ಶ್ರೀಲಂಕಾ: ಕೈದಿಗಳ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರಾಗ್ರಹ ಆಯುಕ್ತರಿಗೆ ಮರಣದಂಡನೆ ಶಿಕ್ಷೆ

Update: 2022-01-13 17:40 GMT
ಸಾಂದರ್ಭಿಕ ಚಿತ್ರ

ಕೊಲಂಬೊ, ಜ.13: 2012ರಲ್ಲಿ ಕೊಲಂಬೋದ ವೆಲ್ಲಿಕಾಡ ಜೈಲಿನಲ್ಲಿ ನಡೆದ 27 ಕೈದಿಗಳ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಕೊಲಂಬೋ ಹೈಕೋರ್ಟ್ ಕಾರಾಗ್ರಹ ಆಯುಕ್ತ ಎಮಿಲ್ ಲಮಹೆವಗೆ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಆದರೆ ಸಹ ಆರೋಪಿ, ಪೊಲೀಸ್ ಕಮಾಂಡೊ ಮೋಸೆಸ್ ರಂಗಜೀವ ಅವರನ್ನು ಖುಲಾಸೆಗೊಳಿಸಿದೆ. ವೆಲ್ಲಿಕಾಡ ಜೈಲಿನ ಆಯುಧಾಗಾರಕ್ಕೆ ನುಗ್ಗಿದ್ದ ಕೈದಿಗಳು ಅಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕೈವಶ ಮಾಡಿಕೊಂಡಿದ್ದರು. ಜೈಲಿನೊಳಗೆ ದಂಗೆ ಏಳುವ ಪ್ರಯತ್ನವನ್ನು ವಿಫಲಗೊಳಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಈ ಪ್ರಕರಣದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ಸರಕಾರ ತನಿಖೆಗೆ ಆದೇಶಿಸಿತ್ತು.

ಆದರೆ, 8 ಕೈದಿಗಳ ಹೆಸರು ಹಿಡಿದು ಕರೆದು ಅವರನ್ನು ಇತರರಿಂದ ಪ್ರತ್ಯೇಕಿಸಿದ ಬಳಿಕ ಪೊಲೀಸರು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಬಳಿಕ ಇತರ 19 ಕೈದಿಗಳನ್ನೂ ಸಾಮೂಹಿಕವಾಗಿ ಹತ್ಯೆ ಮಾಡಲಾಗಿದೆ. ನಂತರ ಅವರ ಮೃತದೇಹದ ಬಳಿ ಶಸ್ತ್ರಾಸ್ತ್ರಗಳನ್ನು ಇರಿಸಿ, ಕೈದಿಗಳು ಶಸ್ತ್ರಾಸ್ತ್ರ ಲೂಟಿ ಮಾಡಲು ಮುಂದಾಗಿರುವಂತೆ ಬಿಂಬಿಸಲಾಗಿದೆ ಎಂದು ಸರಕಾರಿ ಅಭಿಯೋಜಕರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News