ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ವಿತರಣೆ ಕುರಿತು ಪ.ಬಂಗಾಳಕ್ಕೆ ಸುಪ್ರೀಂ ಕೋರ್ಟ್ ತರಾಟೆ

Update: 2022-01-10 15:42 GMT

ಹೊಸದಿಲ್ಲಿ,ಜ.10: ರಾಜ್ಯದಲ್ಲಿಯ ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ಧಾನ್ಯಗಳ ವಿತರಣೆ ಕುರಿತು ಸ್ಥಿತಿಗತಿ ವರದಿಯನ್ನು ಸಲ್ಲಿಸದ್ದಕ್ಕಾಗಿ ಸೋಮವಾರ ಪಶ್ಚಿಮ ಬಂಗಾಳ ಸರಕಾರವನ್ನು ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ವೃತ್ತಿ ಯಾವುದೇ ಇದ್ದರೂ ಎಲ್ಲ ಪ್ರಜೆಗಳೂ ಮೂಲಭೂತ ಹಕ್ಕುಗಳ ಖಾತರಿಯನ್ನು ಹೊಂದಿದ್ದಾರೆ ಎಂದು ಅಭಿಪ್ರಾಯಿಸಿತು.

ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬದುಕುಳಿಯುವ ವಿಷಯವಾಗಿ ಇದಕ್ಕೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ,ಆದರೆ ರಾಜ್ಯ ಸರಕಾರವು ಈ ವಿಷಯವನ್ನು ಹಗುರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು,‘ನಾವು ನಿಮಗೆಷ್ಟು ಸಲ ಹೇಳಬೇಕು? ನಾವು ನಿಮ್ಮ ವಿರುದ್ಧ ಖಂಡನೆಗಳನ್ನು ಹೊರಡಿಸುತ್ತೇವೆ. ಹಿಂದಿನ ದಿನಾಂಕದಂದು ಹೊರಡಿಸಿದ್ದ ಆದೇಶವನ್ನು ನೀವು ನೋಡಿದ್ದೀರಾ? ನೀವು ಅಫಿಡವಿಟ್ ಏಕೆ ಸಲ್ಲಿಸುತ್ತಿಲ್ಲ? ಇತರ ಎಲ್ಲ ರಾಜ್ಯಗಳು ಅಫಿಡವಿಟ್‌ಗಳನ್ನು ಸಲ್ಲಿಸುತ್ತಿರುವಾಗ ಹಾಗೆ ಮಾಡಲು ಪ.ಬಂಗಾಳಕ್ಕೆ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿತು.

‘ನಾವು ಕಠಿಣ ನಿಲುವನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಮಾತ್ರಕ್ಕೆ ನೀವು ನಮ್ಮನ್ನು ಲಘುವಾಗಿ ಪರಿಗಣಿಸಬಹುದು ಎಂದು ಅರ್ಥವಲ್ಲ. ಈ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ ಎಂದಷ್ಟೇ ನಾವು ನಿಮಗೆ ಸೂಚಿಸಬಹುದು. ಪಡಿತರವನ್ನು ಒದಗಿಸಲಾಗುತ್ತಿಲ್ಲ ಮತ್ತು ಬದುಕುಳಿಯುವುದು ಸಮಸ್ಯೆಯಾಗಿದೆ ಎಂಬ ಕಾರಣಕ್ಕೆ ಈ ಪ್ರಕರಣವನ್ನು ನಾವು ಗಂಭೀರವಾಗಿ ನೋಡುತ್ತಿದ್ದೇವೆ. ಆದ್ದರಿಂದ ನೀವು ಇದನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ’ ಎಂದು ಪೀಠವು ಹೇಳಿತು.

ರಾಜ್ಯ ಸರಕಾರವು ಖಾದ್ಯ ಸಾಥಿ ಯೋಜನೆಯನ್ನು ಆರಂಭಿಸಿದೆ ಮತ್ತು ಅಗತ್ಯವುಳ್ಳವರಿಗೆ ಪಡಿತರ ಧಾನ್ಯಗಳನ್ನು ವಿತರಿಸುತ್ತಿದೆ ಎಂದು ಪ.ಬಂಗಾಳ ಪರ ವಕೀಲರು ತಿಳಿಸಿದರಾದರೂ ಅದರಿಂದ ಪ್ರಭಾವಿತಗೊಳ್ಳದ ಪೀಠವು,ತಾನು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿ ಅಫಿಡವಿಟ್‌ನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಪ.ಬಂಗಾಳ ಸರಕಾರಕ್ಕೆ ತಾಕೀತು ಮಾಡಿತು.

ಲೈಂಗಿಕ ಕಾರ್ಯಕರ್ತೆಯರಿಗೆ ಮತದಾರರ ಗುರುತಿನ ಚೀಟಿ,ಆಧಾರ್ ಮತ್ತು ಪಡಿತರ ಚೀಟಿಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಹಾಗೂ ಅವರಿಗೆ ಪಡಿತರ ಧಾನ್ಯಗಳನ್ನು ಒದಗಿಸುತ್ತಿರುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರ,ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡಿತ್ತು.

 ಕೋವಿಡ್ ಸಾಂಕ್ರಾಮಿಕದಿಂದಾಗಿ ಲೈಂಗಿಕ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು ಅವರ ಏಳಿಗೆಗಾಗಿ ಆದೇಶಗಳನ್ನು ಹೊರಡಿಸುತ್ತಲೇ ಇದೆ. ಲೈಂಗಿಕ ಕಾರ್ಯಕರ್ತೆಯರ ಗುರುತಿನ ಪುರಾವೆಗಾಗಿ ಒತ್ತಾಯಿಸದೆ ಅವರಿಗೆ ಪಡಿತರವನ್ನು ಒದಗಿಸುವಂತೆ ಅದು ಕಳೆದ ವರ್ಷದ ಸೆಪ್ಟಂಬರ್ 29ರಂದು ಕೇಂದ್ರ ಮತ್ತು ಇತರರಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News