ಸೆಂಟ್ರಲ್ ವಿಸ್ಟಾ ಭಾಗವಾಗಿ ಹೊಸ ಸಂಸತ್ ಕಟ್ಟಡದ ವೆಚ್ಚ ರೂ. 282 ಕೋಟಿಯಷ್ಟು ಏರಿಕೆ

Update: 2022-01-21 07:18 GMT
File Photo: PTI

ಹೊಸದಿಲ್ಲಿ: ಕೇಂದ್ರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ನಿರ್ಮಾಣಗೊಳ್ಳಲಿರುವ ಹೊಸ ಸಂಸತ್ ಕಟ್ಟಡದ ಕಾಮಗಾರಿ ವೆಚ್ಚ ಶೇ. 29 ರಷ್ಟು, ಅಂದರೆ ರೂ. 282 ಕೋಟಿಯಷ್ಟು ಏರಿಕೆಯಾಗಲಿದೆ. ಈ ಸಂಸತ್ ಕಟ್ಟಡದ ಅಂದಾಜು ವೆಚ್ಚ ಈ ಹಿಂದೆ ರೂ. 977 ಕೋಟಿ ಎಂದು ನಿಗದಿಪಡಿಸಲಾಗಿತ್ತು. ಯೋಜನೆಯ ಶಂಕುಸ್ಥಾಪನೆ ಡಿಸೆಂಬರ್ 2020ರಲ್ಲಿ  ನೆರವೇರಿಸಲಾಗಿತ್ತು.

ಈ ಪ್ರಸ್ತಾವಿತ ನಾಲ್ಕು ಅಂತಸ್ತಿನ ಸಂಸತ್ ಕಟ್ಟಡವು 13 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ. ಆರಂಭದಲ್ಲಿ ಈ ಯೋಜನೆ ಈ ವರ್ಷ ನಡೆಯುವ  75ನೇ ಸ್ವಾತಂತ್ರ್ಯ ದಿನದ ವೇಳೆ ಪೂರ್ಣಗೊಳ್ಳಬಹುದೆಂದು ಅಂದಾಜಿಸಲಾಗಿತ್ತಾದರೂ ಗಡುವನ್ನು ಅಕ್ಟೋಬರ್ ಗೆ ವಿಸ್ತರಿಸಲಾಗಿದೆ.

ಹೊಸ ಕಟ್ಟಡವು 888 ಸದಸ್ಯರಿಗೆ ಆಸನ ವ್ಯವಸ್ಥೆಯನ್ನು ಲೋಕಸಭಾ ಚೇಂಬರ್ ನಲ್ಲಿ ಕಲ್ಪಿಸಲಿದೆ. ಜಂಟಿ ಅಧಿವೇಶನದ ವೇಳೆ 1224 ಸದಸ್ಯರು ಸೇರುವುದರಿಂದ ಅದಕ್ಕೆ ತಕ್ಕಂತೆ ಮಾರ್ಪಾಟುಗಳನ್ನು ಮಾಡುವ ಆಯ್ಕೆಯೂ ಇದೆ.

ರಾಜ್ಯಸಭಾ ಚೇಂಬರ್ ನಲ್ಲಿ 384 ಸದಸ್ಯರಿಗೆ ಆಸನ ವ್ಯವಸ್ಥೆ ಇರಲಿದ್ದು ಭವಿಷ್ಯದ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ.

ಮರು ಅಭಿವೃದ್ಧಿಗೊಳ್ಳಲಿರುವ ಶ್ರಮ ಶಕ್ತಿ ಭವನದಲ್ಲಿ ಪ್ರತಿ ಸದಸ್ಯರಿಗೆ 40 ಚದರ ಮೀಟರ್ ವಿಸ್ತೀರ್ಣದ ಕಚೇರಿ ಸ್ಥಳವಿರಲಿದ್ದು ಈ ಯೋಜನೆ 2024 ವೇಳೆ ಪೂರ್ಣಗೊಳ್ಳಲಿದೆ.

ದೇಶದ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯನ್ನೂ ಹೊಸ ಸಂಸತ್ ಕಟ್ಟಡ ಬಿಂಬಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News