ಎನ್‌ಡಿಟಿವಿಯ ಹಿರಿಯ ಪತ್ರಕರ್ತ ಕಮಾಲ್ ಖಾನ್ ನಿಧನ

Update: 2022-01-14 14:25 GMT
ಕಮಲ್ ಖಾನ್ (Photo: NDTV)

ಲಕ್ನೋ : ಎನ್‌ಡಿಟಿವಿ ಸುದ್ದಿ ವಾಹಿನಿಯ ಜನಪ್ರಿಯ ಪತ್ರಕರ್ತ, ಚಾನಲ್ ನ ಉತ್ತರ ಪ್ರದೇಶದ ಸುದ್ದಿ ವಿಭಾಗದ  ಮುಖ್ಯಸ್ಥರಾಗಿದ್ದ  ಕಮಾಲ್ ಖಾನ್ ಅವರು  ಲಕ್ನೊದಲ್ಲಿರುವ ಬಟ್ಲರ್ ಕಾಲೋನಿಯ ನಿವಾಸದಲ್ಲಿ ಶುಕ್ರವಾರ  ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು.

ಖಾನ್ ಎನ್‌ಡಿಟಿವಿಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಅವರು  ಕಾರ್ಯನಿರ್ವಹಿಸುತ್ತಿದ್ದರು . ಕಳೆದ ಮೂರು ದಶಕಗಳಿಂದ ಎನ್ ಡಿ ಟಿ ವಿ ಯಲ್ಲಿ ವರದಿಗಾರಿಕೆ ಮಾಡುತ್ತಿರುವ ಕಮಾಲ್ ಅವರು ಉತ್ತರ ಪ್ರದೇಶದ ಹಲವು ವಿಧಾನ ಸಭಾ ಚುನಾವಣೆಗಳನ್ನು ಹಾಗು ಅಯೋಧ್ಯೆ ಸಹಿತ ಹಲವು ಮಹತ್ವದ ಪ್ರಕರಣಗಳನ್ನು ವರದಿ ಮಾಡಿದವರು. ಅವರ ವರದಿಗಾರಿಕೆಯ ಶೈಲಿ, ಅದಕ್ಕಾಗಿ ಅವರು ಮಾಡುತ್ತಿದ್ದ ತೀವ್ರ ತಯಾರಿ, ಅಧ್ಯಯನ, ಹಿಂದಿ ಮತ್ತು ಉರ್ದು ಭಾಷೆಗಳ ಮೇಲೆ ಅವರಿಗಿದ್ದ ಹಿಡಿತ ಮನೆಮಾತಾಗಿತ್ತು. ಪ್ರತಿಷ್ಠಿತ ರಾಮನಾಥ್ ಗೋಯೆಂಕಾ ಪ್ರಶಸ್ತಿ ಹಾಗೂ  ಗಣೇಶ್ ಶಂಕರ್ ವಿದ್ಯಾರ್ಥಿ ಪ್ರಶಸ್ತಿಯನ್ನು ಅವರು  ಪಡೆದಿದ್ದರು. .

ದೇಶಾದ್ಯಂತ ಹಿರಿಯ ರಾಜಕೀಯ ನಾಯಕರು, ಸಾಹಿತಿಗಳು, ಪತ್ರಕರ್ತರು  ಖಾನ್ ಅವರ ನಿಧನದ ಬಗ್ಗೆ ತಿಳಿದು ಆಘಾತ ಹಾಗೂ  ದುಃಖ  ವ್ಯಕ್ತಪಡಿಸಿದ್ದಾರೆ. ಎನ್ ಡಿ ಟಿ ವಿ ಯ ಗ್ರೂಪ್ ಎಡಿಟರ್ ರವೀಶ್ ಕುಮಾರ್ ಕಮಾಲ್ ಖಾನ್ ಅವರ ನಿಧನಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಈ ದಿನಗಳಲ್ಲಿ ಜನರು ಟಿವಿ ಸುದ್ದಿ ವಾಹಿನಿಗಳ ಮೇಲೆ ಸ್ವಲ್ಪ ನಂಬಿಕೆ ಉಳಿಸಿಕೊಂಡಿದ್ದರೆ ಅದಕ್ಕೆ ಕಾರಣರಾಗಿರುವ ಕೆಲವೇ ಕೆಲವು ಅತ್ಯುತ್ತಮ ಪತ್ರಕರ್ತರಲ್ಲಿ ಕಮಾಲ್ ಖಾನ್ ಅಗ್ರಗಣ್ಯರು ಎಂದು ರವೀಶ್    ಹೇಳಿದ್ದಾರೆ. ಕಮಾಲ್ ಖಾನ್ ವರದಿಗೆ ಮಾಹಿತಿ ಸಂಗ್ರಹಿಸುವ, ಅಧ್ಯಯನ ನಡೆಸುವ ಹಾಗು  ಪ್ರತಿ ಪದವನ್ನು ಬಳಸುವ ಶೈಲಿಯಿಂದ ನಾನು ಬಹಳಷ್ಟು ಕಲಿತಿದ್ದೇನೆ ಎಂದವರು ಗುಣಗಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News