‘ಜೈ ಶ್ರೀರಾಮ್’ ಎಂದು ಹೇಳುವಂತೆ ಮೌಲ್ವಿಗೆ ಬಲವಂತದ ಪ್ರಕರಣ: ತ್ವರಿತ ತನಿಖೆಗೆ ಹರ್ಯಾಣ ಪೊಲೀಸರಿಗೆ ಎನ್‌ಸಿಎಂ ಸೂಚನೆ

Update: 2022-01-20 16:13 GMT
ಎನ್‌ಸಿಎಂ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲಪುರಾ(photo:twitter)

ಹೊಸದಿಲ್ಲಿ,ಜ.20: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗುರ್ಗಾಂವ್‌ನಲ್ಲಿ ಇಬ್ಬರು ವ್ಯಕ್ತಿಗಳು ಮೌಲ್ವಿಯೋರ್ವರನ್ನು ‘ಜೈ ಶ್ರೀರಾಮ್ ’ ಎಂದು ಹೇಳುವಂತೆ ಬಲವಂತಗೊಳಿಸಿ ಕಿರುಕುಳ ನೀಡಿದ್ದ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (ಎನ್‌ಸಿಎಂ)ವು ಹರ್ಯಾಣ ಪೊಲೀಸರಿಗೆ ಸೂಚಿಸಿದೆ.

ಆಯೋಗದ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲಪುರಾ ಅವರು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡಿದ್ದು,ಈ ವಿಷಯದಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಗುರ್ಗಾಂವ್ ಪೊಲೀಸರು ಪತ್ರವೊಂದನ್ನು ಸಲ್ಲಿಸಿದ್ದಾರೆ ಎಂದು ಎನ್‌ಎಂಸಿ ಹೇಳಿಕೆಯಲ್ಲಿ ತಿಳಿಸಿದೆ.

ಸೆಕ್ಟರ್ 40ರಲ್ಲಿ ಶುಕ್ರವಾರದ ನಮಾಝ್ ನಿರ್ವಹಿಸುವ ಮೌಲ್ವಿ ಅ.22ರಂದು ರಾತ್ರಿ 11 ಗಂಟೆಗೆ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೌಲ್ವಿ ಇಮಾಮ್ ಅಬ್ದುಲ್ ಹಸೀಬ್ ಸಲ್ಲಿಸಿರುವ ದೂರಿನಂತೆ ಅವರನ್ನು ಹಿಂಬಾಲಿಸಿದ್ದ ಇಬ್ಬರು ವ್ಯಕ್ತಿಗಳು ಶುಕ್ರವಾರದ ಪ್ರಾರ್ಥನೆಗಳನ್ನು ನಡೆಸುವುದನ್ನು ನಿಲ್ಲಿಸುವಂತೆ ಅವರಿಗೆ ಸೂಚಿಸಿದ್ದರು. ಅವರನ್ನು ನಿಂದಿಸಿದ್ದ ಆರೋಪಿಗಳು ತಮ್ಮ ಮಾತಿನಂತೆ ನಡೆಯದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನು ಒಡ್ಡಿದ್ದರು.

ಅವರು ತನಗೆ ‘ಜೈ ಶ್ರೀರಾಮ’ಎಂದು ಹೇಳುವಂತೆ ಆಗ್ರಹಿಸಿದ್ದರು ಎಂದೂ ಮೌಲ್ವಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳು ಬಳಸಿದ್ದ ದ್ವಿಚಕ್ರ ವಾಹನ ಮತ್ತು ಘಟನೆ ನಡೆದಿದ್ದ ಪ್ರದೇಶದಲ್ಲಿಯ ಸಿಸಿಟಿವಿ ಫೂಟೇಜ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿರುವ ಪೊಲೀಸರು ಮುಂದಿನ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗುತ್ತಿದೆ,ಆರೋಪಿಗಳ ರೇಖಾಚಿತ್ರಗಳನ್ನು ಸಿದ್ಧಗೊಳಿಸಲಾಗುತ್ತಿದೆ ಮತ್ತು ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ ಎಂದು ಆಯೋಗವು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News