ಐಎಎಸ್ ಸೇವಾ ನಿಯಮಗಳನ್ನು ಬದಲಿಸಲು ಹೊರಟ ಕೇಂದ್ರದ ವಿರುದ್ಧ ಮಾಜಿ ಐಎಎಸ್ ಅಧಿಕಾರಿಗಳ ಆಕ್ರೋಶ

Update: 2022-01-21 13:36 GMT
ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ,ಜ.21: ಕೇಂದ್ರದಲ್ಲಿ ಐಎಎಸ್ ಅಧಿಕಾರಿಗಳ ನಿಯೋಜನೆಯ ಸಂದರ್ಭ ಅವರು ರಾಜ್ಯ ಸರಕಾರಗಳ ಒಪ್ಪಿಗೆಯನ್ನು ಪಡೆಯುವ ಅಗತ್ಯವನ್ನು ನಿವಾರಿಸಲು ಕೇಂದ್ರ ಸರಕಾರವು ಐಎಎಸ್ ಸೇವಾ ನಿಯಮಗಳನ್ನು ಬದಲಿಸಲು ಬಯಸಿದೆ. ಈ ಪ್ರಸ್ತಾವವು ವಿವಾದವನ್ನು ಸೃಷ್ಟಿಸಿದ್ದು, ಹಲವಾರು ಮುಖ್ಯಮಂತ್ರಿಗಳು ಮತ್ತು ರಾಜಕೀಯ ನಾಯಕರು ರಾಜ್ಯಗಳಿಂದ ಅಧಿಕಾರವನ್ನು ಕಿತ್ತುಕೊಳ್ಳುವ ಬಗ್ಗೆ ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರದ ಕಾರ್ಯ ನಿರ್ವಹಣೆಗೆ ನಿಜವಾಗಿಯೂ ಅಧಿಕಾರಿಗಳ ಕೊರತೆಯಿದೆಯಾದರೂ ರಾಜ್ಯ ಸರಕಾರಗಳಿಂದ ಅಧಿಕಾರಿಗಳನ್ನು ‘ಕಿತ್ತುಕೊಳ್ಳುವ’ ಈ ಕ್ರಮ ನೆರವಾಗುವುದಿಲ್ಲ ಮತ್ತು ಸಹಕಾರಿ ಒಕ್ಕೂಟವಾದಕ್ಕೆ ವಿರುದ್ಧವಾಗಿದೆ ಎಂದು thenewsminute.com ನೊಂದಿಗೆ ಮಾತನಾಡಿದ ಹಲವಾರು ಅಧಿಕಾರಿಗಳು ಹೇಳಿದ್ದಾರೆ

ಐಎಎಸ್ ಅಧಿಕಾರಿಗಳು ಸೇವೆಗೆ ಸೇರುವಾಗ ತಾವು ಕೆಲಸ ಮಾಡಲು ಬಯಸುವ ನಿರ್ದಿಷ್ಟ ರಾಜ್ಯ ಅಥವಾ ರಾಜ್ಯಗಳ ಕೇಡರ್‌ನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಅಧಿಕಾರಿಗಳನ್ನು ಕೇಂದ್ರವು ಆಯ್ಕೆ ಮಾಡಿದರೆ ಇತರ ಎಲ್ಲ ಪ್ರಾಯೋಗಿಕ ಉದ್ದೇಶಕ್ಕಾಗಿ ಅವರು ತಾವು ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಸರಕಾರದ ಅಧೀನದಲ್ಲಿರುತ್ತಾರೆ. ಆದಾಗ್ಯೂ ಕೇಂದ್ರ ಸರಕಾರಕ್ಕೆ ತನ್ನ ಸಚಿವಾಲಯಗಳಿಗಾಗಿ ಅಧಿಕಾರಿಗಳ ಅಗತ್ಯವಿರುತ್ತದೆ ಮತ್ತು ಆಯಾ ರಾಜ್ಯ ಸರಕಾರಗಳ ಒಪ್ಪಿಗೆಯೊಂದಿಗೆ ವಿವಿಧ ರಾಜ್ಯ ಕೇಡರ್‌ಗಳಿಂದ ಈ ಐಎಎಸ್ ಅಧಿಕಾರಿಗಳನ್ನು ಅದು ಎರವಲು ಪಡೆದುಕೊಳ್ಳುತ್ತದೆ.
ಸಂಬಂಧಿಸಿದ ರಾಜ್ಯ ಸರಕಾರದ ಒಪ್ಪಿಗೆಯೊಂದಿಗೆ ಯಾವುದೇ ಐಎಎಸ್ ಅಧಿಕಾರಿಯನ್ನು ಕೇಂದ್ರದ ನಿಯೋಜನೆಗೆ ನೇಮಕಗೊಳಿಸಬಹುದು ಎಂದು ಐಎಎಸ್ (ಕೇಡರ್) ನಿಯಮಾವಳಿಗಳು,1954ರ ನಿಯಮ 6 ಹೇಳುತ್ತದೆ. ಅಧಿಕಾರಿಯ ವರ್ಗಾವಣೆಗೆ ರಾಜ್ಯ ಸರಕಾರದ ಒಪ್ಪಿಗೆಯ ಅಗತ್ಯವನ್ನು ತೆಗೆದುಹಾಕಲು ಈ ನಿಯಮವನ್ನು ತಿದ್ದುಪಡಿಗೊಳಿಸಲು ಕೇಂದ್ರ ಸರಕಾರವು ಈಗ ಬಯಸಿದೆ.

ಮಾಧ್ಯಮಗಳು ವರದಿ ಮಾಡಿರುವಂತೆ ಕೇಂದ್ರ ಸರಕಾರವು ನಿಗದಿಗೊಳಿಸುವ ಗಡುವಿನೊಳಗೆ ರಾಜ್ಯ ಕೇಡರ್‌ಗಳ ಅಧಿಕಾರಿಗಳು ಕೇಂದ್ರದ ನಿಯೋಜನೆಗೆ ತೆರಳುವುದನ್ನು ರಾಜ್ಯವು ಖಚಿತಪಡಿಸಬೇಕು ಎನ್ನುವುದು ನಿಯಮ 6ರ ಪ್ರಸ್ತಾವಿತ ಪ್ರಮಖ ಬದಲಾವಣೆಗಳಲ್ಲಿ ಒಂದಾಗಿದೆ. ರಾಜ್ಯ ಮತ್ತು ಕೇಂದ್ರದ ನಡುವೆ ಯಾವುದೇ ವಿವಾದವುಂಟಾದ ಸಂದರ್ಭದಲ್ಲಿ ಕೇಂದ್ರ ಸರಕಾರವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ರಾಜ್ಯವು ಅದನ್ನು ಪಾಲಿಸಬೇಕು ಎಂದೂ ತಿದ್ದುಪಡಿಗಳಲ್ಲಿ ಪ್ರಸ್ತಾವಿಸಲಾಗಿದೆ. ತಿದ್ದುಪಡಿಗಳು ಕೇಂದ್ರ ಸರಕಾರಕ್ಕೆ ಹೆಚ್ಚಿನ ಅಧಿಕಾರವನ್ನು ಒದಗಿಸುವ ಮೂಲಕ ದೇಶದ ಒಕ್ಕೂಟ ಸ್ವರೂಪದ ಮೇಲೆ ಗಂಭೀರ ಪರಿಣಾಮವನ್ನು ಬೀರಬಲ್ಲವು ಎಂದು thenewsminute.com ವರದಿ ಮಾಡಿದೆ.

ಇತ್ತೀಚಿಗೆ ಕೇಂದ್ರ ಸರಕಾರವು ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುವ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಐಎಎಸ್ ಕೇಡರ್ ನಿಯಮಗಳನ್ನು ಬದಲಿಸುವ ಇತ್ತೀಚಿನ ಪ್ರಯತ್ನವು ಈ ಪ್ರವೃತ್ತಿಯ ಭಾಗವಾಗಿದೆ ಎಂದು ಭಾರತ ಸರಕಾರದ ಮಾಜಿ ಕಾರ್ಯದರ್ಶಿ ಇಎಎಸ್ ಶರ್ಮಾ ಹೇಳಿದರು. ನೂತನ ತಿದ್ದುಪಡಿಗಳು ಐಎಎಸ್ ಅಧಿಕಾರಿಗಳ ವೈಯಕ್ತಿಕ ಸ್ವಾತಂತ್ರವನ್ನೂ ತೀವ್ರವಾಗಿ ನಿರ್ಬಂಧಿಸುತ್ತವೆ ಮತ್ತು ತಮ್ಮ ಇಚ್ಛೆಗೆ ವಿರುದ್ಧವಾಗಿ ನಿಯೋಜನೆಗೆ ತೆರಳುವುದನ್ನು ಅವರಿಗೆ ಅನಿವಾರ್ಯವಾಗಿಸುತ್ತವೆ ಎಂದು ಮಾಜಿ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ ಹೇಳಿದರು.

ಅಧಿಕಾರಿಗಳು, ಜಿಲ್ಲಾಧಿಕಾರಿಗಳೂ ಸಹ ಈ ತಿದ್ದುಪಡಿಗಳಿಂದಾಗಿ ಕೇಂದ್ರ ಸರಕಾರದ ನೇರ ನಿಯಂತ್ರಣಕ್ಕೆ ಒಳಪಡುತ್ತಾರೆ ಮತ್ತು ಅಧಿಕಾರವು ರಾಜ್ಯದಿಂದ ಕೇಂದ್ರಕ್ಕೆ ವರ್ಗಾವಣೆಗೊಳ್ಳುತ್ತದೆ ಎಂದರು.

ಕೇಂದ್ರ ನಿಯೋಜನೆಗೆ ಅಧಿಕಾರಿಗಳ ಕೊರತೆಯಿರುವುದು ನಿಜ. 90ರ ದಶಕದಲ್ಲಿ ಐಎಎಸ್ ಅಧಿಕಾರಿಗಳ ನೇಮಕದ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು, 80ರ ದಶಕದಲ್ಲಿ ಇದು 120 ಮತ್ತು 160ರ ನಡುವೆ ಇರುತ್ತಿತ್ತು. ಇದನ್ನೀಗ ವರ್ಷಕ್ಕೆ 40ರಿಂದ 50ಕ್ಕೆ ಇಳಿಸಲಾಗಿದೆ. ಇದು ಒಟ್ಟಾರೆ ಐಎಎಸ್ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗುವಂತೆ ಮಾಡಿದೆ. ಐಎಎಸ್ ಕೇಡರ್ 6,400ಕ್ಕೂ ಅಧಿಕ ಬಲವನ್ನು ಹೊಂದಿರಬೇಕಿತ್ತು,ಆದರೆ ಈಗ ಕೇವಲ 4,000ಕ್ಕೂ ಕೊಂಚ ಹೆಚ್ಚು ಐಎಎಸ್‌ ಅಧಿಕಾರಿಗಳಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿಗೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಮಾಜಿ ಐಎಎಸ್ ಅಧಿಕಾರಿ ಪಿ.ವಿ.ರಮೇಶ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News