ಬಿಜೆಪಿಗೆ ಮತ ಇಲ್ಲ: ಲಖೀಂಪುರದಿಂದ ಚಳವಳಿ ಮರು ಆರಂಭಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಸಜ್ಜು

Update: 2022-01-16 02:29 GMT

ಹೊಸದಿಲ್ಲಿ: ಒಂದು ತಿಂಗಳ ಹಿಂದೆ ಪ್ರತಿಭಟನೆ ಕೈಬಿಟ್ಟು ಸಂಸತ್ ಧರಣಿ ಸ್ಥಳ ಮತ್ತು ದೆಹಲಿ ಗಡಿಯನ್ನು ಬಿಟ್ಟಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತನ್ನ ಪ್ರತಿಭಟನೆಯನ್ನು ಈ ತಿಂಗಳ 21ರಂದು ಉತ್ತರ ಪ್ರದೇಶದ ಲಖೀಂಪುರ ಖೇರಿಯಿಂದ ಪುನರಾರಂಭಿಸಲು ಶನಿವಾರ ನಿರ್ಧರಿಸಿದೆ. ಮಿಷಿನ್ ಉತ್ತರ ಪ್ರದೇಶ ಕಾರ್ಯಕ್ರಮದಡಿ ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಅಭಿಯಾನ ಆರಂಭಿಸಿದರೆ, ಮಿಷಿನ್ ಉತ್ತರಾಖಂಡ ಫೆಬ್ರುವರಿ 1ರಿಂದ ಆರಂಭವಾಗಲಿದೆ.

ರೈತರ ವಿರುದ್ಧದ ಪ್ರಕರಣಗಳ ವಾಪಸ್ಸಾತಿ, ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ವಿತರಣೆ ಮತ್ತು ಎಂಟು ಮಂದಿಯನ್ನು ಬಲಿ ಪಡೆದ ಲಖೀಂಪುರ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪದಚ್ಯುತಿ ಆಗ್ರಹ, ಪುನರಾರಂಭವಾಗಲಿರುವ ಚಳವಳಿಯ ಪ್ರಮುಖ ಬೇಡಿಕೆಗಳಾಗಿರುತ್ತವೆ.

ಎಸ್‌ಕೆಎಂ ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ಆರಂಭಿಸಿದ ಪ್ರತಿಭಟನಾ ಸ್ಥಳದ ಮಾದರಿಯಲ್ಲಿ ಲಖೀಂಪುರ ಖೇರಿಯಲ್ಲಿ ಕಾಯಂ ಧರಣಿ ಸ್ಥಳವನ್ನು ಆರಂಭಿಸಲಿದ್ದು, ಇದು ’ಮಿಷಿನ್ ಯುಪಿ’ ಅಭಿಯಾನವನ್ನು ಮುಂದೆ ಕೊಂಡೊಯ್ಯಲಿದೆ. ಬಿಜೆಪಿಗೆ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡಲಿದೆ.

ರೈತರ ಪ್ರತಿಭಟನೆ 2.0 ಅಭಿಯಾನ ಜನವರಿ 31ರಂದು ಮೊದಲ ಬೃಹತ್ ಹೆಜ್ಜೆ ಇಡಲಿದ್ದು, ಆ ದಿನವನ್ನು ವಿಶ್ವಾಸದ್ರೋಹ ದಿನವಾಗಿ ಆಚರಿಸಲಿದೆ. ದೇಶಾದ್ಯಂತ ಎಲ್ಲ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಈ ದಿನವನ್ನು ಆಚರಿಸಲು ಉದ್ದೇಶಿಸಿದೆ. ಸಿಂಘು ಗಡಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತ ಸಂಘಟನೆಗಳಿಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳ ನಿಟ್ಟಿನಲ್ಲಿ ಆಗಿರುವ ಪ್ರಗತಿ ಪರಿಶೀಲನೆಗಾಗಿ ಈ ಸಭೆ ಕರೆಯಲಾಗಿತ್ತು. ಕೇಂದ್ರದ ಭರವಸೆ ಹಿನ್ನೆಲೆಯಲ್ಲಿ ಒಂದು ವರ್ಷದ ಸುಧೀರ್ಘ ಹೋರಾಟವನ್ನು ಡಿಸೆಂಬರ್ 10ರಂದು ಎಸ್‌ಕೆಎಂ ಕೈಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News