ಕ್ಲಬ್ ಹೌಸ್ ನಲ್ಲಿ ಮಹಿಳೆಯರ ವಿರುದ್ಧ ಅಶ್ಲೀಲ ಹೇಳಿಕೆ: ಕ್ರಮ ಕೈಗೊಳ್ಳಲು ಪೊಲೀಸರಿಗೆ ಡಿಸಿಡಬ್ಲ್ಯು ಸೂಚನೆ

Update: 2022-01-18 17:32 GMT

ಹೊಸದಿಲ್ಲಿ, ಜ. 18: ಅಡಿಯೋ ಸಂವಾದ ಆ್ಯಪ್ ‘ಕ್ಲಬ್ ಹೌಸ್’ನಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ನಗರ ಪೊಲೀಸರಿಗೆ ನೋಟಿಸು ಜಾರಿ ಮಾಡಿದೆ.

‘‘ಮುಸ್ಲಿಂ ಯುವತಿಯರು ಹಿಂದೂ ಯುವತಿಯರಿಗಿಂತ ತುಂಬಾ ಸುಂದರ’’ ಎಂಬ ವಿಷಯದ ಕುರಿತು ಅಸಹ್ಯ ಸಂವಾದದಲ್ಲಿ ಪಾಲ್ಗೊಳ್ಳುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸ್ ನ ಸೈಬರ್ ಕ್ರೈಮ್ ಸೆಲ್ಗೆ ಡಿಸಿಡಬ್ಲ್ಯು ಸೂಚಿಸಿದೆ. ಮುಸ್ಲಿಂ ಮಹಿಳೆಯರು ಹಾಗೂ ಯುವತಿಯರನ್ನು ಗುರಿಯಾಗಿರಿಸಿ ಅಶ್ಲೀಲ, ಅಸಭ್ಯ ಹಾಗೂ ಅವಹೇಳನಾಕಾರಿ ಹೇಳಿಕೆಗಳನ್ನು ಸಂವಾದಲ್ಲಿ ಭಾಗವಹಿಸಿದವರು ನೀಡಿರುವುದು ಅಡಿಯೊದಲ್ಲಿ ಸ್ಪಷ್ಟವಾಗಿ ಕೇಳಿ ಬಂದಿದ್ದು, ಆಯೋಗ ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದೆ ಎಂದು ಡಿಸಿಡಬ್ಲ್ಯುನ ಹೇಳಿಕೆ ತಿಳಿಸಿದೆ.

ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಕ್ರಮ ತೆಗೆದುಕೊಂಡ ಬಗ್ಗೆ 5 ದಿನಗಳ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಆಯೋಗ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಿದೆ. ಸಂವಾದದ ಕುರಿತಂತೆ ಆಘಾತ ವ್ಯಕ್ತಪಡಿಸಿರುವ ಆಯೋಗದ ಅಧ್ಯಕ್ಷ ಸ್ವಾತಿ ಮಲಿವಾಲ್, ‘‘ಮುಸ್ಲಿಂ ಮಹಿಳೆಯರು, ಯುವತಿಯರನ್ನು ಗುರಿಯಾಗಿರಿಸಿ ಹಾಗೂ ಅವರ ವಿರುದ್ಧ ಅಸಹ್ಯಕರ ಲೈಂಗಿಕ ಹೇಳಿಕೆಗಳನ್ನು ನೀಡಿರುವ ಕ್ಲಬ್ ಹೌಸ್ ಆ್ಯಪ್ನ ಸಂವಾದದ ಅಡಿಯೊವನ್ನು ಕೆಲವರು ನನ್ನ ಟ್ವಿಟ್ಟರ್ ಗೆ ಟ್ಯಾಗ್ ಮಾಡಿದ್ದರು’’ ಎಂದು ಅವರು ಹೇಳಿದ್ದಾರೆ. ‘‘ದೇಶದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ನಾನು ಆಕ್ರೋಶಿತನಾಗಿದ್ದೇನೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯತೆ ಇದೆ. ಆದುದರಿಂದಲೇ ನಾನು ಈ ವಿಷಯದ ಕುರಿತಂತೆ ಕೂಡಲೇ ಎಫ್ಐಆರ್ ದಾಖಲಿಸುವಂತೆ ಹಾಗೂ ಆರೋಪಿಗಳನ್ನು ಬಂಧಿಸುವಂತೆ ದಿಲ್ಲಿ ಪೊಲೀಸರಿಗೆ ನೋಟಿಸು ನೀಡಿದ್ದೇನೆ’’ ಎಂದು ಮಲಿವಾಲ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News