ಭಾರತ ವಿರೋಧಿ ಸುದ್ದಿಗಾಗಿ ಪಾಕ್‌ನ 35 ಯೂಟ್ಯೂಬ್ ಚಾನೆಲ್‌ಗಳಿಗೆ ನಿಷೇಧ

Update: 2022-01-21 16:38 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.21: ಸುಳ್ಳು ಮಾಹಿತಿಗಳನ್ನು ಹರಡುತ್ತಿರುವುದಕ್ಕಾಗಿ 35 ಯೂಟ್ಯೂಬ್ ಚಾನೆಲ್‌ಗಳು,ಎರಡು ಟ್ವಿಟರ್ ಖಾತೆಗಳು,ಎರಡು ಇನ್‌ಸ್ಟಾಗ್ರಾಂ ಖಾತೆಗಳು,ಎರಡು ವೆಬ್‌ಸೈಟ್‌ಗಳು ಮತ್ತು ಒಂದು ಫೇಸ್‌ಬುಕ್ ಖಾತೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಗುರುವಾರ ತಡೆ ಹಿಡಿದಿದೆ. ಈ ಎಲ್ಲ ಖಾತೆಗಳಲ್ಲಿಯ ಸಾಮಾನ್ಯ ಅಂಶವೆಂದರೆ ಅವು ಪಾಕಿಸ್ತಾನದಿಂದ ನಿರ್ವಹಣೆಯಾಗುತ್ತಿದ್ದವು ಹಾಗೂ ಭಾರತ ವಿರೋಧಿ ಸುದ್ದಿಗಳನ್ನು ಮತ್ತು ಇತರ ವಿಷಯಗಳನ್ನು ಹರಡುತ್ತಿದ್ದವು ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ವಿಕ್ರಮ ಸಹಾಯ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.

ಈ ಎಲ್ಲ ಖಾತೆಗಳನ್ನು ತಡೆಹಿಡಿಯುವಂತೆ ಸಚಿವಾಲಯವು ದೂರಸಂಪರ್ಕ ಇಲಾಖೆಯ ಮೂಲಕ ಆಯಾ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಮತ್ತು ಅಂತರ್ಜಾಲ ಸೇವೆ ಪೂರೈಕೆದಾರರಿಗೆ ಆದೇಶಗಳನ್ನು ಹೊರಡಿಸಿದೆ.

ತಡೆ ಹಿಡಿಯಲಾಗಿರುವ ಖಾತೆಗಳು ಭಾರತೀಯ ಸಶಸ್ತ್ರ ಪಡೆಗಳು,ಕಾಶ್ಮೀರ,ಇತರ ದೇಶಗಳೊಂದಿಗೆ ಭಾರತದ ವಿದೇಶಾಂಗ ಸಂಬಂಧ ಮತ್ತು ಮಾಜಿ ಸಿಡಿಎಸ್ ಬಿಪಿನ್ ರಾವತ್ ಅವರ ಸಾವಿನ ಕುರಿತು ವಿಷಯಗಳನ್ನು ಒಳಗೊಂಡಿದ್ದವು. ಇವು 1.2 ಕೋ.ಗೂ ಅಧಿಕ ಚಂದಾದಾರರನ್ನು ಮತ್ತು 130 ಕೋ.ವೀಕ್ಷಣೆಗಳನ್ನು ಹೊಂದಿದ್ದವು ಎಂದು ಸಹಾಯ್ ತಿಳಿಸಿದರು.

ಸಚಿವಾಲಯವು ತಡೆಹಿಡಿದಿರುವ 35 ಖಾತೆಗಳು ಪಾಕಿಸ್ತಾನದಿಂದ ಕಾರ್ಯ ನಿರ್ವಹಿಸುತ್ತಿದ್ದು,ನಾಲ್ಕು ಸಂಘಟಿತ ಸುಳ್ಳುಸುದ್ದಿ ಜಾಲಗಳ ಭಾಗವಾಗಿವೆ ಎಂದು ಗುರುತಿಸಲಾಗಿದೆ.

14 ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾರ್ಯಾಚರಿಸುತ್ತಿರುವ ‘ಅಪ್ನಿ ದುನಿಯಾ ನೆಟ್‌ರ್ಕ್’ ಮತ್ತು 13 ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾರ್ಯಾಚರಿಸುತ್ತಿರುವ ‘ತಲ್ಹಾ ಫಿಲ್ಮ್ಸ್ ನೆಟ್‌ವರ್ಕ್ ತಡೆ ಹಿಡಿದಿರುವ ಖಾತೆಗಳಲ್ಲಿ ಸೇರಿವೆ ಎಂದು ಸಚಿವಾಲಯವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News