'ಕೋವಿಡ್ ಗೆ ತನ್ನ ಬಳಿ ಪರಿಹಾರವಿದೆ' ಎಂದು ಭಾವಿಸುವ ಪ್ರತಿ ವ್ಯಕ್ತಿಗೂ ಅರ್ಜಿ ಸಲ್ಲಿಸಲು ಅವಕಾಶವಿಲ್ಲ: ಸುಪ್ರೀಂ

Update: 2022-01-10 17:51 GMT

ಹೊಸದಿಲ್ಲಿ,ಜ.10: ಕೋವಿಡ್ ಗೆ ಏನೋ ಪರಿಹಾರವಿದೆ ಎಂದು ಭಾವಿಸುವ ಪ್ರತಿ ವ್ಯಕ್ತಿಗೂ ಅರ್ಜಿ ಸಲ್ಲಿಸಲು ತಾನು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸೋಮವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಚೀನಾ ಜೈವಿಕ ಅಸ್ತ್ರವಾಗಿ ವೈರಸ್ ನ್ನು ಉದ್ದೇಶಪೂರ್ವಕ ಹರಡುತ್ತಿದೆ ಎಂದು ಆರೋಪಿಸಿದ್ದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿತು.

ಕರ್ನಾಟಕದ ವಕೀಲರೋರ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ ಅವರ ಪೀಠವು,ಇದು ಕೇವಲ ಪ್ರಚಾರದ ನಡೆಯಾಗಿದೆ ಎಂದು ಹೇಳಿತು.

ಪಿಐಎಲ್ ಸಲ್ಲಿಸಿದ್ದಕ್ಕಾಗಿ ಅರ್ಜಿದಾರರನ್ನು ತರಾಟೆಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು,ಅಂತರರಾಷ್ಟ್ರೀಯ ಪರಿಣಾಮವೇನು,ಚೀನಾ ನರಮೇಧವನ್ನು ನಡೆಸುತ್ತಿದೆಯೇ ಇಲ್ಲವೇ ಎನ್ನುವುದನ್ನು ನೋಡುವುದು ನ್ಯಾಯಾಲಯದ ಕೆಲಸವೇ ಎಂದು ಪ್ರಶ್ನಿಸಿತು.

ಇದು ಯಾವ ರೀತಿಯ ಅರ್ಜಿ? ಏನು ನಡೆಯುತ್ತಿದೆ? ಕೇವಲ ಈ ನ್ಯಾಯಾಲಯದ ಮುಂದೆ ಹಾಜರಾಗಲು ನೀವು ಈ ಅರ್ಜಿಯನ್ನು ಸಲ್ಲಿಸಿರುವಂತೆ ಕಾಣುತ್ತಿದೆ,ಬೇರೇನೂ ಇಲ್ಲ ಎಂದು ಕುಟುಕಿದ ಪೀಠವು, ಚೀನಾ ಜೈವಿಕ ಅಸ್ತ್ರವಾಗಿ ಕೋವಿಡ್ ಅನ್ನು ಉದ್ದೇಶಪೂರ್ವಕವಾಗಿ ಹರಡುತ್ತಿದೆ ಎಂದು ಅರ್ಜಿಯು ಆಪಾದಿಸಿದೆ ಮತ್ತು ನ್ಯಾಯಾಲಯವು ಸರಕಾರಕ್ಕೆ ಏನಾದರೂ ಆದೇಶ ನೀಡಬೇಕು ಎಂದು ಬಯಸಿದೆ. ಕ್ರಮವನ್ನು ತೆಗೆದುಕೊಳ್ಳುವುದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆ ಎಂದು ತನ್ನ ಆದೇಶದಲ್ಲಿ ಹೇಳಿತು.

‘ವೈರಸ್‌ಗೆ ಏನಾದರೂ ಪರಿಹಾರ ವಿಧಿ 32ರಡಿ ಬರುತ್ತದೆ ಎಂದು ಭಾವಿಸುವ ಯಾರಿಗೂ ಮತ್ತು ಅವರು ಅರ್ಜಿಯನ್ನು ಸಲ್ಲಿಸಲು ನಾವು ಅವಕಾಶ ನೀಡುವುದಿಲ್ಲ. ಅರ್ಜಿದಾರರು ಸೂಕ್ತ ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡಲು ಅವರಿಗೆ ಯಾವುದೇ ತಡೆಯಿಲ್ಲ. ಮಾಧ್ಯಮಗಳಲ್ಲಿ ಹೆಸರು ಬರಲೆಂದು ಅವರು ಇಲ್ಲಿದ್ದಾರೆ ಎಂದು ನಾವು ಭಾವಿಸಿದ್ದೇವೆ ಮತ್ತು ಇದನ್ನು ಕಡೆಗಣಿಸುವಂತೆ ನಾವು ಮಾಧ್ಯಮಗಳನ್ನು ಕೋರುತ್ತೇವೆ ’ಎಂದು ಪೀಠವು ಹೇಳಿತು.

ಶುದ್ಧ ತೆಂಗಿನೆಣ್ಣೆಯು ವೈರಸ್‌ನ್ನು ಕರಗಿಸುತ್ತದೆ ಎಂದು ಅರ್ಜಿಯಲ್ಲಿ ವಾದಿಸಿದ್ದ ವಕೀಲರು,ಚೀನಾ ವೈರಸ್‌ನ್ನು  ಹರಡುವುದನ್ನು ನಿಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಗಳನ್ನು ನೀಡುವಂತೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News