ವಿದೇಶಿ ನೆರವು ವಿತರಣೆಯಲ್ಲಿ ಹೆಚ್ಚಿನ ಪಾತ್ರಕ್ಕೆ ತಾಲಿಬಾನ್ ಒತ್ತಾಯ

Update: 2022-01-13 18:05 GMT

ಕಾಬೂಲ್, ಜ.13: ಅಫ್ಘಾನಿಸ್ತಾನಕ್ಕೆ ವಿಶ್ವಸಂಸ್ಥೆ ಮತ್ತು ವಿದೇಶಗಳು ನೀಡಲು ಯೋಜಿಸಿರುವ ಸಾವಿರಾರು ಕೋಟಿ ಡಾಲರ್ ಮೌಲ್ಯದ ನೆರವಿನ ವಿತರಣೆಗಾಗಿ ತನ್ನ ಅಧಿಕಾರಿಗಳ ಹಾಗೂ ಅಂತರಾಷ್ಟ್ರೀಯ ಪ್ರತಿನಿಧಿಗಳ ಜಂಟಿ ಸಮಿತಿಯನ್ನು ರಚಿಸುವ ಪ್ರಸ್ತಾವನೆಯನ್ನು ತಾಲಿಬಾನ್ ಆಡಳಿತ ಮುಂದಿರಿಸಿದೆ.

ಅಂತರಾಷ್ಟ್ರೀಯ ಸಮುದಾಯದ ಮಾನವೀಯ ನೆರವನ್ನು ಸುವ್ಯವಸ್ಥೆಗೊಳಿಸುವುದು ಮತ್ತು ಅಗತ್ಯವಿರುವವರಿಗೆ ಸುಲಭದಲ್ಲಿ ತಲುಪುವಂತೆ ಸಮನ್ವಯಗೊಳಿಸುವುದು ಈ ಸಮಿತಿಯ ಉದ್ದೇಶವಾಗಿದೆ . ತಮ್ಮ ನೆರವಿನ ಯೋಜನೆ ಸುಲಭವಾಗಿ ಕಾರ್ಯಗತವಾಗಲು ಅವರು ಸರಕಾರದ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು ಎಂದು ಅಫ್ಘಾನ್‌ನ ಹಂಗಾಮಿ ಉಪಪ್ರಧಾನಿ ಅಬ್ದುಲ್ ಸಲಾಮ್ ಹನಾಫಿ ಬುಧವಾರ ಕಾಬೂಲ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಸುದ್ಧಿಗೋಷ್ಟಿಯಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿ ರಮೀರ್ ಅಲಕ್‌ಬರೋವ್  ಉಪಸ್ಥಿತರಿದ್ದರು. ಜಂಟಿ ಸಮಿತಿಯ ಪ್ರಸ್ತಾವನೆ ಬಗ್ಗೆ ಶೀಘ್ರವೇ ವಿಶ್ವಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಅಫ್ಘಾನಿಸ್ತಾನದ ವಿದೇಶ ಇಲಾಖೆಯ ವಕ್ತಾರರು ಹೇಳಿದ್ದಾರೆ.

ನೆರವು ವಿತರಣೆಗೆ ಅಗತ್ಯವಿರುವ ವಿಷಯಗಳ ಬಗ್ಗೆ ಈಗಾಗಲೇ ತಾಲಿಬಾನ್‌ಗೆ ತಿಳಿಸಲಾಗಿದೆ. ಮಹಿಳಾ ಸಿಬಂದಿ ಸಹಿತ ಎಲ್ಲರಿಗೂ ದೇಶದ ಎಲ್ಲೆಡೆ ಸಂಚರಿಸಲು ಮುಕ್ತ ಅವಕಾಶ ಇರಬೇಕು ಎಂಬುದು ಪ್ರಮುಖ ಷರತ್ತಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಉಪವಿಶೇಷ ಪ್ರತಿನಿಧಿ (ಅಫ್ಘಾನಿಸ್ತಾನಕ್ಕೆ) ಅಲಕ್‌ಬರೋವ್ ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

ಆದರೆ, ತಾಲಿಬಾನ್‌ನ ಹಲವು ಅಧಿಕಾರಿಗಳ ಮೇಲೆ ಈಗಾಗಲೇ ಅಂತರಾಷ್ಟ್ರೀಯ ನಿರ್ಬಂಧ ಜಾರಿಯಲ್ಲಿರುವುದರಿಂದ, ಈ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಅಥವಾ ವಿದೇಶಿ ಸರಕಾರಗಳು ಬೆಂಬಲಿಸುತ್ತವೆಯೇ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನ ತಾಲಿಬಾನ್‌ಗಳ ನಿಯಂತ್ರಣಕ್ಕೆ ಬಂದ ಬಳಿಕ ಆ ದೇಶಕ್ಕೆ ಒದಗಿಸುತ್ತಿದ್ದ ವಿದೇಶಿ ನೆರವು ಸ್ಥಗಿತಗೊಂಡಿದ್ದು ಇದರಿಂದ ಅಫ್ಘಾನ್‌ನ ಅರ್ಥವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಆಹಾರದ ಬೆಲೆ ಗಗನಕ್ಕೇರಿದೆ. ಆಹಾರದ ಸಮಸ್ಯೆ ವ್ಯಾಪಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೆ, ತಾಲಿಬಾನ್ ಅನ್ನು ಗುರಿಯಾಗಿಸಿದ ಪಾಶ್ಚಿಮಾತ್ಯ ನಿರ್ಬಂಧಗಳು ಆಹಾರ ಮತ್ತು ಔಷಧದ ಮೂಲಭೂತ ಸರಬರಾಜಿಗೂ ತಡೆಯೊಡ್ಡಿದೆ. ಈ ಮಧ್ಯೆ, ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಹಾಗೂ ಅಮೆರಿಕ ನಿರ್ಬಂಧದಲ್ಲಿ ತುಸು ವಿನಾಯಿತಿ ಘೋಷಿಸಿದೆ. ಅಫ್ಘಾನಿಸ್ತಾನಕ್ಕೆ 2022ರಲ್ಲಿ ಮಾನವೀಯ ನೆರವಿಗಾಗಿ 4.4 ಬಿಲಿಯನ್ ಡಾಲರ್ ಒದಗಿಸುವಂತೆ ಮಂಗಳವಾರ ವಿಶ್ವಸಂಸ್ಥೆ ಕರೆ ನೀಡಿದ ಬಳಿಕ ಅಮೆರಿಕವು ಹೆಚ್ಚುವರಿಯಾಗಿ 308 ಮಿಲಿಯನ್ ಡಾಲರ್ ದೇಣಿಗೆಯನ್ನು ಘೋಷಿಸಿದೆ. ದೇಣಿಗೆ ನೀಡಲು ನಾವು ಸಿದ್ಧ. ಆದರೆ, ದೇಣಿಗೆ ವಿತರಣೆ ಪ್ರಕ್ರಿಯೆಯಲ್ಲಿ ಅಫ್ಘಾನ್ ಸರಕಾರ ಮಧ್ಯಪ್ರವೇಶಿಸಬಾರದು ಎಂದು ವಿದೇಶಿ ಸರಕಾರಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News