ಜನವರಿ 16 ನವೋದ್ಯಮ ದಿನವಾಗಿ ಆಚರಣೆ: ಪ್ರಧಾನಿ

Update: 2022-01-15 18:11 GMT

ಹೊಸದಿಲ್ಲಿ,ಜ.16: ನವೋದ್ಯಮ (ಸ್ಟಾರ್ಟ್ಅಪ್)ಗಳು ಸ್ವಾವಲಂಬಿ ಹಾಗೂ ಆತ್ಮವಿಶ್ವಾಸಿ ಭಾರತದ ಪ್ರಮಾಣಕಮುದ್ರೆ (ಹಾಲ್ಮಾರ್ಕ್) ಗಳಾಗಿವೆ ಎಂದು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 16ನೇ ತಾರೀಖನ್ನು ‘ನವೋದ್ಯಮ ದಿನ’ವಾಗಿ ಆಚರಿಸಲಾಗುವುದೆಂದು ತಿಳಿಸಿದರು. ‘‘ ನಮ್ಮ ಸ್ಟಾರ್ಟ್ಅಪ್ಗಳು ಆಟದ ನಿಯಮಗಳನ್ನು ಬದಲಾಯಿಸುತ್ತವೆ. ಹೀಗೆ, ನವೋದ್ಯಮಗಳು ನವ ಭಾರತದ ಬೆನ್ನೆಲುಬಾಗಿದೆಯೆಂದು ನಾನು ಭಾವಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಅವರು ಶನಿವಾರ 150ಕ್ಕೂ ಅಧಿಕ ಸ್ಟಾರ್ಟ್ಅಪ್ ಉದ್ಯಮಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.

‘‘ಕಳೆದ ವರ್ಷ ದೇಶದಲ್ಲಿ 42 ಸ್ಟಾರ್ಟ್ಅಪ್ಗಳು ಯೂನಿಕಾರ್ನ್ (ವಾರ್ಷಿಕ ವೌಲ್ಯ 100 ಕೋಟಿ ಡಾಲರ್ ದಾಟಿದ ನವೋದ್ಯಮಗಳು)ಗಳಾಗಿವೆ, ಇಂದು ಭಾರತವು ಯೂನಿಕಾರ್ನ್ ಶತವನ್ನು ಬಾರಿಸುವತ್ತ ದಾಪುಗಾಲಿಡುತ್ತಿದೆ. ಭಾರತದ ಸ್ಟಾರ್ಟ್ಅಪ್ಗಳ ಸುವರ್ಣಯುಗ ಆರಂಭವಾಗಿದೆಯೆಂದು ನಾನು ಒಪ್ಪಿಕೊಳ್ಳುತ್ತೇನೆ’’ ಎಂದು ಪ್ರಧಾನಿ ಮೋದಿ ತಿಳಿಸಿದರು.

 ‘‘ ನಾನು ಎಲ್ಲಾ ಸ್ಟಾರ್ಟ್ಅಪ್ಗಳನ್ನು ಅಭಿನಂದಿಸುತ್ತೇನೆ. ಸ್ಟಾರ್ಟ್ಅಪ್ಗಳ ಜಗತ್ತಿನಲ್ಲಿ ಭಾರತದ ಧ್ವಜವನ್ನು ಹಾರಿಸುವವರೆಲ್ಲರೂ ಯುವಜನರಾಗಿದ್ದಾರೆ.ನವೋದ್ಯಮ ಸಂಸ್ಕೃತಿಯು ದೇಶದ ದೂರದೂರದ ಭಾಗಗಳನ್ನು ತಲುಪಲು ಜನವರಿ 16ನ್ನು ಸ್ಟಾರ್ಟ್ಅಪ್ ದಿನವಾಗಿ ಆಚರಿಸಲಾಗುವುದು ಮತ್ತು ಈ ಸಂದರ್ಭವು ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಆರನೆ ವರ್ಷಾಚರಣೆಯೂ ಆಗಿದೆ ಎಂದರು.

ವಿಡಿಯೋಕಾನ್ಫರೆನ್ಸಿಂಗ್ ಮೂಲಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಹಾಊಗ ಆರೋಗ್ಯ ಕ್ಷೇತ್ರವಲ್ಲದೆ ಉದ್ಯಮ ವ್ಯವಸ್ಥೆಗಳು, ಬಾಹ್ಯಾಕಾಶ,ಕೈಗಾರಿಕೆ, ಭದ್ರತೆ,ಫಿನ್ಟೆಕ್,ಪರಿಸರದ ವಲಯಗಳ ಸ್ಟಾರ್ಟ್ಅಪ್ ಉದ್ಯಮಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News