14ರಂದು ಪಾಕ್‌ನ ನೂತನ ಭದ್ರತಾ ನೀತಿ ಅನಾವರಣ: ಭಾರತದ ಸಹಿತ ನೆರೆ ರಾಷ್ಟ್ರಗಳೊಂದಿಗೆ ಶಾಂತಿ, ಸೌಹಾರ್ದತೆಗೆ ಒತ್ತು

Update: 2022-01-12 18:19 GMT
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್,ಜ.12: ಪಾಕಿಸ್ತಾನದ ಪ್ರಪ್ರಥಮ ರಾಷ್ಟ್ರೀಯ ಭದ್ರತಾ ನೀತಿಯನ್ನು ಪ್ರಧಾನಿ ಇಮ್ರಾನ್ ಖಾನ್ ಅವರು ಶುಕ್ರವಾರ ಅನಾವರಣಗೊಳಿಸಲಿದ್ದಾರೆ. ಭಾರತ ಸೇರಿದಂತೆ ತನ್ನ ನೆರೆಹೊರೆಯ ರಾಷ್ಟ್ರಗಳ ಜೊತೆ ಶಾಂತಿ ಸೌಹಾರ್ದವನ್ನು ಬಯಸುವುದರ ಜೊತೆ ದೇಶದಲ್ಲಿ ಆರ್ಥಿಕ ಭದ್ರತೆಯನ್ನು ಸಾಧಿಸುವ ಬಗ್ಗೆ ಭದ್ರತಾ ನೀತಿಯಲ್ಲಿ ಆದ್ಯತೆ ನೀಡಲಾಗಿದೆ ಎಂದು ತಿಳಿದುಬಂದಿದೆ.2022 ಹಾಗೂ 2026 ನಡುವಿನ ಅವಧಿಯ ಈ ಪಂಚವಾರ್ಷಿಕ ಭದ್ರತಾ ನೀತಿಯಲ್ಲಿ ಕಾಶ್ಮೀರ ವಿವಾದವು ಅಂತಿಮವಾಗಿ ಇತ್ಯರ್ಥವಾಗದ ಹೊರತಾಗಿಯೂ ಭಾರತದ ಜೊತೆ ವಾಣಿಜ್ಯ ಹಾಗೂ ಹೂಡಿಕೆಯನ್ನು ಉತ್ತೇಜಿಸುವ ಯೋಜನೆಯನ್ನು ವಿಸ್ತೃತವಾಗಿ ವಿವರಿಸಲಾಗಿದೆ ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ನೂತನ ಭದ್ರತಾ ನೀತಿಯ ಕೆಲವು ಭಾಗಗಳನ್ನು ಈಗಾಗಲೇ ಬಹಿರಂಗಪಡಿಸಲಾಗಿದ್ದು, ಮುಖ್ಯ ವಿಷಯಗಳನ್ನು ಇನ್ನೂ ಪ್ರಕಟಿಸಲಾಗಿಲ್ಲವೆಂದು ಅದು ಹೇಳಿದೆ. ‘‘ಮುಂದಿನ 100 ವರ್ಷಗಳವರೆಗೆ ಪಾಕಿಸ್ತಾನ ಭಾರತದ ಜೊತೆ ದ್ವೇಷವನ್ನು ಸಾಧಿಸಲು ಯತ್ನಿಸುವುದಿಲ್ಲ ’’ ಎಂದು ಪಾಕಿಸ್ತಾನದ ಉನ್ನತ ಸರಕಾರಿ ಅಧಿಕಾರಿಯೊಬ್ಬರು ಇಸ್ಲಾಮಾಬಾದ್‌ನಲ್ಲಿ ಮಂಗಳವಾರ ನೂತನ ಭದ್ರತಾ ನೀತಿಯ ಬಗ್ಗೆ ಮಾತನಾಡಿದ ಸಂದರ್ಭದಲ್ಲಿ ಹೇಳಿರುವುದಾಗಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ತಿಳಿಸಿದೆ.

ನೂತನ ಭದ್ರತಾ ನೀತಿಯು ಹತ್ತಿರದ ನೆರೆಹೊರೆಯವರೊಂದಿಗೆ ಶಾಂತಿಯನ್ನು ಹೊಂದಲು ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ತಮ್ಮ ನಡುವಿನ ವಾಣಿಜ್ಯ ಹಾಗೂ ಉದ್ಯಮ ಬಾಂಧವ್ಯಗಳನ್ನು ಸಹಜಸ್ಥಿತಿಗೆ ತರುವಂತಹ ಯುಗವನ್ನು ಕಾಣಲು ಭಾರತ ಹಾಗೂ ಪಾಕಿಸ್ತಾನಗಳೆರಡೂ ಬಯಸುತ್ತಿವೆ ಎಂದು ಅವರು ಹೇಳಿದ್ದಾರೆ.

‘‘ಆರ್ಥಿಕ ಭದ್ರತೆಯು ನೂತನ ರಾಷ್ಟ್ರೀಯ ಭದ್ರತಾ ನೀತಿಯ ಕೇಂದ್ರ ವಿಷಯವಾಗಿದೆ. ಹಾಗೆಂದು ನಮ್ಮ ಭೌಗೋಳಿಕ-ವ್ಯೊಹಾತ್ಮಕ ಹಾಗೂ ಭೂ-ರಾಜಕೀಯ ಹಿತಾಸಕ್ತಿಗಳನ್ನು ಕಡೆಗಣಿಸುತ್ತೇವೆ ಎಂದು ಅರ್ಥವಲ್ಲ’’ ಎಂದು ಅಧಿಕಾರಿ ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ.

ದೀರ್ಘಕಾಲದಿಂದ ನೆನೆಗುದಿಯಲ್ಲಿ ಕಾಶ್ಮೀರ ವಿವಾದವು ಪಾಕಿಸ್ತಾನಕ್ಕೆ‘‘ ಮಹತ್ವದ ರಾಷ್ಟ್ರೀಯ ನೀತಿ’’ ಎಂಬುದಾಗಿ ಗುರುತಿಸಿರುವುದಾಗಿ ಅವರು ಹೇಳಿದರು.

ಇಮ್ರಾನ್ ಖಾನ್ ಅವರು ಶುಕ್ರವಾರ ಅನಾವರಣಗೊಳಿಸಲಿರುವ 50 ಪುಟಗಳ ಪಾಕಿಸ್ತಾನದ ನೂತನ ರಾಷ್ಟ್ರೀಯ ಭದ್ರತಾ ನೀತಿಯು, ಪ್ರಮುಖವಾಗಿ ಆರ್ಥಿಕತೆ, ಸೇನೆ ಹಾಗೂ ಮಾನವ ಭದ್ರತೆಗೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News