ಚುನಾವಣಾ ಆಯೋಗದ ಹೇಳಿಕೆಯನ್ನು ಸಂಭ್ರಮಿಸಬಹುದೇ?

Update: 2022-01-14 19:30 GMT

ಭಾಗ-2

ತನ್ನ ಭರವಸೆಗಳು ಮತ್ತು ಆಶೋತ್ತರಗಳನ್ನು ವ್ಯಕ್ತಪಡಿಸಿದ ಬಳಿಕ, ಸುಪ್ರೀಂ ಕೋರ್ಟ್‌ನ ತೀರ್ಪು ಸಂಪೂರ್ಣ ಆಶಾಭಾವದೊಂದಿಗೆ ಸಮಾಪನಗೊಳ್ಳುತ್ತದೆ: ‘‘ವ್ಯವಸ್ಥೆಯನ್ನು ಕಾಡುವ ರೋಗಕ್ಕೆ ಪರಿಹಾರವೊಂದನ್ನು ಕಂಡುಕೊಳ್ಳುವ ಹೊಣೆಯನ್ನು ಈ ದೇಶದ ಪ್ರಜಾಪ್ರಭುತ್ವದ ಕಾನೂನು-ನಿರ್ಮಾಣ ಘಟಕವು ತನ್ನ ಹೆಗಲ ಮೇಲೆ ತೆಗೆದುಕೊಳ್ಳುವುದು ಎಂಬ ಬಗ್ಗೆ ನಮಗೆ ಖಾತರಿಯಿದೆ. ಈ ರೋಗವು ವಾಸಿಯಾಗದೆ ಇರುವಂಥದ್ದಲ್ಲ. ಹಾಗಾಗಿ ನಾವು ಈ ಮಾತುಗಳನ್ನು ಹೇಳುತ್ತಿದ್ದೇವೆ. ಇದು ಕೇವಲ ಸಮಯ ಮತ್ತು ಸಂದರ್ಭವನ್ನು ಅವಲಂಬಿಸಿದೆ. ಆಗ ಯಾರಾದರೊಬ್ಬರು ಈ ರೋಗಕ್ಕೆ ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಈ ರೋಗವು ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಮುನ್ನ ಎಷ್ಟು ಬೇಗ ಚಿಕಿತ್ಸೆ ಆರಂಭವಾಗುತ್ತದೆಯೋ ಅಷ್ಟು ಒಳ್ಳೆಯದು. ಇದರೊಂದಿಗೆ, ನಾವು ನಿರ್ಗಮಿಸುತ್ತೇವೆ’’.

ವಾಸ್ತವ ಹೇಗಿದೆ?
ಈ ಸಾತ್ವಿಕ ನಿರೀಕ್ಷೆಗಳು ಮತ್ತು ಆಶೋತ್ತರಗಳು ಪೊಳ್ಳು ಎನ್ನುವುದು ಸಾಬೀತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. 2018 ನವೆಂಬರ್ 27ರಂದು ರಾಮ್‌ಬಾಬು ಸಿಂಗ್ ಠಾಕೂರ್ ಎಂಬವರು ಅಂದಿನ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಹಲವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆಯೊಂದನ್ನು ದಾಖಲಿಸಿದರು. ಭಾರತದಲ್ಲಿ ರಾಜಕೀಯದ ಅಪರಾಧೀಕರಣಕ್ಕೆ ಸಂಬಂಧಿಸಿದ ಕೆಲವೊಂದು ಗಂಭೀರ ವಿಷಯಗಳನ್ನು ಅವರು ತನ್ನ ಅರ್ಜಿಯಲ್ಲಿ ಪ್ರಸ್ತಾಪಿಸಿದರು. ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು 2018 ಸೆಪ್ಟಂಬರ್ 15ರಂದು ನೀಡಿರುವ ನಿರ್ದೇಶನಗಳನ್ನು ಉಲ್ಲಂಘಿಸಲಾಗುತ್ತಿದೆ ಎನ್ನುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಈ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ 2020 ಫೆಬ್ರವರಿ 13ರಂದು ನೀಡಿತು. ಕ್ರಿಮಿನಲ್ ಅಪರಾಧಗಳನ್ನು ಎಸಗಿರುವ ವ್ಯಕ್ತಿಗಳನ್ನು ತಮ್ಮ ಅಭ್ಯರ್ಥಿಗಳನ್ನಾಗಿ ಯಾಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ರಾಜಕೀಯ ಪಕ್ಷಗಳು ವಿವರಣೆ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿತು ಹಾಗೂ ಸುದೀರ್ಘ ನಿರ್ದೇಶನಗಳನ್ನು ನೀಡಿತು: 1)ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರುವ ವ್ಯಕ್ತಿಗಳಿಗೆ ಟಿಕೆಟ್‌ಗಳನ್ನು ನೀಡುವ ರಾಜಕೀಯ ಪಕ್ಷಗಳು ಅದಕ್ಕೆ ಕಾರಣಗಳನ್ನು ನೀಡಬೇಕು; 2) ರಾಜಕೀಯ ಪಕ್ಷಗಳು ಈ ವಿವರಣೆಗಳನ್ನು ಸಾಮಾಜಿಕ ಮಾಧ್ಯಮ ಸೇರಿದಂತೆ ಸಮೂಹ ಮಾಧ್ಯಮಗಳಲ್ಲಿ ಪ್ರಕಟಿಸಬೇಕು; ಮತ್ತು ಮುಖ್ಯವಾಗಿ 3) ವಿವರಣೆಗಳು ಸಂಬಂಧಿತ ಅಭ್ಯರ್ಥಿಯ ಅರ್ಹತೆಗಳು, ಸಾಧನೆಗಳು ಮತ್ತು ಪ್ರತಿಭೆಗಳಿಗೆ ಸಂಬಂಧಿಸಿದ್ದು ಆಗಿರಬೇಕೇ ಹೊರತು, ‘ಚುನಾವಣೆಯಲ್ಲಿ ಗೆಲ್ಲುವ’ ಮಾನದಂಡಕ್ಕೆ ಸಂಬಂಧಿಸಿದ್ದಾಗಿರಬಾರದು.

ಈಗ ಪರಿಸ್ಥಿತಿ ಹೇಗಿದೆ?
ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲಸ ಮಾಡುವ, ದಿಲ್ಲಿಯಲ್ಲಿ ವೃತ್ತಿ ನಡೆಸುತ್ತಿರುವ ಹಾಗೂ ಬಿಹಾರದ ನಳಂದಾ ಜಿಲ್ಲೆಯ ನಿವಾಸಿಯಾಗಿರುವ ವಕೀಲ ಬೃಜೇಶ್ ಸಿಂಗ್ ಈ ಅಭಿಯಾನವನ್ನು ಮುಂದುವರಿಸಿದರು. ಅವರು 2020 ನವೆಂಬರ್ 6ರಂದು ಸುಪ್ರೀಂ ಕೋರ್ಟ್‌ನಲ್ಲಿ ಅಂದಿನ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಹಲವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದರು. ಸುಪ್ರೀಂ ಕೋರ್ಟ್ 2020 ಫೆಬ್ರವರಿ 13ರಂದು ನೀಡಿರುವ ಆದೇಶದಲ್ಲಿ ನೀಡಲಾಗಿರುವ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎನ್ನುವುದನ್ನು ಅವರು ತನ್ನ ಅರ್ಜಿಯ ಮೂಲಕ ನ್ಯಾಯಾಲಯದ ಗಮನಕ್ಕೆ ತಂದರು.

2020ರ ಅಕ್ಟೋಬರ್-ನವೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗಳಿಗೆ ನಡೆದ ಚುನಾವಣೆಗಳಿಗೆ ಸಂಬಂಧಿಸಿ ಈ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಲಾಗಿತ್ತು. ಈ ಅರ್ಜಿಗೆ ಸಂಬಂಧಿಸಿದ ತೀರ್ಪು 2021 ಆಗಸ್ಟ್ 10ರಂದು ಹೊರಬಿತ್ತು. ಆಶ್ಚರ್ಯದ ವಿಷಯವೆಂದರೆ, ನ್ಯಾಯಾಲಯವು ಇನ್ನೊಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿತು. ಆದರೆ ಈ ವಿಷಯವನ್ನು ಸರಿಯಾಗಿ ನಿಭಾಯಿಸುವುದರಿಂದ ಹಿಂದೆ ಸರಿಯಿತು.

ನ್ಯಾಯಾಲಯ ಇಟ್ಟ ಮುಂದಿನ ಹೆಜ್ಜೆಯನ್ನು ನೋಡೋಣ. ಎಂಟು ರಾಜಕೀಯ ಪಕ್ಷಗಳು ನ್ಯಾಯಾಂಗ ನಿಂದನೆ ಮಾಡಿವೆ ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿತು ಹಾಗೂ ಈ ಪೈಕಿ ಆರು ಪಕ್ಷಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ಉಳಿದ ಎರಡು ಪಕ್ಷಗಳಿಗೆ ತಲಾ 5 ಲಕ್ಷ ರೂ. ದಂಡ ವಿಧಿಸಿತು. ದಂಡ ವಿಧಿಸಲು ಕಾರಣಗಳು: 1) ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ವ್ಯಕ್ತಿಗಳಿಗೆ ಈ ರಾಜಕೀಯ ಪಕ್ಷಗಳು ಟಿಕೆಟ್ ನೀಡಿವೆ; ಮತ್ತು 2) ಇಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡುವುದಕ್ಕೆ ಈ ಪಕ್ಷಗಳು ಕ್ಷುಲ್ಲಕ ಮತ್ತು ಮನವರಿಕೆಯಾಗದ ಕಾರಣಗಳನ್ನು ನೀಡಿವೆ.

ತಲಾ ಒಂದು ಲಕ್ಷ ರೂಪಾಯಿ ದಂಡಕ್ಕೆ ಗುರಿಯಾದ ಪಕ್ಷಗಳೆಂದರೆ: ಸಂಯುಕ್ತ ಜನತಾ ದಳ, ರಾಷ್ಟ್ರೀಯ ಜನತಾ ದಳ, ಲೋಕ ಜನಶಕ್ತಿ ಪಾರ್ಟಿ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ ಮತ್ತು ಭಾರತೀಯ ಕಮ್ಯುನಿಸ್ಟ್ ಪಾರ್ಟಿ. ತಲಾ 5 ಲಕ್ಷ ರೂಪಾಯಿ ದಂಡಕ್ಕೆ ಒಳಗಾದ ಪಕ್ಷಗಳೆಂದರೆ: ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ.
ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿರುವುದು ಶ್ಲಾಘನೆಗೆ ಅರ್ಹವೇ ಸರಿ. ಆದರೆ, ಚಿಂತಿಸಬೇಕಾದ ವಿಷಯವೆಂದರೆ ಆ ಪಕ್ಷಗಳಿಗೆ ವಿಧಿಸಲಾಗಿರುವ ದಂಡದ ಮೊತ್ತವು: 1)ಪಕ್ಷಗಳ ಮೇಲೆ ಏನಾದರೂ ಪ್ರತಿಕೂಲ ಆರ್ಥಿಕ ಪರಿಣಾಮವನ್ನು ಬೀರುವುದೇ? ಮತ್ತು 2) ಇನ್ನು ಮುಂದೆ ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶಗಳನ್ನು ಸಾರಾಸಗಟಾಗಿ ಉಲ್ಲಂಘಿಸದಂತೆ ಪಕ್ಷಗಳನ್ನು ತಡೆಯುವುದೇ?

ವಾಸ್ತವಿಕತೆ
ರಾಜಕೀಯ ಪಕ್ಷಗಳ ಮೇಲೆ ದಂಡ ವಿಧಿಸುವ ನ್ಯಾಯಾಲಯದ ನಿರ್ಧಾರವನ್ನು ನಾವು ಮೆಚ್ಚಲೇಬೇಕು. ಆದರೆ, ನ್ಯಾಯಾಲಯದ ನಿರ್ದೇಶನಗಳ ಅನುಷ್ಠಾನ ಎಷ್ಟು ಪ್ರಾಯೋಗಿಕ ಹಾಗೂ ಮುಖ್ಯವಾಗಿ ಅನುಷ್ಠಾನದ ಮೇಲೆ ಹೇಗೆ ನಿಗಾ ಇಡಲಾಗುತ್ತದೆ ಎಂಬ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಇದರ ಬಗ್ಗೆ ತೀರ್ಪಿನಲ್ಲೇ ಚುಟುಕು ಪ್ರಸ್ತಾವವಿದೆ: ‘‘ಪ್ಯಾರಾಗ್ರಾಫ್ 4.4ರಲ್ಲಿರುವ ನಿರ್ದೇಶನದ ಜಾರಿಯ ಪ್ರಾಯೋಗಿಕತೆಗೆ ಸಂಬಂಧಿಸಿ ಪ್ರಶ್ನೆಗಳನ್ನು ನಮ್ಮ ಮುಂದಿಡಲಾಗಿದೆ’’ ಎಂದು ನ್ಯಾಯಾಲಯದ ತೀರ್ಪು ತಿಳಿಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಈ ಕೆಳಗಿನ ಅಂಶಗಳನ್ನು ಜಾಗರೂಕತೆಯಿಂದ ಗಮನಿಸಬೇಕಾಗಿದೆ:
1) ದೇಶ ಈಗಲೂ ಕಾಯುತ್ತಿದೆ ಹಾಗೂ ಸಹನೆ ಕಳೆದುಕೊಳ್ಳುತ್ತಿದೆ. ರಾಜಕೀಯದ ಮಲಿನ ಹರಿವನ್ನು ಸ್ವಚ್ಛಗೊಳಿಸುವುದು ಸಹಜವಾಗಿಯೇ ಸರಕಾರದ ಶಾಸಕಾಂಗ ಶಾಖೆಯ ತಕ್ಷಣದ ಆದ್ಯತೆಯ ವಿಷಯವಲ್ಲ.
2) ರಾಜಕೀಯದ ಅಪರಾಧೀಕರಣವು ನಮ್ಮೆದುರು ಎದ್ದು ಕಾಣುತ್ತಿದ್ದರೂ, ಅದು ಪ್ರಜಾಪ್ರಭುತ್ವದ ಕೋಟೆಗೆ ಹಿಡಿದ ಗೆದ್ದಲು ಆಗಿದ್ದರೂ, ನ್ಯಾಯಾಲಯವು ಕಾನೂನು ಮಾಡಲು ಸಾಧ್ಯವಿಲ್ಲ ಎನ್ನುವುದು ಸಂವಿಧಾನ ಪೀಠದ ನಿಲುವು.
3) ತೀರ್ಪಿನ 107ನೇ ಪ್ಯಾರಾಗ್ರಾಫ್‌ನಲ್ಲಿ, ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿರುವ ವ್ಯಕ್ತಿಗಳ ಸದಸ್ಯತ್ವವನ್ನು ರಾಜಕೀಯ ಪಕ್ಷಗಳು ರದ್ದುಪಡಿಸುವುದನ್ನು ಕಡ್ಡಾಯಗೊಳಿಸುವ ಹಾಗೂ ಅವರು ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ತಡೆಯುವ ಕಾನೂನನ್ನು ಸಂಸತ್ತು ತರಬೇಕು ಎಂಬುದಾಗಿ 107ನೇ ಪ್ಯಾರಾಗ್ರಾಫ್‌ನಲ್ಲಿ ಸಂವಿಧಾನ ಪೀಠ ಶಿಫಾರಸು ಮಾಡುತ್ತದೆ.
4) ಭಾರತೀಯ ರಾಜಕೀಯ ವ್ಯವಸ್ಥೆಯ ಅಪರಾಧೀಕರಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎನ್ನುವುದನ್ನು ಯಾರೂ ನಿರಾಕರಿಸುವಂತಿಲ್ಲ. ಜೊತೆಗೆ, ರಾಜಕೀಯ ವ್ಯವಸ್ಥೆಯ ಶುದ್ಧೀಕರಣಕ್ಕಾಗಿ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳಿಗೆ ಹಾಗೂ ರಾಜಕೀಯ ಅಪರಾಧೀಕರಣದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಕಾನೂನು ರೂಪಿಸುವ ಅಧಿಕಾರ ನೀಡಬಾರದು ಎನ್ನುವುದನ್ನು ಯಾರೂ ನಿರಾಕರಿಸುವುದಿಲ್ಲ.
5)ಎಚ್ಚೆತ್ತುಕೊಂಡು ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿಗಳನ್ನು ರಾಜಕೀಯದಿಂದ ದೂರವಿರಿಸುವುದಕ್ಕಾಗಿ ಅಗತ್ಯ ತಿದ್ದುಪಡಿಗಳನ್ನು ತರಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ನ್ಯಾಯಾಲಯವು ಕಾಲ ಕಾಲಕ್ಕೆ ದೇಶದ ಕಾನೂನು ನಿರ್ಮಾಪಕರಿಗೆ ಮನವಿ ಮಾಡಿದೆ. ಈ ಎಲ್ಲ ಮನವಿಗಳನ್ನು ಆಲಿಸಲು ಕಿವಿಗಳು ಕುರುಡಾಗಿವೆ. ರಾಜಕೀಯ ಪಕ್ಷಗಳು ಸುದೀರ್ಘ ನಿದ್ದೆಯಿಂದ ಎಚ್ಚೆತ್ತುಕೊಳ್ಳಲು ನಿರಾಕರಿಸುತ್ತಿವೆ.
ನ್ಯಾಯಾಲಯವು ಇದೇ ಭಾವನೆಗಳನ್ನು 2018 ಸೆಪ್ಟಂಬರ್ 25ರಂದು ನೀಡಿದ ತೀರ್ಪಿನಲ್ಲಿ ವ್ಯಕ್ತಪಡಿಸಿತ್ತು.

ಕೊನೆಯದಾಗಿ...
ಕೊನೆಯದಾಗಿ ನಾವು, ಆರಂಭದಲ್ಲಿ ಪ್ರಸ್ತಾಪಿಸಿರುವ ವಿಷಯದತ್ತ ಬರೋಣ. ಚುನಾವಣಾ ಆಯೋಗವು ತನ್ನ ಅಧಿಸೂಚನೆಯಲ್ಲಿ, ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಯಥಾವತ್ತಾಗಿ ಅನುಸರಿಸಲು ಪ್ರಯತ್ನಿಸಿದೆ. ಆದರೆ, ಇಲ್ಲಿ ಮೇಲೆ ಪ್ರಸ್ತಾಪಿಸಲಾಗಿರುವ ತೀರ್ಪುಗಳನ್ನು ಗಮನಿಸಿದೆ, ಅವುಗಳನ್ನು ಅನುಷ್ಠಾನಗೊಳಿಸುವುದು ಅಸಾಧ್ಯವಲ್ಲವಾದರೂ ತುಂಬಾ ಕಷ್ಟ. ಹಾಗಾಗಿ, ದೇಶದ ಚುನಾವಣಾ ವ್ಯವಸ್ಥೆಯೊಳಗೆ ಕ್ರಿಮಿನಲ್ ಶಕ್ತಿಗಳ ಪ್ರವೇಶವನ್ನು ಸಂಪೂರ್ಣವಾಗಿ ತಡೆಯುವುದು ಅಸಾಧ್ಯವಾದರೂ, ಈ ತೀರ್ಪುಗಳ ಆಧಾರದಲ್ಲಿ ಅದನ್ನು ಕಡಿಮೆ ಮಾಡುವುದೂ ಸಾಧ್ಯವಿಲ್ಲ.
ರಾಜಕೀಯ ಮತ್ತು ಚುನಾವಣೆಗಳ ಶುದ್ಧೀಕರಣದ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನಾದರೂ ಮುಂದೆ ಇಡಬೇಕಾದರೆ, ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯು ತಾನು 2002ರಲ್ಲಿ ತೋರಿಸಿದ ಧೈರ್ಯ ಮತ್ತು ಸಾರ್ವಜನಿಕ ಬದ್ಧತೆಯನ್ನು ಉಳಿಸಿಕೊಳ್ಳಬೇಕು. ಶಾಸಕಾಂಗಕ್ಕೆ ಪದೇ ಪದೇ ಮನವಿ ಮಾಡುವುದರಿಂದ ಏನೂ ಆಗುವುದಿಲ್ಲ.

ಕೃಪೆ: thewire.in

Writer - ಜಗದೀಪ್ ಎಸ್. ಛೋಕರ್

contributor

Editor - ಜಗದೀಪ್ ಎಸ್. ಛೋಕರ್

contributor

Similar News