ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರಕ್ಕೆ ಜಿಲ್ಲೆ ಆಧಾರಿತ ಉತ್ತಮ ಆಡಳಿತ ಸೂಚ್ಯಂಕ

Update: 2022-01-21 16:05 GMT

ಹೊಸದಿಲ್ಲಿ,ಜ.21: ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದ 20 ಜಿಲ್ಲೆಗಳಿಗಾಗಿ ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕವನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶನಿವಾರ ಬಿಡುಗಡೆಗೊಳಿಸಲಿದ್ದಾರೆ.

ಕೇಂದ್ರ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವ ಡಾ.ಜಿತೇಂದ್ರ ಸಿಂಗ್ ಮತ್ತು ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

2021,ಜು.2ರಂದು ಶ್ರೀನಗರದಲ್ಲಿ ಉತ್ತಮ ಆಡಳಿತ ಪದ್ಧತಿಗಳ ಪುನರಾವರ್ತನೆ ಕುರಿತ ಪ್ರಾದೇಶಿಕ ಸಮ್ಮೇಳನದಲ್ಲಿ ಅಂಗೀಕರಿಸಿದ್ದ ‘ಬೆಹ್ತರ್ ಎ-ಹುಕುಮತ್-ಕಾಶ್ಮೀರ ಎಲಾಮಿಯಾ’ನಿರ್ಣಯದಲ್ಲಿ ಮಾಡಲಾಗಿದ್ದ ಪ್ರಕಟಣೆಗೆ ಅನುಗುಣವಾಗಿ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ದೂರುಗಳ ಇಲಾಖೆಯು ಜಮ್ಮು-ಕಾಶ್ಮೀರ ಸರಕಾರದ ಸಹಭಾಗಿತ್ವದೊಂದಿಗೆ ಜಮ್ಮು-ಕಾಶ್ಮೀರದ ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕವನ್ನು ಸಿದ್ಧಪಡಿಸಿದೆ.

ಸೂಚ್ಯಂಕವನ್ನು ರೂಪಿಸುವ ಪ್ರಕ್ರಿಯೆ 2021,ಜುಲೈನಲ್ಲಿ ಆರಂಭಗೊಂಡಿತ್ತು. ಜಮ್ಮು-ಕಾಶ್ಮೀರವು ಇಂತಹ ಸೂಚ್ಯಂಕವನ್ನು ಹೊಂದಿರುವ ಮೊದಲ ಕೇಂದ್ರಾಡಳಿತ ಪ್ರದೇಶವಾಗಲಿದೆ ಎಂದು ಹೇಳಿಕೆಯು ತಿಳಿಸಿದೆ.

ಸೂಚ್ಯಂಕವು ಜಿಲ್ಲಾಮಟ್ಟದಲ್ಲಿ ಉತ್ತಮ ಆಡಳಿತವನ್ನು ಗುರುತಿಸುವಲ್ಲಿ ಪ್ರಮುಖ ಆಡಳಿತಾತ್ಮಕ ಕ್ರಮವಾಗಿದ್ದು,ಜಿಲ್ಲಾ/ರಾಜ್ಯಮಟ್ಟದಲ್ಲಿ ಅಂಕಿಅಂಶಗಳ ಸಕಾಲಿಕ ಸಂಗ್ರಹ ಮತ್ತು ಪ್ರಕಟಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದೂ ಹೇಳಿಕೆಯು ವಿವರಿಸಿದೆ.

ಸೂಚ್ಯಂಕವು ಒಂದು ಮೈಲಿಗಲ್ಲಾಗಿದ್ದು,ಜಮ್ಮು-ಕಾಶ್ಮೀರದಲ್ಲಿನ ಎಲ್ಲ ಜಿಲ್ಲೆಗಳ ಸಾಧನೆಗಳ ಸಾಕ್ಷಾಧಾರಿತ ವೌಲ್ಯಮಾಪನಕ್ಕೆ ಸದೃಢ ಚೌಕಟ್ಟನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News