ʼಆಯುಷ್ ಕೋರ್ಸ್‌ ಗಳಿಗೆ ನೀಟ್‌ʼ ವಿರುದ್ಧ ಅರ್ಜಿಯ ಕುರಿತು ಕೇಂದ್ರದ ನಿಲುವು ಕೋರಿದ ದಿಲ್ಲಿ ಹೈಕೋರ್ಟ್

Update: 2022-01-10 15:33 GMT

ಹೊಸದಿಲ್ಲಿ,ಜ.10: ಆಯುರ್ವೇದ,ಹೋಮಿಯೋಪತಿ,ಯುನಾನಿ,ಸಿದ್ಧ ಮತ್ತು ಸೋವಾ ರಿಗ್ಪಾ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯನ್ನು ಪ್ರಶ್ನಿಸಿ ಆರು ಆಯುಷ್ ಆಕಾಂಕ್ಷಿಗಳು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿದೆ.

ಕೇಂದ್ರ,ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಹೊರಡಿಸಿದ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ನೇತೃತ್ವದ ಪೀಠವು,ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಆಯುಷ್ ವೈದ್ಯರಿಗೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಅಲೋಪತಿ ವೈದ್ಯರು ಸಲ್ಲಿಸಿರುವ ಅರ್ಜಿಯೊಂದಿಗೆ ಈ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ತಿಳಿಸಿತು.

ಒಂದೆಡೆ ‘ನಾವು ಸ್ಪರ್ಧಾತ್ಮಕರಾಗಿದ್ದೇವೆ ’ಎಂದು ನೀವು ಹೇಳುತ್ತಿದ್ದೀರಿ,ಇನ್ನೊಂದೆಡೆ ನೀಟ್‌ಗೆ ಹಾಜರಾಗುವಂತೆ ಸೂಚಿಸಿದರೆ ‘ನಾವು ಸ್ಪರ್ಧಾತ್ಮಕರಾಗಿಲ್ಲ’ಎಂದು ಹೇಳುತ್ತಿದ್ದೀರಿ ಎಂದು ಅರ್ಜಿದಾರರ ಪರ ವಕೀಲರನ್ನು ಕುಟುಕಿದ ಪೀಠವು,ಆಯುಷ್ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಬಯಸುತ್ತಾರೆ ಮತ್ತು ಈಗ ತಾವು ಬೇರೆಯೇ ಎಂದು ಅವರು ಹೇಳುತ್ತಿದ್ದಾರೆ. ಇಬ್ಬಗೆ ನಿಲುವನ್ನು ನೋಡಿ. ಎರಡೂ ವಿಷಯಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.

ತನ್ನ ಕಕ್ಷಿದಾರರು ನೀಟ್‌ಗೆ ವಿರುದ್ಧವಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಅಲೋಪತಿ ವೈದ್ಯರ ಅರ್ಜಿಯ ವಿವರಗಳನ್ನು ಒದಗಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರದ ಪರ ನ್ಯಾಯವಾದಿ ಮೋನಿಕಾ ಅರೋರಾ ಅವರಿಗೆ ಸೂಚಿಸಿತು.

ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಕಾಯ್ದೆ, 2020 ಮತ್ತು ಹೋಮಿಯೋಪತಿ ರಾಷ್ಟ್ರೀಯ ಆಯೋಗ ಕಾಯ್ದೆ, 2020ರ ವ್ಯಾಪ್ತಿಗೊಳಪಟ್ಟ ವೈದ್ಯಕೀಯ ಕಾಲೇಜುಗಳಲ್ಲಿ ಆಯುಷ್ ಕೋರ್ಸ್‌ಗಳನ್ನು ಮಾಡಲು ನೀಟ್ ಪರೀಕ್ಷೆಗೆ ಹಾಜರಾಗುವಂತೆ ತಮಗೆ ಸೂಚಿಸಿರುವುದು ಭಾರತೀಯ ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News