‘‘ಆತ ನನ್ನ ಕಣ್ಣನ್ನು ಕಸಿದ, ಆದರೆ ನನ್ನ ಕನಸನ್ನು ಕಸಿಯಲಾರ’’

Update: 2022-01-14 04:44 GMT

ಗುಜರಾತ್‌ನ ಮೆಹ್ಸಾನ ಜಿಲ್ಲೆಯ ಕಾಜಲ್ ಪ್ರಜಾಪತಿಯ ಬಾಲ್ಯದ ಕನಸು ಪೊಲೀಸ್ ಇಲಾಖೆಗೆ ಸೇರುವುದಾಗಿತ್ತು. ಖಾಕಿ ಸಮವಸ್ತ್ರ ಧರಿಸಿ ನಾಗರಿಕರ ರಕ್ಷಣೆಗಾಗಿ ಕೆಲಸ ಮಾಡುವುದು ಶ್ರೇಷ್ಠ ವೃತ್ತಿ ಎಂದು ಅವರು ಹೇಳುತ್ತಾರೆ.

ಅವರ ತಂದೆ ರಿಕ್ಷಾ ಚಾಲಕ ಮತ್ತು ತಾಯಿ ಗೃಹಿಣಿ. ಚೆನ್ನಾಗಿ ಅಧ್ಯಯನ ಮಾಡಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ)ದ ಪರೀಕ್ಷೆಯನ್ನು ಜಯಿಸುವ ಅವರ ನಿರ್ಧಾರಕ್ಕೆ ತಂದೆ-ತಾಯಿ ಬೆಂಬಲವಾಗಿ ನಿಂತಿದ್ದರು. 2014ರಲ್ಲಿ 16 ವರ್ಷದ ಕಾಜಲ್ ಸ್ವಅಧ್ಯಯನದಿಂದಲೇ ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಅದು ಸವಾಲಿನ ಕಾರ್ಯವಾಗಿದ್ದರೂ, ಅಸಾಧ್ಯವಾಗಿರಲಿಲ್ಲ.

ಆದರೆ, ಎರಡು ವರ್ಷಗಳ ಬಳಿಕ ಅವರ ಮೇಲೆ ಕಾಲೇಜಿನ ಹೊರಗೆ ಅಮಾನುಷ ಆ್ಯಸಿಡ್ ದಾಳಿ ನಡೆಯಿತು. ಅದರಿಂದಾಗಿ ಅವರ ಬದುಕು ಶಾಶ್ವತವಾಗಿ ಬದಲಾಯಿತು. ಮುಂದಿನ ಐದು ವರ್ಷಗಳ ಕಾಲ ಅವರಿಗೆ ಏನನ್ನೂ ನೋಡಲು ಸಾಧ್ಯವಾಗಲಿಲ್ಲ. ಅವರ ಮುಖ ತೀವ್ರವಾಗಿ ವಿರೂಪಗೊಂಡಿತ್ತು.

‘ಹುಡುಗಿಯಾಗಿದ್ದಕ್ಕೆ ನಾನು ನನ್ನನ್ನೇ ದೂಷಿಸಿದೆ’

ಅದು 2016ರ ಫೆಬ್ರವರಿ 1. ಅಂದು ಕಾಜಲ್‌ರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ ಅವರ ಬಳಿ ಬಂದು, ತನ್ನ ಮದುವೆ ಪ್ರಸ್ತಾವವನ್ನು ಸ್ವೀಕರಿಸಲು ‘ಅಂತಿಮ ಎಚ್ಚರಿಕೆ’ ನೀಡಿದ. ಈ ಹಿಂದೆಯೂ ಈ ಪ್ರಸ್ತಾವವನ್ನು ಕಾಜಲ್ ಅನೇಕ ಸಲ ನಯವಾಗಿ ತಿರಸ್ಕರಿಸಿದ್ದರು. ಈ ಬಾರಿಯೂ ಅದನ್ನೇ ಹೇಳಿದರು.

ಅವನ ‘ಅಂತಿಮ ಎಚ್ಚರಿಕೆ’ಯನ್ನು ಕಾಜಲ್ ನಿರಾಕರಿಸಿದರು ಹಾಗೂ ಅದರ ನಂತರ ಅವನು ಹೋಗುತ್ತಾನೆ ಎಂದು ಭಾವಿಸಿದರು.

‘‘ಅವನೊಂದಿಗೆ ಹಿಂದೆಯೂ ಹಲವು ಬಾರಿ ವ್ಯವಹರಿಸಿದ್ದರಿಂದ, ಈ ಬಾರಿಯೂ ಅವನನ್ನು ನಿಭಾಯಿಸಲು ನಾನು ಮಾನಸಿಕವಾಗಿ ತಯಾರಾಗಿದ್ದೆ. ಅವನು ಆ್ಯಸಿಡ್‌ನಿಂದ ತುಂಬಿದ್ದ ಬಾಟಲಿಯನ್ನು ತನ್ನೊಂದಿಗೆ ತಂದಿದ್ದ ಎನ್ನುವುದು ನನಗೆ ಗೊತ್ತಿರಲಿಲ್ಲ. ನಾನು ಕಾಲೇಜು ಆವರಣದಿಂದ ಹೊರಗೆ ಕಾಲಿಡುತ್ತಿದ್ದಂತೆಯೇ, ಅವನು ನನ್ನ ಮೇಲೆ ಆ್ಯಸಿಡ್ ಎರಚಿದ. ನಾನು ಸಹಿಸಲಸಾಧ್ಯ ನೋವಿನಿಂದ ಒದ್ದಾಡಿದೆ’’ ಎಂದು ಕಾಜಲ್ ‘ದ ಬೆಟರ್ ಇಂಡಿಯ’ದೊಂದಿಗೆ ಮಾತನಾಡುತ್ತಾ ಹೇಳಿದರು.

ಆ್ಯಸಿಡ್ ದಾಳಿಯ ತಕ್ಷಣ ಅವರು ನೆಲಕ್ಕೆ ಬಿದ್ದರು. ಅವರ ಚರ್ಮ ಕರಗಲು ಆರಂಭಿಸಿತು. ನೋವನ್ನು ಕಡಿಮೆ ಮಾಡಲು ಅವರ ಸೀನಿಯರ್ ವಿದ್ಯಾರ್ಥಿಗಳು ನೀರು ಮತ್ತು ಹಾಲನ್ನು ಸುರಿದರು. ಆದರೆ ಅದರಿಂದ ಅವರ ನೋವು ಮತ್ತಷ್ಟು ಹೆಚ್ಚಿತು. ಅರ್ಧ ಗಂಟೆಯ ಬಳಿಕ, ಅವರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಒಯ್ಯಲಾಯಿತು. ಆದರೆ, ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳು ಆಗಿದ್ದರಿಂದ, ಬಳಿಕ ಅವರನ್ನು ಅಹ್ಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.

‘‘ನಾನು ಕಣ್ಣು ಕಳೆದುಕೊಂಡಿದ್ದೇನೆ ಎಂಬುದಾಗಿ ವೈದ್ಯರು ಘೋಷಿಸಿದರು. ಸುಟ್ಟ ಗಾಯಗಳಿಂದ ತೀವ್ರವಾಗಿ ಹಾನಿಗೊಂಡಿದ್ದ ಚರ್ಮವನ್ನು ಸರಿಪಡಿಸಲು ಹಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾಗಿದೆ ಎಂದು ಅವರು ಹೇಳಿದರು. ನನಗೆ ಭೂಮಿಯೇ ಬಾಯ್ಬಿರಿದಂತಾಗಿತ್ತು. ನಾನು ಆಗಷ್ಟೇ ಪ್ರಥಮ ವರ್ಷದ ಪದವಿಗೆ ಸೇರಿದ್ದೆ. ನನ್ನ ಇಡೀ ಬದುಕು ಸ್ತಬ್ಧಗೊಂಡಿತ್ತು. ನನ್ನ ಶಿಕ್ಷಣಕ್ಕೆ ಸಮಸ್ಯೆಯಾಯಿತು. ನನ್ನ ಸಹೋದರ ಶಿಕ್ಷಣ ಮೊಟಕುಗೊಳಿಸಿ ಕೆಲಸಕ್ಕೆ ಸೇರಿದ. ನನ್ನ ಶಸ್ತ್ರಚಿಕಿತ್ಸೆಗಳಿಗೆ ಹಣ ಹೊಂದಿಸುವುದಕ್ಕಾಗಿ ಅವನು ಕೆಲಸ ಮಾಡಬೇಕಾಯಿತು. ಖರ್ಚು ನಿಭಾಯಿಸುವುದಕ್ಕಾಗಿ ನನ್ನ ತಂದೆ ಹೆಚ್ಚು ಅವಧಿಯಲ್ಲಿ ಕೆಲಸ ಮಾಡಬೇಕಾಯಿತು. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗಿತ್ತು. ಆದರೆ ಚಿಕಿತ್ಸೆಯ ಫಲಿತಾಂಶದ ಬಗ್ಗೆ ಖಚಿತತೆ ಇರಲಿಲ್ಲ. ಎಲ್ಲವೂ ಕತ್ತಲಾಗಿತ್ತು’’ ಎಂದು 23 ವರ್ಷದ ಕಾಜಲ್ ಹೇಳುತ್ತಾರೆ.

ಕಾಜಲ್ ಸುಮಾರು ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲೇ ವಾಸಿಸಿದರು. ಈ ಅವಧಿಯಲ್ಲಿ ಅವರು 20 ಶಸ್ತ್ರಚಿಕಿತ್ಸೆಗಳಿಗೆ ಒಳಗಾದರು. ಅವರ ವೈದ್ಯಕೀಯ ಚಿಕಿತ್ಸೆಗಾಗಿ ಕುಟುಂಬವು ಈವರೆಗೆ ಸುಮಾರು 20 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಈ ಪೈಕಿ ಅವರಿಗೆ ಮೂರು ಲಕ್ಷ ಸರಕಾರದಿಂದ ಸಿಕ್ಕಿದೆ. ಅಪರಿಚಿತರಿಂದ ದೇಣಿಗೆ ರೂಪದಲ್ಲಿ ಸ್ವಲ್ಪ ಹಣ ಬಂದಿದೆ.

ಕೊನೆಗೂ ಕಳೆದ ವರ್ಷ ಕಾಜಲ್‌ಗೆ ಒಂದು ಕಣ್ಣಿನಿಂದ ನೋಡಲು ಸಾಧ್ಯವಾಯಿತು.

ಚೇತರಿಕೆಯ ಹಾದಿಯಲ್ಲಿ ಅವರು ಅಗಾಧ ನೋವು ಅನುಭವಿಸಿದರು ಹಾಗೂ ಬಳಲಿದರು. ಈ ಅವಧಿಯಲ್ಲಿ ಅವರ ಭರವಸೆಯನ್ನು ಜೀವಂತವಾಗಿಟ್ಟದ್ದು ಹೆತ್ತವರ ಅಗಾಧ ಬೆಂಬಲ ಮಾತ್ರ.

‘‘ಆ್ಯಸಿಡನ್ನು ನನ್ನ ಮುಖಕ್ಕೆ ಎಸೆಯುವ ಬದಲು ನನ್ನ ಕೈಗಳು ಅಥವಾ ಕಾಲುಗಳಿಗೆ ಮಾತ್ರ ಎರಚಿದ್ದರೆ ಒಳ್ಳೆಯದಿತ್ತು ಎಂದು ಜನರು ಹೇಳುವಾಗ ನಾನು ಆಘಾತಗೊಳ್ಳುತ್ತೇನೆ. ಅವನ ಕೃತ್ಯವನ್ನು ಅವರು ಎಂದೂ ಖಂಡಿಸಿಲ್ಲ. ನಮ್ಮ ಕೆಲವು ಸಂಬಂಧಿಕರು ನಮ್ಮಲ್ಲಿಗೆ ಬರುವುದನ್ನು ಬಿಟ್ಟರು. ನಾನು ಎಲ್ಲಿಗಾದರೂ ಹೋದರೆ ಜನರು ನನ್ನನ್ನು ದಿಟ್ಟಿಸಿ ನೋಡುತ್ತಿದ್ದರು. ಹೆಣ್ಣಾಗಿ ಹುಟ್ಟಿದ್ದಕ್ಕೆ ನಾನು ನನ್ನನ್ನೇ ದೂಷಿಸಿದೆ. ಆದರೆ, ನನ್ನ ಸಿಂಹದ ಎದೆಯ ಹೆತ್ತವರು ಮಾತ್ರ, ಈ ಘಟನೆಯು ನನ್ನ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಕನಸು ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಕಸಿದು ಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ನನಗೆ ಪದೇ ಪದೇ ಮನವರಿಕೆ ಮಾಡಿದರು. ನಾನು ಮುಜುಗರಕ್ಕೆ ಒಳಗಾಗುವ ಅಗತ್ಯವಿಲ್ಲ, ನನ್ನ ಮೇಲೆ ದಾಳಿ ಮಾಡಿದವನು ಮುಜುಗರಕ್ಕೆ ಒಳಗಾಗಬೇಕು ಎಂದು ಅವರು ನನಗೆ ಹೇಳಿದರು’’ ಎಂದರು.

ಈ ಧೈರ್ಯದ ಮಾತುಗಳಿಂದಾಗಿಯೇ, ದೃಷ್ಟಿ ಮರಳಿದ ಬಳಿಕ ಕೆಲಸಕ್ಕಾಗಿ ಅರ್ಜಿಗಳನ್ನು ಹಾಕಲು ಕಾಜಲ್ ಹಿಂಜರಿಯಲಿಲ್ಲ. ಆದರೆ, ಅವರ ಮುಖವನ್ನು ನೋಡಿ 4-5 ಕಂಪೆನಿಗಳು ಅವರ ಅರ್ಜಿಯನ್ನು ತಿರಸ್ಕರಿಸಿದವು.

ಸುಲಭದಲ್ಲಿ ಯಾವುದನ್ನೂ ಬಿಟ್ಟುಕೊಡದ ಜಾಯಮಾನದ ಕಾಜಲ್, ಇತ್ತೀಚೆಗೆ ಕಾಲೇಜಿಗೆ ಸೇರಲು ಇನ್ನೊಮ್ಮೆ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಪ್ರಥಮ ವರ್ಷದ ಪದವಿಯಲ್ಲಿ ಕಲಿಯುತ್ತಿರುವಂತೆಯೇ, ಅವರು ಲೋಕಸೇವಾ ಆಯೋಗದ ಪರೀಕ್ಷೆಗೂ ಸಿದ್ಧತೆ ನಡೆಸುತ್ತಿದ್ದಾರೆ.

‘‘ನನ್ನ ಪರಿಸ್ಥಿತಿಯಿಂದಾಗಿ ನಾನು ದಿನಕ್ಕೆ ಕೇವಲ 1-2 ಗಂಟೆ ಮಾತ್ರ ಅಧ್ಯಯನ ಮಾಡಲು ಸಾಧ್ಯ. ಆದರೆ, ಏನೂ ಮಾಡದಿರುವುದಕ್ಕಿಂತ ಅದು ಉತ್ತಮ. ನಾನು ಪೊಲೀಸ್ ಪಡೆಯನ್ನು ಸೇರಿ ಸಮಾಜದ ರಕ್ಷಣೆಯನ್ನು ಮಾಡಬಯಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಮಿನಲ್‌ಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಮಹಿಳೆಯರ ರಕ್ಷಣೆಯನ್ನು ಮಾಡಬಯಸುತ್ತೇನೆ. ನನ್ನ ಎರಡನೇ ಕಣ್ಣಿಗೆ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಯಾಗುವ ನಿರೀಕ್ಷೆಯಿದೆ. ನನ್ನ ಪೂರ್ಣದೃಷ್ಟಿಯನ್ನು ವಾಪಸ್ ಪಡೆಯಲು ಸಾಧ್ಯವಾಗುತ್ತದೋ ಇಲ್ಲವೋ ಎನ್ನುವುದನ್ನು ಆ ಶಸ್ತ್ರಚಿಕಿತ್ಸೆ ನಿರ್ಧರಿಸುತ್ತದೆ’’ ಎಂದು ಕಾಜಲ್ ಹೇಳುತ್ತಾರೆ.

ಕೃಪೆ: www.thebetterindia.com

Writer - ಗೋಪಿ ಕರೆಲಿಯಾ

contributor

Editor - ಗೋಪಿ ಕರೆಲಿಯಾ

contributor

Similar News