ಬಾಂಗ್ಲಾದೇಶದ ಕ್ಷಿಪ್ರಕಾರ್ಯ ಪಡೆಯ ನಿಷೇಧಕ್ಕೆ ವಿಶ್ವಸಂಸ್ಥೆಗೆ ಆಗ್ರಹ

Update: 2022-01-20 16:33 GMT

ವಾಷಿಂಗ್ಟನ್, ಜ.20: ಬಾಂಗ್ಲಾದೇಶದ ಕ್ಷಿಪ್ರ ಕಾರ್ಯಪಡೆ (ಆರ್‌ಎಬಿ)ಯ ಯೋಧರು ದೌರ್ಜನ್ಯ, ಹಿಂಸೆ, ನ್ಯಾಯೇತರ ಹತ್ಯೆ ಮುಂತಾದ ಕೃತ್ಯಗಳಲ್ಲಿ ತೊಡಗಿರುವುದಕ್ಕೆ ಸಮಂಜಸ ಮತ್ತು ನಂಬಲರ್ಹ ಪುರಾವೆಗಳಿರುವುದರಿಂದ ಈ ತುಕಡಿಯ ಯೋಧರನ್ನು ವಿಶ್ವದ ಯಾವುದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಶಾಂತಿಪಾಲನಾ ಪಡೆಯಲ್ಲಿ ಸೇರಿಸಬಾರದು ಎಂದು ಮಾನವ ಹಕ್ಕುಗಳ ಸಂಘಟನೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ.

ಆರ್‌ಎಬಿ ಪಡೆಯ ದೌರ್ಜನ್ಯಕ್ಕೆ ಪುರಾವೆ ನೀಡುವ ದಾಖಲೆ ಸಹಿತ ವಿವರವನ್ನು ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿ ಜೀನ್ ಪಿಯರೆ ಲಕ್ರೋಯಿಕ್ಸ್‌ಗೆ 12 ಮಾನವ ಹಕ್ಕು ಸಂಘಟನೆಗಳು ಪತ್ರ ಮೂಲಕ ರವಾನಿಸಿವೆ. ಆರ್‌ಎಬಿಯಲ್ಲಿ ಕಾರ್ಯನಿರ್ವಹಿಸಿದ ಯೋಧರನ್ನು ಶಾಂತಿಪಾಲನಾ ಪಡೆಯಲ್ಲಿ ಸೇರಿಸಿಕೊಳ್ಳುತ್ತಿರುವುದು ತೀವ್ರ ಆತಂಕದ ವಿಷಯವಾಗಿದೆ. 2014ರಲ್ಲಿ ರಚನೆಯಾದ ಈ ತುಡಿಯ ವಿರುದ್ಧ ನ್ಯಾಯೇತರ ಹತ್ಯೆ, ಚಿತ್ರಹಿಂಸೆ, ಬಲವಂತದ ನಾಪತ್ತೆ ಆರೋಪ ನಿರಂತರ ಕೇಳಿಬಂದಿರುವುದರಿಂದ ಇವರನ್ನು ಶಾಂತಿಪಾಲನಾ ಪಡೆಯಿಂದ ನಿಷೇಧಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಪುರಾವೆಗಳು ಸ್ಪಷ್ಟವಾಗಿವೆ. ಈಗ ವಿಶ್ವಸಂಸ್ಥೆ ಕ್ರಮ ಕೈಗೊಳ್ಳುವ ಸಮಯ ಬಂದಿದೆ ಎಂದು ರಾಬರ್ಟ್ ಕೆನಡಿ ಮಾನವ ಹಕ್ಕು ಸಂಘಟನೆಯ ಅಧ್ಯಕ್ಷ ಕೆರ್ರೀ ಕೆನಡಿ ಹೇಳಿದ್ದಾರೆ. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸಿಬಂದಿಯ ಆಯ್ಕೆ ಸಂದರ್ಭ 2012ರ ವಿಶ್ವಸಂಸ್ಥೆ ನೀತಿಯನ್ನು ಅನ್ವಯಿಸಬೇಕು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಿಂದ ಆಗುವ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ಅಂತ್ಯ ಹಾಡುವ ಬಗ್ಗೆ ನಿಜಕ್ಕೂ ಕಳಕಳಿ ಹೊಂದಿದ್ದರೆ, ಬಾಂಗ್ಲಾದೇಶದ ಆರ್‌ಎಬಿಯಂತಹ, ಮಾನವ ಹಕ್ಕು ದೌರ್ಜನ್ಯದ ಸಾಬೀತಾದ ಪುರಾವೆ ಹೊಂದಿರುವ ಘಟಕಗಳನ್ನು ಶಾಂತಿಪಾಲನಾ ಪಡೆಯಿಂದ ನಿಷೇಧಿಸಬೇಕು ಎಂದವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News