ತಮಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಹಲವಾರು ವಕೀಲರಿಂದ ದೂರು
ಹೊಸದಿಲ್ಲಿ,ಜ.10: ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಉಂಟಾಗಿದ್ದ ಲೋಪಕ್ಕೆ ಸಂಬಂಧಿಸಿದ ಪ್ರಕರಣದ ಕುರಿತಂತೆ ನ್ಯಾಯಾಧೀಶರಿಗೆ ಬೆದರಿಕೆಯನ್ನೊಡ್ಡಿ ಸೋಮವಾರ ಹಲವಾರು ದೂರವಾಣಿ ಕರೆಗಳು ತಮಗೆ ಬಂದಿವೆಯೆಂದು ಸರ್ವೋಚ್ಚ ನ್ಯಾಯಾಲಯದ ಹಲವಾರು ವಕೀಲರು ಆರೋಪಿಸಿದ್ದಾರೆ.
ಪೊಲೀಸ್ ದೂರನ್ನು ಸಲ್ಲಿಸಿರುವ ವಕೀಲ ದೀಪಕ ಪ್ರಕಾಶ ಅವರು,ಈ ಬೆದರಿಕೆ ಕರೆಗಳು ದಂಗೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಕರೆ ಮಾಡಿದ್ದ ವ್ಯಕ್ತಿ ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆಯನ್ನುಂಟು ಮಾಡುವ ಅತ್ಯಂತ ಪ್ರತಿಕೂಲ ಪರಿಣಾಮಗಳ ಬಗ್ಗೆ ಬೆದರಿಕೆಯೊಡ್ಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
‘ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ)’ ಖಲಿಸ್ತಾನ್ ಪರ ಸಂಘಟನೆಯಿಂದ ಈ ಕರೆಗಳನ್ನು ಮಾಡಲಾಗಿದೆ ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ 10:40ಕ್ಕೆ ತಾವು ಸ್ವಯಂಚಾಲಿತ ಕರೆಗಳನ್ನು ಸ್ವೀಕರಿಸಿದ್ದಾಗಿ ಹಲವಾರು ವಕೀಲರು ತಿಳಿಸಿದ್ದಾರೆ. ಬುಧವಾರ ಪ್ರಧಾನಿ ಮೋದಿಯವರು ಬಠಿಂಡಾದಿಂದ ಫಿರೋಝ್ಪುರಕ್ಕೆ ರಸ್ತೆ ಮಾರ್ಗವಾಗಿ ಸಾಗುತ್ತಿದ್ದಾಗ ಪ್ರತಿಭಟನಾಕಾರರಿಂದ ರಸ್ತೆ ತಡೆಗೆ ಎಸ್‌ಎಫ್‌ಜೆ ಗುಂಪು ಹೊಣೆಯಾಗಿತ್ತು ಎಂದು ಕರೆ ಮಾಡಿದ ವ್ಯಕ್ತಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ರಸ್ತೆ ತೆರವುಗೊಳ್ಳಲು 20 ನಿಮಿಷ ಕಾದಿದ್ದ ಮೋದಿ ತನ್ನೆಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದಿಲ್ಲಿಗೆ ಮರಳಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶರು ಪ್ರಧಾನಿ ಮೋದಿಯವರಿಗೆ ನೆರವಾಗಬಾರದು ಮತ್ತು ರೈತರನ್ನು ದಂಡಿಸಬಾರದು ಎಂದು ಎಚ್ಚರಿಕೆ ನೀಡಿರುವ ವ್ಯಕ್ತಿ 1984ರ ಸಿಖ್ ವಿರೋಧಿ ದಂಗೆಯನ್ನೂ ಪ್ರಸ್ತಾಪಿಸಿದ್ದಾನೆ ಮತ್ತು ಕಳೆದೊಂದು ವರ್ಷದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಸಿಖ್ ರೈತರ ಸಾವುಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮೌನವಾಗಿದೆ ಎಂದು ಆರೋಪಿಸಿದ್ದಾನೆ.