ಎಲೆಕ್ಟ್ರಿಕ್ ವಾಹನಗಳಿಗೆ ಒತ್ತು: ಚಾರ್ಜಿಂಗ್ ಸ್ಟೇಷನ್ ಆರಂಭಕ್ಕೆ ನಿಯಮ ಸಡಿಲು

Update: 2022-01-16 03:06 GMT
photo: PTI

ಹೊಸದಿಲ್ಲಿ: ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಮತ್ತಷ್ಟು ಶಕ್ತಿ ತುಂಬುವ ಪ್ರಯತ್ನವಾಗಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಆರಂಭ ಮಾಡಲು ಇದ್ದ ನಿಯಮಾವಳಿಗಳನ್ನು ಸಡಿಲಿಸಿದೆ. ಇದರ ಅನ್ವಯ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳು ಲೈಸನ್ಸ್ ಇಲ್ಲದೇ ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸಬಹುದಾಗಿದೆ.

ಹೊಸ ನಿಯಮಾವಳಿಯಿಂದಾಗಿ ಇಲೆಕ್ಟ್ರಿಕ್ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಮನೆ ಅಥವಾ ಕಚೇರಿಯಲ್ಲಿ ಹಾಲಿ ಇರುವ ವಿದ್ಯುತ್ ಸಂಪರ್ಕದಿಂದಲೇ ಗೃಹಬಳಕೆಯ ಶುಲ್ಕದಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಪರಿಷ್ಕೃತ ಮಾರ್ಗಸೂಚಿ ಮತ್ತು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮಾನದಂಡವನ್ನು ವಿದ್ಯುತ್ ಸಚಿವಾಲಯ ಬಿಡುಗಡೆ ಮಾಡಿದೆ. ಇದರ ಅನ್ವಯ ಸರ್ಕಾರಿ ಭೂಮಿಯನ್ನು ಸರ್ಕಾರಿ ಅಥವಾ ಸರ್ಕಾರಿ ಸಂಸ್ಥೆಗಳ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಆದಾಯ ಹಂಚಿಕೆ ಆಧಾರದಲ್ಲಿ ಪಿಸಿಎಸ್‌ಗಳನ್ನು ಸ್ಥಾಪಿಸಲು ನೀಡಬಹುದಾಗಿದೆ.

ಸಿಓಪಿ26 ಬದ್ಧತೆಗೆ ಅನುಗುಣವಾಗಿ ಸಾರಿಗೆ ವಲಯದ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಜಾಲವನ್ನು ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಅಭಿವೃದ್ಧಿಪಡಿಸಲು ಉತ್ತೇಜನ ದೊರಕಲಿದ್ದು, ರಿಲಯನ್ಸ್-ಬಿಪಿ, ಟಾಟಾ ಪವರ್, ಓಲಾ, ಇಂಡಿಯನ್‌ಆಯಿಲ್‌ನಂಥ ಸಂಸ್ಥೆಗಳು ಜಾಲ ಅಭಿವೃದ್ಧಿಪಡಿಸಲಿವೆ.

ಈ ಉದಾರೀಕೃತ ಕ್ರಮದಿಂದಾಗಿ ಸಾರ್ವಜನಿಕರು ಮತ್ತು ಸ್ಟಾರ್ಟ್‌ಅಪ್‌ಗಳನ್ನು ಆಕರ್ಷಿಸಿದ್ದು, ಇದು ಪಂಕ್ಚರ್ ದರಸ್ತಿ ಅಂಗಡಿಗಳ ಮಾದರಿಯಲ್ಲಿ ಪಿಸಿಎಸ್‌ಗಳು ಕೂಡಾ ತಲೆ ಎತ್ತಲು ಕಾರಣವಾಗಲಿದೆ. ಈ ಮೂಲಕ ಹಲವು ಮಂದಿಗೆ ಜೀವನಾಧಾರ ಸೃಷ್ಟಿಸಲು ನೆರವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News