ಝೀ ವಾಹಿನಿ ಶೋ ನಲ್ಲಿ ಪ್ರಧಾನಿಯ ವ್ಯಂಗ್ಯ ಬಗ್ಗೆ ಬಿಜೆಪಿ ದೂರು: ಕೇಂದ್ರ ಸಚಿವಾಲಯದಿಂದ ನೋಟಿಸ್‌ ಜಾರಿ

Update: 2022-01-19 06:41 GMT
Photo: thenewsminute.com

ಚೆನ್ನೈ: ಝೀ ಎಂಟರ್‌ಟೈನ್ಮೆಂಟ್‌ ಸಂಸ್ಥೆ ತನ್ನ ಝೀ ತಮಿಳು ವಾಹಿನಿ ಮೂಲಕ ಪ್ರಸಾರ ಮಾಡಿದ ಜೂನಿಯರ್‌ ಸೂಪರ್‌ ಸ್ಟಾರ್ಸ್‌ ಸೀಸನ್‌ 4 ಕಾಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಲಾಗಿದೆಯೆನ್ನಲಾದ ಅನುಚಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಝೀ ಸಂಸ್ಥೆಗೆ ನೋಟಿಸ್‌ ಜಾರಿಗೊಳಿಸಿ ಅದರ ಪ್ರತಿಕ್ರಿಯೆಯನ್ನು ಕೇಳಿದೆ ಎಂದು ವರದಿಯಾಗಿದೆ.

ತಮಿಳುನಾಡು ರಾಜ್ಯ ಬಿಜೆಪಿಯ ಐಟಿ ಮತ್ತು ಸೋಶಿಯಲ್‌ ಮೀಡಿಯಾ ಘಟಕದ ಅಧ್ಯಕ್ಷ ಟಿ ಆರ್‌ ನಿರ್ಮಲ್ ಕುಮಾರ್‌ ಅವರ ದೂರಿನ ಆಧಾರದಲ್ಲಿ ಮಂಗಳವಾರ ಈ ನೋಟಿಸ್‌ ಜಾರಿಯಾಗಿದೆ.

ಜನವರಿ 15ರಂದು ಪ್ರಸಾರವಾದ ಈ ಶೊ ನಲ್ಲಿ ತಮಿಳು ನಟಿ ಸ್ನೇಹಾ ಮತ್ತು ಆರ್‌ ಜೆ ಮಿಚಿ ಸೆಂಥಿಲ್‌ ಮತ್ತು ಕಾಮಿಡಿಯನ್‌ ಅಮುಧವನನ್‌ ಅವರು ಆ್ಯಂಕರ್‌ ಆಗಿದ್ದರು. 2006 ತಮಿಳು ವಿಡಂಬನಾತ್ಮಕ ಚಿತ್ರ 'ಇಮ್ಸೈ ಅರಸನ್‌ 23 ಎಂ ಪುಲಿಕೇಸಿ' ಅನ್ನು ಈ ಶೋ ದಲ್ಲಿ ಉಲ್ಲೇಖಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಮಕ್ಕಳು ಕೂಡ ಒಬ್ಬ ರಾಜ ಮತ್ತು ಆತನ ನೀತಿಗಳು ದೇಶದ  ಜನರನ್ನು ಹೇಗೆ ನಿರಾಸೆಗೊಳಿಸಿದೆ ಎಂದು ಹೇಳಿದ್ದರಲ್ಲದೆ ಮೋದಿ ಸರಕಾರದ ಅಮಾನ್ಯೀಕರಣ ಮತ್ತು ಇತರ ನೀತಿಗಳ ಉಲ್ಲೇಖವನ್ನೂ ಮಾಡಲಾಗಿತ್ತು.

ಈ ರೀತಿ ಉಲ್ಲೇಖಗಳನ್ನು ಮಾಡುವುದು ತಪ್ಪು ಸಂದೇಶ ರವಾನಿಸುತ್ತದೆ. ನಿರೂಪಕರು ಇಂತಹ ಹೇಳಿಕೆಗಳನ್ನು ಪ್ರೋತ್ಸಾಹಿಸುತ್ತಿರುವಂತೆ ಕಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಕೇಂದ್ರ ಸಚಿವಾಲಯ ನೋಟಿಸ್‌ ಜಾರಿಗೊಳಿಸಿ ಈ ಕುರಿತಂತೆ ಝೀ ವಾಹಿನಿಯಿಂದ ಪ್ರತಿಕ್ರಿಯೆ ಕೇಳಿದೆ. ಪ್ರತಿಕ್ರಿಯೆ ದೊರೆತ ನಂತರ ಮುಂದಿನ ಕ್ರಮದ ಕುರಿತು ಚಿಂತಿಸಲಾಗುವುದು ಎಂದು ಸಚಿವಾಲಯ ಹೇಳಿದೆ. ನಿಯಮದಂತೆ ಏಳು ದಿನಗಳೊಳಗಾಗಿ ಝೀ ಪ್ರತಿಕ್ರಿಯೆ ನೀಡಲಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಸರಕಾರ ಝೀ ಸಂಸ್ಥೆಗೆ ನೋಟಿಸ್‌ ಜಾರಿಗೊಳಿಸಿರುವ ಕುರಿತು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News