ʼನೆಪ ಬೇಡ, ಉತ್ತರ ನೀಡಿʼ ಟ್ವಿಟರ್‌ ಅಭಿಯಾನದಡಿ ಹಲವು ಗಂಭೀರ ಸಮಸ್ಯೆಗಳ ಬಗೆಹರಿಸುವಂತೆ ಪ್ರಧಾನಿಗೆ ನೆಟ್ಟಿಗರ ತರಾಟೆ

Update: 2022-01-14 18:15 GMT

ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ, ಕೋಮುವಾದ, ದ್ವೇಷಭಾಷಣ ಸೇರಿದಂತೆ ಇನ್ನಿತರ ಹಲವು ಗಂಭೀರ ಸಮಸ್ಯೆಗಳ ಕುರಿತಂತೆ ಪ್ರತಿಪಕ್ಷ ಕಾಂಗ್ರೆಸ್‌ ಹಾಗೂ ಹಲವಾರು ಮಂದಿ ಟ್ವಿಟರ್‌ ಬಳಕೆದಾರರು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸುವುದು ಪ್ರಧಾನ ಮಂತ್ರಿಯ ಜವಾಬ್ದಾರಿ, ಆದರೆ ಸರ್ಕಾರ ನೆಪಗಳನ್ನು ನೀಡುತ್ತಾ  ಬಂದಿದೆ ಎಂದು ರಾಹುಲ್‌ ಗಾಂಧಿ ಇತ್ತೀಚೆಗೆ ಟ್ವೀಟ್‌ ಹಾಕಿದ ಬೆನ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ʼನೆಪ ಬೇಡ, ಉತ್ತರ ನೀಡಿʼ ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರಿನಲ್ಲಿ ಟ್ರೆಂಡ್‌ ಆಗುತ್ತಿದೆ. 

"ನಿರುದ್ಯೋಗವು ಬಹಳ ಆಳವಾದ ಬಿಕ್ಕಟ್ಟು - ಅದನ್ನು ಪರಿಹರಿಸುವುದು ಪ್ರಧಾನ ಮಂತ್ರಿಯ ಜವಾಬ್ದಾರಿಯಾಗಿದೆ. ದೇಶವು ಉತ್ತರಗಳನ್ನು ಕೇಳುತ್ತಿದೆ, ನೆಪ ನೀಡುವುದು ನಿಲ್ಲಿಸಿ" ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ ಬಳಿಕ ಲಕ್ಷಾಂತರ ಮಂದಿ ʼಬಹಾನೇ ನಹೀ ಜವಾಬ್‌ ದೋʼ (ನೆಪ ಬೇಡ, ಉತ್ತರ ನೀಡಿ) ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಲು ಆರಂಭಿಸಿದ್ದಾರೆ. 

ಕೋಟ್ಯಂತರ ಭಾರತೀಯರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಉದ್ಯೋಗಾವಕಾಶಗಳು ಕುಂಠಿತಗೊಳ್ಳುತ್ತಿದೆ. ಬಿಜೆಪಿ ಸರ್ಕಾರ ದೇಶಕ್ಕೆ ನೀಡಿದ ಉಡುಗೊರೆ ಇದೊಂದೇ. ಇದು ಬಿಜೆಪಿಯನ್ನು ಪ್ರಶ್ನೆ ಕೇಳುವ ಸಮಯ. ಕುಂಟು ನೆಪವನ್ನು ನೀಡುವುದು ನಿಲ್ಲಿಸಿ ಎಂದು ನಿವೃತ್ತ ವಿಂಗ್‌ ಕಮಾಂಡರ್‌ ಶ್ರೀಕುಮಾರ್‌ ಟ್ವೀಟ್‌ ಮಾಡಿದ್ದಾರೆ. 

ಎರಡು ಕೋಟಿ ಉದ್ಯೋಗಗಳ ಭರವಸೆ ನೀಡಲಾಗಿತ್ತು, ಆದರೆ ಆರು ಕೋಟಿಗೂ ಅಧಿಕ ಮಂದಿ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ರಾಕೇಶ್‌ ಮಾಳವೀಯ ಎಂಬವರು ಟ್ವೀಟ್‌ ಮಾಡಿದ್ದಾರೆ. ಆದಿತ್ಯನಾಥ್ ರ ಮಹಿಳಾ ವಿರೋಧಿ ಧೋರಣೆ ಹಾಗೂ ಯತೊ ನರಸಿಂಗಾನಂದನ ದ್ವೇಷಭಾಷಣಗಳ ಕುರಿತೂ ಜನರು ಕಿಡಿಕಾರಿದ್ದಾರೆ. ಈ ಬಗ್ಗೆ ಹಲವಾರು ಮಂದಿ ಸಾಮಾಜಿಕ ತಾಣ ಬಳಕೆದಾರರು ತಮ್ಮದೇ ಆದ ಶೈಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News