ಮತಾಂತರಗೊಳ್ಳದೇ ಇದ್ದುದಕ್ಕೆ ವಾರ್ಡನ್‍ನಿಂದ ನಿಂದನೆ ಆರೋಪ: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಸಾವು

Update: 2022-01-21 07:05 GMT
ಸಾಂದರ್ಭಿಕ ಚಿತ್ರ

ಚೆನ್ನೈ: ಹಾಸ್ಟೆಲ್ ವಾರ್ಡನ್ ನಿಂದಿಸುತ್ತಿದ್ದಾರೆ ಮತ್ತು ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾದ ತಮಿಳುನಾಡಿನ ತಂಜಾವೂರು ಜಿಲ್ಲೆಯ 17 ವರ್ಷದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ndtv.com ವರದಿ ಮಾಡಿದೆ.

ಆಕೆಯ ಸಾವಿನ ನಂತರ ಹರಿದಾಡುತ್ತಿರುವ ವೀಡಿಯೋವೊಂದರಲ್ಲಿ ಆಕೆ ತನ್ನ ಕುಟುಂಬ ಮತಾಂತರಗೊಳ್ಳಲು ನಿರಾಕರಿಸಿದ್ದರಿಂದ ವಾರ್ಡನ್ ತನ್ನನ್ನು ನಿಂದಿಸಿರಬಹುದು ಎಂದು ಆಕೆ ಶಂಕಿಸಿದ್ದಾಳೆ. ವೀಡಿಯೊದ ಸತ್ಯಾಸತ್ಯತೆ ಇನ್ನೂ ದೃಢೀಕರಣಗೊಂಡಿಲ್ಲ ಎಂದು ವರದಿಯಾಗಿದೆ.

"ಎರಡು ವರ್ಷಗಳ ಹಿಂದೆ ಅವರು ನನ್ನ ಹೆತ್ತವರಿಗೆ ನನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುವಂತೆ ಕೇಳಿದ್ದರು. ಅವರು ನನ್ನ ಶಿಕ್ಷಣದ ಜವಾಬ್ದಾರಿಯನ್ನೂ ವಹಿಸುವುದಾಗಿ ಹೇಳಿದ್ದರು,'' ಎಂದು ಆಕೆ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ. ಮತಾಂತರಗೊಳ್ಳದೇ ಇರುವುದಕ್ಕೆ ಟಾರ್ಗೆಟ್ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಆಕೆ "ಆಗಿರಬಹುದು,''ಎಂದು ಹೇಳುವುದು ಕೇಳಿಸುತ್ತದೆ.

ಮತಾಂತರ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಕೆಯ ಹೆತ್ತವರು ಆಗ್ರಹಿಸಿದ್ದಾರೆ.

ಯುವತಿ ಜನವರಿ 9ರಂದು ಆತ್ಮಹತ್ಯೆಗೆ ಯತ್ನಿಸಿದ್ದರೆ, ಜನವರಿ 19ರಂದು ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಾಸ್ಟೆಲ್ ವಾರ್ಡನ್‍ನನ್ನು ಬಂಧಿಸಲಾಗಿದೆ.

ಮತಾಂತರ ಕುರಿತಂತೆ ಯುವತಿ ಅಥವಾ ಆಕೆಯ ಕುಟುಂಬ ದೂರು ದಾಖಲಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆಕೆ ಸಾವಿಗೀಡಾಗುವ ಮುನ್ನ ಆಕೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರಲ್ಲಿ ಆಕೆ ಮತಾಂತರ ಕುರಿತು ಹೇಳಿಲ್ಲ ಆದರೆ ಈಗ ಆ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಂಜಾವೂರು ಎಸ್‍ಪಿ ರಾವಳಿ ಪ್ರಿಯಾ ಗಂಧಪುನೇನಿ ಹೇಳಿದ್ದಾರೆ.

ಮೃತ ಯುವತಿಗೆ ಸಂಬಂಧಿಸಿದ ವೀಡಿಯೋ ಚಿತ್ರೀಕರಿಸಿದ ವ್ಯಕ್ತಿಗಾಗಿಯೂ ಪೊಲೀಸರು ಶೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News