ಆಸ್ಕರ್ಸ್ ರೇಸಿನಲ್ಲಿ 'ಜೈ ಭೀಮ್', 'ಮರಕ್ಕರ್ ಅರಬಿಕಡಲಿಂಡೆ ಸಿಂಹಂ'

Update: 2022-01-21 10:18 GMT

ಹೊಸದಿಲ್ಲಿ:  ನಟ ಸೂರ್ಯ ಅಭಿನಯದ ಚಲನಚಿತ್ರ 'ಜೈ ಭೀಮ್' ಚಲನಚಿತ್ರ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಪ್ರವೇಶ ಪಡೆದಿದೆ. ಗುರುವಾರ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಎಂಡ್ ಸಾಯನ್ಸಸ್ 94ನೇ ಆಸ್ಕರ್ ಪ್ರಶಸ್ತಿಗೆ ಪರಿಗಣಿಸಲು ಅರ್ಹತೆ ಪಡೆದ 276 ಚಲನಚಿತ್ರಗಳ ಪಟ್ಟಿ ಬಿಡುಗಡೆಗೊಳಿಸಿದ್ದು ಈ ಪಟ್ಟಿಯಲ್ಲಿ 'ಜೈ ಭೀಮ್' ಸ್ಥಾನ ಪಡೆದಿದೆ. ಈ ವರ್ಷದ ಅತ್ಯುತ್ತಮ ಚಿತ್ರಕ್ಕಾಗಿ ಸ್ಪರ್ಧೆಗೆ ಈ ಮೂಲಕ 'ಜೈ ಭೀಮ್' ಎಂಟ್ರಿ ಪಡೆದಿದೆ. ಈ ಚಿತ್ರದ ಹೊರತಾಗಿ ಮೋಹನ್‍ಲಾಲ್ ಅಭಿನಯದ 'ಮರಕ್ಕರ್ ಅರಬಿಕಡಲಿಂಡೆ ಸಿಂಹಂ' ಚಿತ್ರ ಕೂಡ ಆಸ್ಕರ್ ರೇಸಿನಲ್ಲಿದೆ.

ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪಡೆದ ಚಿತ್ರಗಳಿಗೆ ಮತದಾನ ಪ್ರಕ್ರಿಯೆ ಜನವರಿ 27ರಂದು ಆರಂಭಗೊಂಡು ಫೆಬ್ರವರಿ 1ಕ್ಕೆ ಅಂತ್ಯವಾಗಲಿದೆ. ಅಂತಿಮ ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಫೆಬ್ರವರಿ 8, 2022ರಂದು ಲಭ್ಯಗೊಳ್ಳುವ ನಿರೀಕ್ಷೆಯಿದೆ.

ಎರಡು ದಿನಗಳ ಹಿಂದೆಯಷ್ಟೇ ಜೈ ಭೀಮ್ ಚಿತ್ರ ಆಸ್ಕರ್ಸ್ ಯುಟ್ಯೂಬ್ ಚಾನೆಲ್‍ನಲ್ಲಿ ಫೀಚರ್‍ಗೊಂಡಿತ್ತು. ನವೆಂಬರ್ 2021ರಲ್ಲಿ ಬಿಡುಗಡೆಗೊಂಡ ಈ ಚಿತ್ರದಲ್ಲಿ ಸೂರ್ಯ ಹೊರತಾಗಿ ಲಿಜೊಮೊಲ್ ಜೋಸ್ ಮತ್ತು ಮಣಿಕಂಠನ್ ಪ್ರಮುಖ ತಾರಾಗಣದಲ್ಲಿದ್ದಾರೆ. ಟಿ ಜಿ ಜ್ಞಾನವೇಲ್ ನಿರ್ದೇಶನದ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಹಿಂದೆ ಗೋಲ್ಡನ್ ಗ್ಲೋಬ್ಸ್ ಅತ್ಯುತ್ತಮ ಇಂಗ್ಲಿಷೇತರ ಭಾಷಾ ಚಿತ್ರ ವಿಭಾಗದಲ್ಲಿ ಜೈ ಭೀಮ್ ನಾಮನಿರ್ದೇಶನಗೊಂಡಿತ್ತು

"ಹೋರಾಟಗಾರ-ವಕೀಲ ಚಂದ್ರು ತನ್ನ ಸತತ ಪ್ರಯತ್ನಗಳಿಂದ ತಮಿಳುನಾಡಿನ ಆದಿವಾಸಿ ಜನಾಂಗಗಳಿಗೆ ನ್ಯಾಯ ದೊರಕಿಸಿಕೊಡುವ ನಿಜ ಜೀವನದ ವೃತ್ತಾಂತಗಳನ್ನು ಈ ಚಿತ್ರ ಹೆಣೆದಿದೆ,'' ಎಂದು ಆಸ್ಕರ್ಸ್ ಯುಟ್ಯೂಬ್ ಚಾನೆಲ್ ಈ ಚಿತ್ರವನ್ನು ವಿವರಿಸಿದೆ.

ಪೊಲೀಸ್ ಕಸ್ಟಡಿಯಲ್ಲಿರುವಾಗ ನಾಪತ್ತೆಯಾದ ರಾಜಾ ಕಣ್ಣು ಎಂಬ ಆದಿವಾಸಿ ಸಮುದಾಯದ ವ್ಯಕ್ತಿಯ ಗರ್ಭಿಣಿ ಪತ್ನಿ ಸೆಂಗನಿ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ತಾನು ಮಾಡದ ತಪ್ಪಿಗೆ ಬಂಧಿಯಾಗಿದ್ದ ರಾಜಾ ನಂತರ ಪೊಲೀಸ್ ಹಿಂಸೆಯಿಂದ ಪ್ರಾಣ ಕಳೆದುಕೊಳ್ಳುತ್ತಾನೆ. ಈ ಹಂತದಲ್ಲಿ ವಕೀಲ ಚಂದ್ರು ಸಹಾಯದೊಂದಿಗೆ ಸೆಂಗಣಿ ಆದಿವಾಸಿ ಜನರಿಗೆ ನ್ಯಾಯಕ್ಕಾಗಿ ಹೋರಾಡುತ್ತಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News