ಸುಪ್ರೀಂ ಕೋರ್ಟ್‌ನ ಹೊರಗೆ ಬೆಂಕಿ ಹಚ್ಚಿಕೊಂಡ ವ್ಯಕ್ತಿ, ಆಸ್ಪತ್ರೆಗೆ ದಾಖಲು

Update: 2022-01-21 18:56 GMT

ಹೊಸದಿಲ್ಲಿ, ಜ. 21: ಸುಪ್ರೀಂ ಕೋರ್ಟ್‌ನ ಹೊರಗೆ 50 ವರ್ಷದ ವ್ಯಕ್ತಿಯೋರ್ವರು ಶುಕ್ರವಾರ ಅಪರಾಹ್ನ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ, ನ್ಯಾಯಾಲಯದ ಆವರಣದಲ್ಲಿ ನಿಯೋಜಿತರಾಗಿದ್ದ ಪೊಲೀಸರು ಕೂಡಲೇ ಬೆಂಕಿ ನಂದಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ನೋಯ್ಡಿದ ನಿವಾಸಿ ರಾಜ್‌ಭರ್ ಗುಪ್ತಾ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಅವರನ್ನ್ನು ಭದ್ರತಾ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು.

ನೆಲದಲ್ಲಿ ಬಿದ್ದಿರುವ ಹಾಗೂ ಅಳುತ್ತಿರುವ ರಾಜ್‌ಭರ್ ಗುಪ್ತಾ ಅವರಿಗೆ ಪೊಲೀಸರು ನೆರವು ನೀಡುತ್ತಿರುವುದನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಬೆಂಕಿಯಿಂದ ಇನ್ನಷ್ಟು ಸುಟ್ಟು ಹೋಗುವುದನ್ನು ತಡೆಯಲು ಸುಪ್ರೀಂ ಕೋರ್ಟ್‌ನ ಆವರಣದಲ್ಲಿ ನಿಯೋಜಿಸಲಾಗಿದ್ದ ಇಬ್ಬರು ಪೊಲೀಸರು ಬಟ್ಟೆಯನ್ನು ತೆಗೆಯುತ್ತಿರುವಂತೆ ‘‘ನಾನು ಬಡ ಕುಟುಂಬದಿಂದ ಬಂದವನು. ನನ್ನ ಕುಟುಂಬ ಹಸಿವಿನಿಂದ ಬಳಲುತ್ತಿದೆ’’ ಎಂದು ರಾಜ್‌ಭರ್ ಗುಪ್ತಾ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಆಗ ಓರ್ವ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಪರಿಸ್ಥಿತಿಯನ್ನು ಸುಧಾರಿಸುವುದಿಲ್ಲ ಎಂದು ಹೇಳುವುದು ಕೂಡ ಕೇಳಿ ಬಂದಿದೆ. ಇಬ್ಬರು ಪೊಲೀಸರು ಅವರನ್ನು ಕೂಡಲೇ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ತನ್ನ ವೈಯುಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದ ಬಳಿಕ ರಾಜ್‌ಭರ್ ಸುಪ್ರೀಂ ಕೋರ್ಟ್‌ಗೆ ಬಂದಿದ್ದಾನೆ. ಆದರೆ, ಆತನೊಂದಿಗೆ ಇನ್ನಷ್ಟೇ ವಿವರವಾಗಿ ಮಾತನಾಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಇಂತಹ ಎರಡನೇ ಘಟನೆ ಇದಾಗಿದೆ. 8 ತಿಂಗಳ ಹಿಂದೆ ಇದೇ ರೀತಿ ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News