ಸರಕಾರ ಅಮರ್ ಜವಾನ್ ಜ್ಯೋತಿ ನಂದಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಕೇಂದ್ರ ಸ್ಪಷ್ಟನೆ ನೀಡಿದ್ದು ಹೀಗೆ...

Update: 2022-01-21 10:08 GMT

ಹೊಸದಿಲ್ಲಿ: ಸೈನಿಕರಿಗಾಗಿ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯನ್ನು  50 ವರ್ಷಗಳ ನಂತರ ನಂದಿಸಲಾಗುವುದು ಹಾಗೂ ಇಂದು ನಡೆಯುವ ಸಮಾರಂಭದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ  ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತದೆ. ಜ್ಯೋತಿಯ ಒಂದು ಭಾಗವನ್ನು ಇಂದು ಮಧ್ಯಾಹ್ನ ಯುದ್ಧ ಸ್ಮಾರಕಕ್ಕೆ ಕೊಂಡೊಯ್ಯಲಾಗುತ್ತದೆ ಎಂದು NDTV ವರದಿ ಮಾಡಿದೆ.

ರಾಷ್ಟ್ರ ರಾಜಧಾನಿಯ ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿರುವ ಶಾಶ್ವತ ಜ್ಯೋತಿಯನ್ನು ನಂದಿಸುವ ಹಾಗೂ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಶಾಶ್ವತ ಜ್ಯೋತಿಯನ್ನು ಇಡುವ ಕೇಂದ್ರ ಸರ್ಕಾರದ ಉದ್ದೇಶವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಪ್ರಶ್ನಿಸಿದ್ದಾರೆ.

ಈಗ  "ಸಾಕಷ್ಟು ತಪ್ಪು ಮಾಹಿತಿ" ಪ್ರಸಾರವಾಗುತ್ತಿದೆ. ಅಮರ್ ಜವಾನ್ ಜ್ಯೋತಿಯ ಜ್ವಾಲೆಯನ್ನು ನಂದಿಸಲಾಗುತ್ತಿಲ್ಲ. ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿನ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗುತ್ತಿದೆ" ಎಂದು ಸರಕಾರದ ಮೂಲಗಳು ತಿಳಿಸಿವೆ.

ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರ ನೆನಪಿಗಾಗಿ ಇಂಡಿಯಾ ಗೇಟ್ ಅನ್ನು ಬ್ರಿಟಿಷರು ನಿರ್ಮಿಸಿದರು. 1971ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಅಮರ್ ಜವಾನ್ ಜ್ಯೋತಿಯನ್ನು ಇಂಡಿಯಾ ಗೇಟ್ ಬಳಿ ಇರಿಸಲಾಗಿತ್ತು.

“ನಮ್ಮ ವೀರ ಯೋಧರಿಗಾಗಿ ಉರಿಯುತ್ತಿದ್ದ ಅಮರ ಜ್ಯೋತಿಯನ್ನು ಇಂದು ನಂದಿಸುತ್ತಿರುವುದು ಅತ್ಯಂತ ದುಃಖದ ಸಂಗತಿ. ಕೆಲವು ಜನರು ದೇಶಭಕ್ತಿ ಹಾಗೂ ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.  ಪರವಾಗಿಲ್ಲ. ನಾವು ನಮ್ಮ ಸೈನಿಕರಿಗೆ ಅಮರ್ ಜವಾನ್ ಜ್ಯೋತಿಯನ್ನು ಮತ್ತೊಮ್ಮೆ ಬೆಳಗಿಸುತ್ತೇವೆ’’ ರಾಹುಲ್ ಗಾಂಧಿ ಟ್ವೀಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News