ರೋಹಿತ್ ಆತ್ಮಹತ್ಯೆ ಮನು ವಾರಸುದಾರರು ಮಾಡಿದ ಹತ್ಯೆಯೇ?

Update: 2022-01-17 03:31 GMT

ದೇಶದಲ್ಲಿ ಸಾವಿರಾರು ವರ್ಷಗಳಿಂದ ಊರುಗಳಲ್ಲಿ, ಪಟ್ಟಣಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಕೊನೆಗೆ ವಿಜ್ಞಾನಕ್ಕೆ ನಿಲಯಗಳಾಗಬೇಕಾದ ವಿಶ್ವವಿದ್ಯಾನಿಲಯಗಳಲ್ಲಿ ಮನುವಾದಿಗಳ ದಾಳಿಗಳಿಗೆ, ತಾರತಮ್ಯಕ್ಕೆ ದಲಿತರು ಬಲಿಯಾಗುತ್ತಿರುವುದು ನಡೆಯುತ್ತಿದೆ. ಜಗತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಹೋಗುತ್ತಿದ್ದರೆ ನಮ್ಮ ದೇಶ ಮನುವಾದಿಗಳ ಮೂರ್ಖತ್ವದ ಆಲೋಚನೆಗಳಿಂದ ಮತ್ತಷ್ಟು ಹಿಂದಕ್ಕೆ ಹೋಗುತ್ತಿದೆ. ವಿಶ್ವವಿದ್ಯಾ ನಿಲಯಗಳಲ್ಲಿ ವಿದ್ಯಾರ್ಥಿಗಳ ಆಲೋಚನೆಗಳನ್ನು ಸಮಾಧಿ ಮಾಡುತ್ತಾ ಅವರನ್ನು ಕರ್ಮಸಿದ್ಧಾಂತ, ಮಿಥ್ಯವಾದ, ಜ್ಯೋತಿಷ್ಯ ಶಾಸ್ತ್ರದ ಕಡೆ ಪಯಣಿಸುವಂತೆ ಅವರ ಮೇಲೆ ಒತ್ತಡ ತರುತ್ತಿದ್ದಾರೆ.

ವಿದ್ಯಾರ್ಥಿಗಳು ಸಮಾಜ, ದೇಶ, ಪ್ರಾಂತ, ಜನರ ಕುರಿತು ಆಲೋಚಿಸದೆ ಅವರ ಮನಸ್ಸಿನ ತುಂಬಾ ಧರ್ಮದ ಅಮಲನ್ನು ತುಂಬುತ್ತಾ ವಿದ್ಯಾರ್ಥಿಗಳ ನಡುವೆ ಸಂಘಪರಿವಾರ ಶಕ್ತಿಗಳು ವಿದ್ವೇಷವನ್ನು ಸೃಷ್ಟಿಸುತ್ತಿವೆ. ವಿದ್ಯಾರ್ಥಿಗಳು ಸಮಾಜದಲ್ಲಿರುವ ಅಸಮಾನತೆಗಳ ಕುರಿತು ಆಲೋಚಿಸಿದರೆ ದೇಶದಲ್ಲಿ ಮನುವಾದಕ್ಕೆ ದೊಡ್ಡ ಅಪಾಯ. ಯಾರಾದರೂ ಉನ್ನತವಾದ ಆಲೋಚನೆಗಳನ್ನು ಹೊಂದಿದ್ದರೆ ಪುರಾಣಗಳಲ್ಲಿ ಶಂಭೂಕನ ತಲೆ ಕಡಿದಂತೆ, ಏಕಲವ್ಯನ ಹೆಬ್ಬೆರಳು ಕತ್ತರಿಸಿದಂತೆ ಈಗ ತಲೆಗಳಿಗೆ ನೇಣುಹಗ್ಗವನ್ನು ಬಿಗಿಸುತ್ತೇವೆ, ಕತ್ತಿಗಳಿಂದ ಕಡಿಯುತ್ತೇವೆಂದು ಮನುವಾದಿಗಳು ಬಹಿರಂಗ ಎಚ್ಚರಿಕೆ ನೀಡುತ್ತಿದ್ದಾರೆ. 2014ರಲ್ಲಿ ಸಂಘಪರಿವಾರ ಶಕ್ತಿಗಳು ಅಧಿಕಾರಕ್ಕೆ ಬಂದ ನಂತರ ದಲಿತರು, ಆದಿವಾಸಿಗಳು, ಮುಸ್ಲಿಂ ಜನರು ಪ್ರಾಣ ವನ್ನು ಅಂಗೈಯಲ್ಲಿಟ್ಟುಕೊಂಡು ಆತಂಕದಿಂದ ಜೀವಿಸುತ್ತಿದ್ದಾರೆ.

ದೇಶದಲ್ಲಿ ಆರೆಸ್ಸೆಸ್ ಶಕ್ತಿಗಳ ಹಾವಳಿಗಳಿಗೆ ಅಡೆತಡೆ ಇಲ್ಲದಾಗಿದೆ. ಉತ್ತರಪ್ರದೇಶದ ಮುಝಫ್ಫರ್ ನಗರದಲ್ಲಿರುವ ಮುಸ್ಲಿಮ್ ಜನರ ಮೇಲೆ ದಾಳಿ ಮಾಡಿದರು. ಜಗತ್ತಿನಲ್ಲೇ ಎಲ್ಲ ಆಹಾರ ಪದಾರ್ಥಗಳಿಗಿಂತ ಹೆಚ್ಚಿನ ಪ್ರೊಟೀನ್‌ಗಳುಳ್ಳ ಆಹಾರ ದನದ ಮಾಂಸವನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ನಿಷೇಧಿಸಿ ಆದಿವಾಸಿ, ದಲಿತ, ಮುಸ್ಲಿಮ್ ಜನರಿಗೆ ಪೌಷ್ಟಿಕ ಆಹಾರ ಸಿಗದಂತೆ ನಿರ್ಬಂಧಿಸಿದರು.

ದೇಶಾದ್ಯಂತ ಪ್ರಜಾಸತ್ತಾತ್ಮಕ ಬರಹಗಾರರ ಮೇಲೆ ದಾಳಿ, ಹತ್ಯೆಗಳು ನಡೆಯುತ್ತಿವೆ. ಮದ್ರಾಸ್ ಐಐಟಿಯಲ್ಲಿ ಅಂಬೇಡ್ಕರ್, ಪೆರಿಯಾರ್ ವಿದ್ಯಾರ್ಥಿ ಸಂಘ ಕಾರ್ಯಕರ್ತರ ಮೇಲೆ ದಾಳಿ ಮಾಡಿ, ಸಸ್ಪೆ ನನ್ ನಡೆದು ಅವರನ್ನು ದೇಶದ್ರೋಹಿಗಳೆಂದು ನಿಂದಿಸುತ್ತಿದ್ದಾರೆ. ದಲಿತರು, ಆದಿವಾಸಿಗಳು, ಮುಸ್ಲಿಂ ಜನರಿಗೆ ಯಾರೂ ಆಸರೆಯಾಗಿ ನಿಂತು ಮಾತಾಡದಂತೆ ಜನರ ನಡುವೆ ಭೇದಭಾವ ಹರಡುತ್ತಿದ್ದಾರೆ. ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಬಿಟ್ಟು ಬೇರೇನೂ ಮಾತಾಡದಂತಿರಬೇಕೆಂದು ಎಚ್ಚರಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಅಧಿಕಾರ ಯಂತ್ರಾಂಗವನ್ನು ಸಂಘಪರಿವಾರ ಕಾರ್ಯಕರ್ತರಿಂದ ತುಂಬಿಸಲಾಗುತ್ತಿದೆ. ಈ ಎಚ್ಚರಿಕೆಯನ್ನು ವಿರೋಧಿಸುತ್ತಾ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಪರ್ಯಾಯ ರಾಜಕೀಯ ಹಕ್ಕುದಾರಿಕೆಯುಳ್ಳ ವಿದ್ಯಾರ್ಥಿಗಳು ಯಾಕೂಬ್ ಮೆಮನ್ ಗಲ್ಲಿನ ವಿರುದ್ಧ ಅಂಬೇಡ್ಕರ್ ಸ್ಪೂಡೆಂಟ್ ಅಸೋಸಿಯೇಶನ್ ನೇತೃತ್ವದಲ್ಲಿ ಪ್ರತಿಭಟನೆ ಕಾರ್ಯಕ್ರಮವನ್ನು ಕೈಗೊಂಡರು. ದೇಶಾದ್ಯಂತ ಪ್ರಜಾಸತ್ತಾತ್ಮಕವಾದಿಗಳು, ಬರಹಗಾರರು, ಬುದ್ಧಿಜೀವಿಗಳು ಯಾಕೂಬ್ ಮೆಮನ್ ಗಲ್ಲುಶಿಕ್ಷೆಯನ್ನು ವಿರೋಧಿಸಿದರು. ಮುಝಫ್ಫರ್ ನಗರದ ಮುಸ್ಲಿಮರ ಮೇಲೆ ಹಿಂದುತ್ವ ಶಕ್ತಿಗಳು ಮಾಡಿದ ದಾಳಿಗಳ ಮೇಲೆ ‘‘ಮುಝಫ್ಫರ್ ನಗರ್ ಅಬೀ ಬಾಕಿ ಹೈ’’ ಡಾಕ್ಯುಮೆಂಟರಿ ಹೊರಬಂತು. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಮಾಡುತ್ತಿರುವ ವಿಕೃತ ಕ್ರೀಡೆಗಳು ಬೆಳಕಿಗೆ ಬರುತ್ತವೆಂದು ಆ ಡಾಕ್ಯುಮೆಂಟರಿಯನ್ನು ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸದಂತೆ ಎಬಿವಿಪಿ ವಿದ್ಯಾರ್ಥಿಗಳು ತಡೆದರು. ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬರು ಪ್ರದರ್ಶಿಸುತ್ತಿರುವ ಚಿತ್ರವನ್ನು ತಡೆಯುವುದೆಂದರೆ ಅವರ ಹಕ್ಕುಗಳನ್ನು ಹೊಸಕಿ ಹಾಕಿದಂತಾಗುತ್ತದೆ. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ತಡೆದ ‘‘ಮುಝಫ್ಫರ್‌ನಗರ್ ಅಬೀ ಬಾಕಿ ಹೈ’’ ಎಂಬ ಡಾಕ್ಯುಮೆಂಟರಿ ಚಿತ್ರವನ್ನು ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿಯಲ್ಲಿ ಪ್ರದರ್ಶಿಸುವುದಕ್ಕೆ ಎಎಸ್‌ಎ ನಿರ್ಣಯಿಸಿತು. ಎಎಸ್‌ಎ ಗೂಂಡಾಗಳು ಗೂಂಡಾಗಿರಿ ಕುರಿತು ಮಾತಾಡುತ್ತಿದ್ದಾರೆ ಎನ್ನುತ್ತಾ ಎಬಿವಿಪಿ ವಿದ್ಯಾರ್ಥಿ ಸುಶೀಲ್ ಕುಮಾರ್ ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದರೆ, ಎಎಸ್‌ಎ ವಿದ್ಯಾರ್ಥಿಗಳು ಪ್ರಜಾಸತ್ತಾತ್ಮಕವಾಗಿ ಯುನಿವರ್ಸಿಟಿ ಸೆಕ್ಯೂರಿಟಿ ಅಧಿಕಾರಿಗಳೊಡನೆ ಸೇರಿ ಸುಶೀಲ್ ಕುಮಾರ್ ರೂಮಿಗೆ ಹೋಗಿ ಅಂಬೇಡ್ಕರ್ ಸ್ಪೂಡೆಂಟ್ ಅಸೋಸಿ ಯೇಶನ್ ಮೇಲೆ ಮಾಡಿದ ಕಾಮೆಂಟ್‌ಗೆ ಅವನಿಂದ ಸೃಷ್ಟಿಕರಣ ಕೇಳಿದರು. ಅವನು ತನ್ನ ತಪ್ಪನ್ನು ಬಹಿ ರಂಗವಾಗಿ ಒಪ್ಪಿಕೊಂಡು, ಲಿಖಿತಪೂರ್ವಕವಾಗಿ ತಾನು ಮಾಡಿದ ತಪ್ಪಿನ ಮೇಲೆ ವಿವರಣೆ ಕೊಟ್ಟು ಯುನಿವರ್ಸಿಟಿ ಅಧಿಕಾರಿಗಳ ಕಂಪ್ಯೂಟರ್ ಮೂಲಕ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ.

ಇಷ್ಟಕ್ಕೆ ವಿಷಯದ ಸದ್ದಡಗಿತೆಂದು ಎಲ್ಲರೂ ಅಂದುಕೊಂಡರು. ಆದರೆ ಸುಶೀಲ್ ಕುಮಾರ್ ಕೇಂದ್ರದಲ್ಲಿನ ಅಧಿಕಾರ ಬಲವನ್ನು, ಯುನಿವರ್ಸಿಟಿಯಲ್ಲಿ ಸಂಘಪರಿವಾರ ಪ್ರೊಫೆಸರ್, ಅಧಿಕಾರಿಗಳ ಆಸರೆಯಿಂದ ನಿಜನಾಟಕಕ್ಕೆ ತೆರೆ ಎತ್ತಿಸಿದರು. ಕಳ್ಳನೆ ಕಳ್ಳ ಎಂದಂತೆ ದಲಿತ ವಿದ್ಯಾರ್ಥಿಗಳ ಮೇಲೆ ಕಾಮೆಂಟ್ ಮಾಡುತ್ತಾ ಅವರನ್ನು ಅವಮಾನಿಸಿದ ಸುಶೀಲ್ ಕುಮಾರ್ ತನ್ನ ಮೇಲೆ ಎಎಸ್‌ಎ ವಿದ್ಯಾರ್ಥಿಗಳು ದಾಳಿ ಮಾಡಿದರೆಂಬ ಕತೆ ಆರಂಭಿಸಿದ. ಸಮಯಕ್ಕಾಗಿ ಎದುರು ನೋಡುತ್ತಿದ್ದ ಆರೆಸ್ಸೆಸ್ ನಾಯಕ ಎಂಎಲ್‌ಸಿ ರಾಮಚಂದ್ರರಾವ್ ತನ್ನ ಬಂಧುಗಳ ಆಸ್ಪತ್ರೆಯಲ್ಲಿ ಸುಶೀಲ್ ಕುಮಾರ್‌ನನ್ನು ಸೇರಿಸಿ, ದಾಳಿ ಮಾಡಿದಂತೆ ಸುಳ್ಳು ಮೆಡಿಕಲ್ ಸರ್ಟಿಫಿಕೇಟ್ ತೆಗೆದುಕೊಂಡು ದಲಿತ ವಿದ್ಯಾರ್ಥಿಗಳ ಮೇಲೆ ತನ್ನ ರಾಜಕೀಯ ಬಲದಿಂದ ಸುಳ್ಳು ಕೇಸನ್ನು ದಾಖಲೆ ಮಾಡಿಸಿದ. ಹೇಗೂ ಯೂನಿವರ್ಸಿಟಿ ತುಂಬಾ ಕೋಮುವಾದಿಗಳೇ ಅಧಿಕಾರದಲ್ಲಿರುವುದರಿಂದ ತಾನು ಏನು ಹೇಳಿದರೆ ಅದು ನಡೆಯುತ್ತದೆಂದು ರಾಮಚಂದ್ರರಾವು ಯೂನಿವರ್ಸಿಟಿಯ ದಲಿತ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಬೇಕೆಂದು ಯುನಿವರ್ಸಿಟಿ ಅಧಿಕಾರಿಗಳು, ಪೊಲೀಸ್ ಯಂತ್ರಾಂಗದ ಮೇಲೆ ಒತ್ತಡ ತಂದದ್ದರಿಂದ ಐದು ಮಂದಿ ದಲಿತ ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಿದರು. ಅಷ್ಟಕ್ಕೆ ನಿಲ್ಲದೆ ಯುನಿವರ್ಸಿಟಿಯಿಂದ ಸಸ್ಪೆಂಡ್ ಮಾಡಬೇಕೆಂದು ಯುನಿವರ್ಸಿಟಿ ಅಧಿಕಾರಿಗಳ ಮೇಲೆ ಒತ್ತಡ ತಂದರು. ಅದೇ ರೀತಿ ಕೇಂದ್ರಮಂತ್ರಿ ಬಂಡಾರು ದತ್ತಾತ್ರೇಯರೊಂದಿಗೆ ಸೇರಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಮಂತ್ರಿ ಸ್ಮತಿ ಇರಾನಿಗೆ ದೂರು ನೀಡಿದರು. ಸ್ಮತಿ ಇರಾನಿ ಯುನಿವರ್ಸಿಟಿ ವೈಸ್ ಚಾನ್ಸ್ ಲರ್‌ಗೆ ದಲಿತ ವಿದ್ಯಾರ್ಥಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕೆೆಂದು ಉಲ್ಲೇಖಿಸುತ್ತಾ ನಾಲ್ಕು ಸಾರಿ ಪತ್ರ ಬರೆದರೆಂದರೆ ಬಿಜೆಪಿ ಸರಕಾರಕ್ಕೆ ದಲಿತರ ಬಗ್ಗೆ ಎಷ್ಟು ವಿರೋಧ ವಿದೆಯೆಂದು ಅರ್ಥವಾಗುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸಂಘಪರಿವಾರ ಶಕ್ತಿಗಳ ಮೆಚ್ಚುಗೆಗಾಗಿ ಐದು ಮಂದಿ ದಲಿತ ವಿದ್ಯಾರ್ಥಿಗಳನ್ನು ಸಾಮಾಜಿಕ ಬಹಿಷ್ಕಾರ ಮಾಡುತ್ತಾ ಯುನಿವರ್ಸಿಟಿ ವಿ.ಸಿ. ಅಪ್ಪಾರಾವು ಆದೇಶ ನೀಡಿದರು. ಸಾಮಾಜಿಕ ಬಹಿಷ್ಕಾರ ಎಂಬುದು ಜಮೀನ್ದಾರಿ ವ್ಯವಸ್ಥೆ ಜಾರಿ ಮಾಡಿದ ಶಿಕ್ಷೆ. ಇಂದು ಡಿಜಿಟಲ್ ಇಂಡಿಯಾ ಎಂದು ಕಹಳೆ ಊದುತ್ತಿರುವ ಕಾಲದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಸಾಮಾಜಿಕ ಬಹಿಷ್ಕಾರ ವಿಧಿಸುವುದೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ಜಮೀನ್ದಾರಿತತ್ವ, ಹಿಂದೂ ಕೋಮು ಉನ್ಮಾದ ಬಹಳ ಬೆಳೆದು ದಾಳಿ ಮಾಡುತ್ತಿಮೋ ಎಂದು ಆಲೋಚಿಸಬೇಕಾದ ಅಗತ್ಯವಿದೆ. ನಿಜಕ್ಕೂ ಎಚ್‌ಸಿಯುನಲ್ಲಿ ನಡೆದ ಘಟನೆಗೆ ಮೂಲ ಕಾರಣ 1990ರ ದಶಕದ ನಂತರ ದೇಶಾದ್ಯಂತ ಪರ್ಯಾಯ ರಾಜಕೀಯ ಜಾಗೃತಿಯೊಡನೆ ಅಸ್ತಿತ್ವ ಹೋರಾಟಗಳು ತುಂಬಿ ತುಳುಕಿದವು. ಅದರೊಂದಿಗೆ ಪ್ರಜ್ಞಾವಂತರಾದ ಶೂದ್ರ, ಅತಿಶೂದ್ರ ಜಾತಿಗಳಿಗೆ ಸೇರಿದ ಮಕ್ಕಳು ವಿಶ್ವವಿದ್ಯಾನಿಲಯ ಶಿಕ್ಷಣಕ್ಕಾಗಿ ಹೊರಟು ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಹೆಜ್ಜೆಯಿಟ್ಟರು. ಇಂದು ದೇಶಾದ್ಯಂತ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಶೇ.40ರಷ್ಟು ವಿದ್ಯಾರ್ಥಿಗಳು ಶೂದ್ರ ಅತಿಶೂದ್ರ ಜಾತಿಗಳ ವಿದ್ಯಾರ್ಥಿಗಳಿರುವುದು ಮೇಲ್ಜಾತಿಗಳಿಗೆ ಸೇರಿದ ಪ್ರಾಧ್ಯಾಪಕರಿಗೆ, ಅಧಿಕಾರಿಗಳಿಗೆ ನುಂಗಲಾರದ ತುತ್ತಾಯಿತು. ಇದರೊಂದಿಗೆ ಅಧಿಕಾರದಲ್ಲಿರುವ ಮೇಲ್ಜಾತಿ ಆಡಳಿತವರ್ಗ, ಒಂದು ಯೋಜನೆಯ ಪ್ರಕಾರ ಯೂನಿವರ್ಸಿಟಿಗೆ ಅನುದಾನ, ಅಧ್ಯಾಪಕರ ಭರ್ತಿ, ವಿದ್ಯಾರ್ಥಿಗಳ ಫೆಲೋಶಿಪ್‌ಗಳಿಗೆ ಕಂಡಿ ಹೊಡೆಯುತ್ತಾ, ಸಂಶೋಧನಾ ಕ್ಷೇತ್ರವನ್ನು ಪೂರ್ಣವಾಗಿ ನಿರ್ವೀಯರಗೊಳಿಸುತ್ತಾ ವಿಶ್ವವಿದ್ಯಾನಿಲಯ ಗಳನ್ನು ಮುಚ್ಚಿಹಾಕುವ ಪಿತೂರಿಯನ್ನು ಮಾಡಲಾಗುತ್ತಿದೆ. ಮೇಲ್ಜಾತಿಗಳ ಪಿತೂರಿಯನ್ನು ಹೊಡೆದು ಹಾಕುತ್ತಾ ನಿರಂತರವಾಗಿ ಅವರನ್ನು ಪ್ರಶ್ನಿಸುತ್ತಿರುವ ದಲಿತ ವಿದ್ಯಾರ್ಥಿಗಳ ಮೇಲೆ ಅನೇಕ ಬಗೆಯ ಮಾನಸಿಕ ದಾಳಿಯನ್ನು ಮೇಲ್ಜಾತಿ ಪ್ರೊಫೆಸರುಗಳು, ಅಧಿಕಾರಿಗಳು ಮಾಡುತ್ತಲೇ ಇದ್ದಾರೆ. ದೇಶದಲ್ಲಿ ಶೂದ್ರ, ಅತಿಶೂದ್ರ ಜಾತಿಗಳಿಗೆ ಶಿಕ್ಷಣವಿಲ್ಲವೆಂದು ಹೇಳುತ್ತಿದ್ದಾರೆ. ಹಣವಿರುವ ಮೇಲ್ಜಾತಿ ವಿದ್ಯಾರ್ಥಿಗಳಿಗಾಗಿ ಫಾರಿನ್ ಪ್ರೈವೇಟ್ ಯುನಿವರ್ಸಿಟಿಗಳ ವ್ಯವಸ್ಥೆಗಾಗಿ ಮಸೂದೆ ತಂದರು.

ರೋಹಿತ್ ಸಾವು ದೇಶವನ್ನು ಅಲುಗಾಡಿಸಿತು. ಎಲ್ಲರೂ ರೋಹಿತ್ ಸಾವಿನ ಬಗ್ಗೆ ಮಾತಾಡದಂತೆ ಇರಲಾರದ ಸ್ಥಿತಿ ಉಂಟಾಯಿತು. ನಿಜಕ್ಕೂ ಈ ಐದು ಮಂದಿ ದಲಿತ ವಿದ್ಯಾರ್ಥಿಗಳ ಮೇಲೆ ಸಾಮಾಜಿಕ ಬಹಿಷ್ಕಾರ ವಿಧಿಸಿದಾಗ ಎಲ್ಲರೂ ಮಾತಾಡಿದ್ದರೆ ರೋಹಿತ್ ಹತ್ಯೆ ನಡೆಯುತ್ತಿತ್ತೇ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಇಂದು ಹಾಕಿಕೊಳ್ಳಬೇಕಾದ ಅಗತ್ಯವಿದೆ. ದೇಶದಲ್ಲಿ ಮತ್ತೊಂದು ಮುಝಫ್ಫರ್‌ನಗರ್, ರೋಹಿತ್‌ರಂತಹ ಹತ್ಯೆಗಳು ನಡೆಯದಂತೆ ಹಿಂದೂ ಕೋಮು ಉನ್ಮಾದದ ವಿರುದ್ಧ ಎಲ್ಲ ಶಕ್ತಿಗಳೂ ಹೋರಾಡಬೇಕಾದ ಅಗತ್ಯವಿದೆ. ಅದೇ ರೀತಿ ಹೊಸ ಸಂಶೋಧನೆಗಳು ನಡೆಯಬೇಕಾದ ವಿಶ್ವವಿದ್ಯಾನಿಲಯಗಳಲ್ಲಿ ಆಲೋಚನಾ ಸಂಘರ್ಷ ನಡೆಯುವುದಕ್ಕೆ ಪ್ರಜಾಸತ್ತಾತ್ಮಕವಾದಿಗಳು, ಬರಹಗಾರರು, ಅಧ್ಯಾಪಕರು, ವಿದ್ಯಾರ್ಥಿಗಳು ಸೇರಿ ದೇಶದಲ್ಲಿ ಸಂಘಪರಿವಾರ ಶಕ್ತಿಗಳ ಹಾವಳಿಗೆ ಅಡ್ಡಕಟ್ಟೆ ಹಾಕದೆ ಹೋದರೆ ನಾಳೆ ಮತ್ತಷ್ಟು ಮಂದಿ ರೋಹಿತ್‌ರನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ.

Writer - ಕೆ. ಜಗನ್

contributor

Editor - ಕೆ. ಜಗನ್

contributor

Similar News