್ದು, ಈ ಟ್ವೀಟ್ ಅರ್ಥಪೂರ್ಣವಾದ್ದಲ್ಲ, ಯಾರಿಗೂ ಬಳಸಲು ಯೋಗ್ಯವಲ್ಲದ ಭಾಷೆ ಇದು. ಯಾವುದೇ ಭಿನ್ನಾಭಿಪ್ರಾಯ ಇರಲಿ, ಮಾತನಾಡುವಾಗ ಸಭ್ಯತೆ ಇರಬೇಕು. ಸೈನಾ ನೆಹ್ವಾಲ್ ನಮ್ಮ ದೇಶದ ಹೆಮ್ಮೆಯ ಕ್ರೀಡಾಪಟು, ಅವರಿಗೆ ರಾಜಕೀಯ ಮಾಡುವ ಎಲ್ಲಾ ಹಕ್ಕಿದೆ.   ಅವರ ಅಭಿಪ್ರಾಯವನ್ನು ಒಪ್ಪದಿದ್ದಲ್ಲಿ ಚರ್ಚೆ ಮಾಡಿ, ಆದರೆ ಅವರ ಆಲೋಚನೆ ಮತ್ತು ಚಿಂತನೆಗಳನ್ನು ಕೀಳಾಗಿ ಕಾಣುವುದು ಸರಿಯಲ್ಲ ಎಂದು ಟ್ವೀಟ್‌ ಮಾಡಿದ್ದರು. 

ತನ್ನ ಟ್ವೀಟ್‌ ವಿವಾದವಾಗುತ್ತಿದ್ದಂತೆ ಸ್ಪಷ್ಟೀಕರಣ ನೀಡಿದ ಸಿದ್ದಾರ್ಥ್‌, ನನ್ನ ಟ್ವೀಟ್‌ ಉದ್ದೇಶವನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ, ಅವಹೇಳನಕಾರಿಯಾಗಿ ಏನೂ ಹೇಳಿಲ್ಲ. ನಾನು ಹೇಳಿದ್ದನ್ನು ವಿಭಿನ್ನವಾಗಿ ಅರ್ಥೈಸದಿರಿ ಎಂದು ಕೈ ಮುಗಿಯುವ ಇಮೋಜಿಯೊಂದಿಗೆ ಇನ್ನೊಂದು ಟ್ವೀಟ್‌ ಮಾಡಿದ್ದಾರೆ. ಆಂಗ್ಲ ಭಾಷೆಯಲ್ಲಿ ಕಾಕ್‌ ಗೆ ಪುರುಷನ ಮರ್ಮಾಂಗ ಎಂಬ ಇನ್ನೊಂದು ಅರ್ಥವೂ ಇದ್ದು, ಸೈನಾ ನೆಹ್ವಾಲ್‌ ಅವರನ್ನು ಕಾಕ್‌ ಚಾಂಪಿಯನ್‌ ಎಂದು ಸಿದ್ದಾರ್ಥ್‌ ಬಳಸಿರುವುದು ಲೈಂಗಿಕ ಕೀಳು ಅಭಿರುಚಿಯಿಂದ ಎಂದು ಕೆಲವು ನೆಟ್ಟಿಗರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News