ಲಖಿಂಪುರಖೇರಿ ಹಿಂಸಾಚಾರ ಪ್ರಕರಣ : 7 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

Update: 2022-01-21 15:19 GMT
File Photo: PTI

ಲಖಿಂಪುರಖೇರಿ, ಜ. 21: ಉತ್ತರಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದ ಸಂದರ್ಭ  ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಚಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳ ವಿರುದ್ಧ 4 ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ.

ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿ ಎಸ್‌ಐಟಿ ತನಿಖಾಧಿಕಾರಿಗಳು 500 ಪುಟಗಳ ಆರೋಪ ಪಟ್ಟಿಯನ್ನು ಶುಕ್ರವಾರ ನ್ಯಾಯಾಂಗ ದಂಡಾಧಿಕಾರಿಯವರ ಮುಂದೆ ಸಲ್ಲಿಸಿದ್ದಾರೆ. ಕಾರು ಢಿಕ್ಕಿಯಾಗಿ ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತ ಸಾವನ್ನಪ್ಪಿದ ಬಳಿಕ ಲಖಿಂಪುರಖೇರಿಯಲ್ಲಿ ಭುಗಿಲೆದ್ದ ಹಿಂಸಾಚಾರದ ಸಂದರ್ಭ ಮೂವರನ್ನು ಥಳಿಸಿ ಹತ್ಯೆಗೈದ ಆರೋಪವನ್ನು ಎಲ್ಲ 7 ಮಂದಿ ಎದುರಿಸುತ್ತಿದ್ದಾರೆ. ಈ ಎಲ್ಲ ಆರೋಪಿಗಳು ಸದ್ಯ ಕಾರಾಗೃಹದಲ್ಲಿದ್ದಾರೆ. ಉತ್ತರಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 3ರಂದು ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಘಟನೆಯಲ್ಲಿ ನಾಲ್ವರು ರೈತರು, ಇಬ್ಬರು ಬಿಜೆಪಿ ಕಾರ್ಯಕರ್ತರು, ಓರ್ವ ಚಾಲಕ ಹಾಗೂ ಸ್ಥಳೀಯ ಪತ್ರಕರ್ತ ಸೇರಿದಂತೆ ಒಟ್ಟು 8 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಪ್ರಧಾನ ಆರೋಪಿ. ಅಕ್ಟೋಬರ್ 9ರಂದು ಬಂಧನವಾದ ಬಳಿಕ ಅವರು ಕಾರಾಗೃಹದಲ್ಲಿದ್ದಾರೆ.

ಘಟನೆಗೆ ಸಂಬಂಧಿಸಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ರೈತರು ಹಾಗೂ ಪತ್ರಕರ್ತನ ಸಾವಿಗೆ ಸಂಬಂಧಿಸಿ ಆಶಿಷ್ ಮಿಶ್ರಾ ಹಾಗೂ ಇತರ 15ರಿಂದ 20 ಮಂದಿ ವಿರುದ್ಧ ರೈತ ಜಗಜೀತ್ ಸಿಂಗ್ ಅವರು ಮೊದಲ ಎಫ್‌ಐಆರ್ ದಾಖಲಿಸಿದ್ದರು. ಪಕ್ಷದ ಇಬ್ಬರು ಕಾರ್ಯಕರ್ತರು ಹಾಗೂ ಓರ್ವ ಚಾಲಕನ ಸಾವಿಗೆ ಸಂಬಂಧಿಸಿ ಅನಾಮಿಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಸುಮಿತ್ ಜೈಸ್ವಾಲ್ ಎರಡನೇ ಎಫ್‌ಐಆರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News