​ದೇಶದಲ್ಲಿ ಸತತ ಮೂರನೇ ದಿನ ಹೊಸ ಕೋವಿಡ್ ಪ್ರಕರಣ ಇಳಿಕೆ

Update: 2022-01-18 02:08 GMT

ಹೊಸದಿಲ್ಲಿ: ಸತತ ಮೂರನೇ ದಿನ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ವಾರಾಂತ್ಯದಲ್ಲಿ ಸೋಂಕು ಪರೀಕ್ಷೆ ಕಡಿಮೆ ಸಂಖ್ಯೆಯಲ್ಲಿ ನಡೆಯುವ ಕಾರಣದಿಂದ ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ 2.35 ಲಕ್ಷಕ್ಕೆ ಇಳಿದಿದೆ. ರವಿವಾರ 2.59 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದವು.

ಆದಾಗ್ಯೂ ವೈರಸ್ ಸೋಂಕಿತರ ಸಾವಿನ ಸಂಖ್ಯೆ ಸತತ ಏಳನೇ ದಿನ ಏರಿಕೆಯಾಗಿದ್ದು, ಸೋಮವಾರ ದೇಶದಲ್ಲಿ 250 ಮಂದಿ ಸೋಂಕಿತರು ಮೃತಪಟ್ಟಿದ್ದರು. ಇದು ರವಿವಾರ ದಾಖಲಾದ ಸಾವಿನ ಸಂಖ್ಯೆಯಾದ 235ಕ್ಕಿಂತ ಅಧಿಕ. ಹಳೆಯ ಸಾವಿನ ಸಂಖ್ಯೆಯನ್ನು ಸೇರಿಸಿದ ಪ್ರಕರಣಗಳನ್ನು ಹೊರತುಪಡಿಸಿದರೆ 2021 ಅಕ್ಟೋಬರ್ 7 ಬಳಿಕ ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ 250ರ ಗಡಿ ತಲುಪಿದೆ.

ಸೋಮವಾರ ತಡರಾತ್ರಿ ವೇಳೆಗೆ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,35,456 ಆಗಿದ್ದು, ತ್ರಿಪುರಾದ ಅಂಕಿ ಅಂಶಗಳು ಇನ್ನೂ ಲಭ್ಯವಿಲ್ಲ.

ರವಿವಾರ ಕಳೆದ 13 ದಿನಗಳಲ್ಲೇ ಕನಿಷ್ಠ ಎನಿಸಿದ 13.13 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಸತತ ಮೂರನೇ ದಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಇದಕ್ಕೆ ಪರೀಕ್ಷೆ ಕೂಡಾ ಕಡಿಮೆಯಾಗುತ್ತಿರುವುದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಬಂಗಾಳದಲ್ಲಿ 33, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ತಲಾ 24, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ತಲಾ 20 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮತ್ತು ಬಂಗಾಳದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಪ್ರವೃತ್ತಿ ಕಂಡುಬಂದಿದೆ. ಮಹಾರಾಷ್ಟ್ರದಲ್ಲಿ ರವಿವಾರ 41327 ಪ್ರಕರಣಗಳು ವರದಿಯಾಗಿದ್ದರೆ, ಸೋಮವಾರ ಇದು 31111ಕ್ಕೆ ಕುಸಿದಿದೆ. ಕರ್ನಾಟಕದಲ್ಲಿ 34047ರಿಂದ 27156ಕ್ಕೆ, ದೆಹಲಿಯಲ್ಲಿ 18268ರಿಂದ 12527ಕ್ಕೆ, ಪಶ್ಚಿಮ ಬಂಗಾಳದಲ್ಲಿ 14938ರಿಂದ 9385ಕ್ಕೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News