ಮಾ ವಿದ್ವಿಷಾವಹೈ

Update: 2022-01-22 03:20 GMT

ಸುತ್ತಮುತ್ತ ದ್ವೇಷದ ಮಾತುಗಳ, ಸಾಮೂಹಿಕ ಹತ್ಯೆಗೆ, ನರಮೇಧಕ್ಕೆ ನೀಡುವ ಕರೆಗಳ ಧ್ವನಿ ಮಾರ್ದನಿಗೊಳ್ಳುತ್ತಿರುವಾಗ ನಾವು ತುಂಬಾ ಹೆಮ್ಮೆ ಪಡುವ ಪ್ರಾಚೀನ ಭಾರತೀಯ ಪರಂಪರೆಯ ಅಭಿಜಾತ ಪಠ್ಯಗಳಲ್ಲಿ ಪ್ರೀತಿಯ ಮಾತುಗಳಿಗಾಗಿ, ಕಾರುಣ್ಯದ ಸಿಂಚನದ ಸೊಲ್ಲುಗಳಿಗಾಗಿ ತಡಕಾಡಿದೆ.

ಆಗ ತೈತ್ತಿರೀಯ ಉಪನಿಷತ್‌ನ ವಿಶ್ವವಿಖ್ಯಾತವಾದ ಶಾಂತಿಮಂತ್ರ ಕಾಣಿಸಿತು: ‘ನಮ್ಮನ್ನು ಅವನು ರಕ್ಷಿಸಲಿ. ನಾವು ಜೊತೆಯಾಗಿ ತಿನ್ನೋಣ, ಬದುಕೋಣ. ಜತೆಯಾಗಿ ದುಡಿಯೋಣ. ನಮ್ಮ ಜ್ಞಾನಾರ್ಜನೆ, ಅಧ್ಯಯನ ತೇಜಸ್ಸಿನಿಂದ ಕೂಡಿರಲಿ. ನಾವು ಪರಸ್ಪರ ದ್ವೇಷಿಸದಿರೋಣ. ಎಲ್ಲೆಲ್ಲೂ ಶಾಂತಿ ನೆಲೆಸಲಿ.’

ಹೀಗೆ, ಸಾರ್ವಕಾಲಿಕವಾಗಿ ಶಾಂತಿಯನ್ನು ಹಾರೈಸುವ, ಹಾಡಿಹೊಗಳುವ ಶಾಂತಿಮಂತ್ರದ ಸಾಲುಗಳಲ್ಲಿ ‘‘ಮಾ ವಿದ್ವಿಷಾವಹೈ’’ ನಾವು ಯಾರನ್ನೂ ದ್ವೇಷಿಸದಿರೋಣ, ಅಂದರೆ ಎಲ್ಲರನ್ನೂ ಪ್ರೀತಿಯಿಂದ ನಡೆಸಿಕೊಳ್ಳೋಣ ಎಂಬುದು ಜಗತ್ತಿನ ಎಲ್ಲ ಧರ್ಮಗಳೂ ಎಲ್ಲ ಕಾಲದಲ್ಲೂ ಜನರಿಗೆ ಹೇಳಿದ ಹಿತವಚನ. ಬೈಬಲ್, ಕುರ್‌ಆನ್, ಗ್ರಂಥಸಾಹಿಬ್, ವೇದ, ಉಪನಿಷತ್ -ಯಾವುದೂ ಮನುಷ್ಯರನ್ನು, ನಿನ್ನ ಸಹಜೀವಿಗಳನ್ನು ಕೊಲ್ಲು ಎಂದು ಎಲ್ಲಿಯೂ ಹೇಳಿಲ್ಲ. ನಮ್ಮ ಪರಂಪರೆಯಲ್ಲಿ ಹಲವು ಶಾಂತಿಮಂತ್ರ ಗಳಿವೆ ಮತ್ತು ಆ ಯಾವ ಮಂತ್ರದಲ್ಲಿಯೂ ದ್ವೇಷದ, ಹಿಂಸೆಯ, ಹತ್ಯೆಯ ಮಾತಿಲ್ಲ; ಅಲ್ಲೆಲ್ಲ ಇರುವುದು ಶಾಂತಿ, ಸಹನೆ, ಸಹಬಾಳ್ವೆ, ಸಮೃದ್ಧಿಯ ಮಾತು ಎಂಬುದನ್ನು ಸನಾತನ ಧರ್ಮದ ಬಗ್ಗೆ ಭಾಷಣ ಬಿಗಿಯುವವರೆಲ್ಲರೂ ಗಮನಿಸಬೇಕಾಗಿದೆ.

ಪವಿತ್ರ ಬೈಬಲ್ ‘ನಿನ್ನ ನೆರೆಮನೆಯಾತನನ್ನು ಪ್ರೀತಿಸು’ (ಲವ್ ದೈ ನೈಬರ್) ಎನ್ನುತ್ತದೆಯೇ ಹೊರತು, ನಿನ್ನ ನೆರೆಕರೆಯವರನ್ನು ದ್ವೇಷಿಸು, ಹಿಂಸಿಸು, ಕೊಲ್ಲು ಎಂದು ಹೇಳುವುದಿಲ್ಲ ಪವಿತ್ರ ಕುರ್‌ಆನ್ ‘ಯಾರು ತನ್ನ ನೆರೆಮನೆಯಾತ ಹಸಿದಿರುವಾಗ ತಾನು ಮಾತ್ರ ಹೊಟ್ಟೆ ತುಂಬ ಉಣ್ಣುತ್ತಾನೆಯೋ ಅವನು ದೇವರಲ್ಲಿ ನಂಬಿಕೆ ಇಟ್ಟರೂ ವ್ಯರ್ಥ’ ಎನ್ನುತ್ತದೆ. ವಚನ ವಾಙ್ಮಯದ ಸಂತ ಬಸವಣ್ಣ ‘ಕಳಬೇಡ ಕೊಲಬೇಡ’ ಎನ್ನುತ್ತಾನೆ; ಕಳ್ಳತನ ಮಾಡು, ಕೊಲ್ಲು ಎಂದು ಯಾವತ್ತೂ ಹೇಳುವುದಿಲ್ಲ.

ಭಾರತೀಯ ಪರಂಪರೆಯಲ್ಲಿ ಪ್ರೀತಿ, ತ್ಯಾಗ, ಕರುಣೆ ಹಾಗೂ ದ್ವೇಷದ ದಳ್ಳುರಿಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಮನುಷ್ಯ ತನ್ನನ್ನು ನಿಯಂತ್ರಿಸಿ ಕೊಳ್ಳುವುದಕ್ಕೆ ಎಷ್ಟೊಂದು ಮಹತ್ವ ನೀಡಲಾಗಿದೆ ಎಂದರೆ ಭಾರತೀಯ ತತ್ವಶಾಸ್ತ್ರದಿಂದ ಪ್ರಭಾವಿತನಾದ ನೊಬೆಲ್ ಪ್ರಶಸ್ತಿ ವಿಜೇತ ಆಂಗ್ಲ ಕವಿ ಟಿ.ಎಸ್. ಏಲಿಯಟ್ ತನ್ನ ಪ್ರಸಿದ್ಧ ಕವನವಾಗಿರುವ ‘ದಿ ವೇಸ್ಟ್ ಲ್ಯಾಂಡ್’ನ ಕೊನೆಯಲ್ಲಿ ಬೃಹದಾರಣ್ಯಕೋಪನಿಷತ್‌ನ ಮೂರು ಶಬ್ದಗಳನ್ನು ಉಲ್ಲೇಖಿಸುತ್ತಾನೆ. ಪ್ರಥಮ ಮಹಾಯುದ್ಧದ ಪರಿಣಾಮವಾಗಿ ಜರ್ಜರಿತಗೊಂಡು ಅಸ್ತವ್ಯಸ್ತವಾಗಿದ್ದ ವಿಶ್ವದಲ್ಲಿ ಮತ್ತೆ ಶಾಂತಿ ನೆಲೆಸಬೇಕಾದರೆ ಏನು ಮಾಡಬೇಕು? ಪುನಃ ವಿಶ್ವಯುದ್ಧ ನಡೆಯದಂತೆ ತಡೆಯುವುದು ಹೇಗೆ? ಎಂಬ ಕುರಿತು ವಿಶ್ವ ನಾಯಕರು ಚರ್ಚಿಸುತ್ತಿದ್ದ ಕಾಲ ಅದು. ಆ ಸನ್ನಿವೇಶದಲ್ಲಿ 1922ರಲ್ಲಿ ‘ದಿ ವೇಸ್ಟ್‌ಲ್ಯಾಂಡ್’ ಕವನವನ್ನು ಬರೆದ ಏಲಿಯಟ್ ತನ್ನ ಕವನದ ನಾಲ್ಕನೆಯ ಭಾಗವನ್ನು ‘ದತ್ತ ದಯಾಧ್ವಮ್‌ದಮ್ಯತ’ (ಕೊಡು/ತ್ಯಾಗಮಾಡು, ಕರುಣೆ ತೋರು, ನಿಯಂತ್ರಿಸಿಕೊ) ‘ಓಂ ಶಾಂತಿ ಶಾಂತಿ ಶಾಂತಿ’ ಎಂಬ ಸಾಲುಗಳೊಂದಿಗೆ ಕೊನೆಗೊಳಿಸುತ್ತಾನೆ. ಮನುಷ್ಯರು ತಮ್ಮ ಸ್ವಾರ್ಥವನ್ನು ಬಿಡದೆ, ಸಹಜೀವಿಗಳಿಗೆ ಬುದ್ಧ ಹೇಳುವ ಕಾರುಣ್ಯ ತೋರದೆ ಮತ್ತು ಸಮಾಜ ಜೀವನದಲ್ಲಿ ಆಕ್ರಮಣಶೀಲತೆಯನ್ನು ನಿಯಂತ್ರಿಸಿಕೊಳ್ಳದೆ ಇದ್ದಲ್ಲಿ ಬದುಕು ಅಸಹನೀಯವಾಗುತ್ತದೆ; ಅರ್ಥಹೀನ ಸಂಘರ್ಷ ನಮ್ಮ ಜೀವದ ಶಾಶ್ವತ ಸ್ಥಿತಿಯಾಗುತ್ತದೆ ಎಂಬ ಎಚ್ಚರಿಕೆ ಈ ಮಾತುಗಳಲ್ಲಿದೆ.

ನಾಲ್ಕು ವೇದಗಳಲ್ಲೊಂದಾಗಿರುವ ಅಥರ್ವವೇದದಲ್ಲಿ ಅದ್ಭುತವೆನ್ನಿಸುವ ಪ್ರೀತಿಗೀತಗಳಿವೆ; ದ್ವೇಷದ ಒಂದು ಸೊಲ್ಲೂ ಇಲ್ಲ. ದೇಹ ಮತ್ತು ಮನಸ್ಸಿನ ಒಂದಾಗುವಿಕೆಯಿಂದ ಮೂಡುವ ನಿಜವಾದ ಪ್ರೀತಿ ಅಭಿವ್ಯಕ್ತಿ ಅಲ್ಲಿದೆ: ಬಾಣವು ಸ್ವರ್ಣಬಣ್ಣದ ಹಕ್ಕಿಗೆ ತಾಗುವಂತೆ/ ನನ್ನ ಪ್ರೇಮ ಬಾಣ ಕೂಡ ತನ್ನ ಪ್ರಿಯತಮೆಯ ಹೃದಯಕ್ಕೆ ತಾಗಲಿ/ ಅವಳ ಭಾವನೆ ಹೊರಬರಲಿ/ ಬಾಹ್ಯ ಪ್ರೀತಿ ಒಳಹೊಕ್ಕಲಿ/ ಹೊರಗು ಮತ್ತು ಒಳಗು ಒಂದಾಗಲಿ/ ನೋಡು, ನನ್ನ ಪ್ರಿಯತಮೆ ನಲಿವಿನಿಂದ ಬಂದಿದ್ದಾಳೆ ಅವಳ ಪ್ರಿಯಕರನಿಗಾಗಿ/ ನಾನು ಕೂಡ ಬರುವೆ ಒಂದು ಕುದುರೆಯಂತೆ/ ನಮ್ಮ ಸ್ನೇಹ ಸಂಬಂಧ ಸಂತಸಮಯವಾಗಲಿ/ ಸುಂದರವಾಗಲಿ/ ಹೃದಯ ಹೃದಯದೊಂದಿಗೆ/ ದೇಹ ದೇಹದೊಂದಿಗೆ ಸಂಧಿಸಲಿ.

ಇನ್ನೊಂದು ಗೀತೆಯಲ್ಲಿ ಬಳ್ಳಿಯೊಂದು ಮರವನ್ನು ಸುತ್ತಿಕೊಂಡಂತೆ ತನ್ನ ಪ್ರಿಯತಮೆ ತನ್ನನ್ನು ಸುತ್ತಿಕೊಳ್ಳಲಿ ಎಂದು ಪ್ರಿಯತಮ ಆಶಿಸುತ್ತಾನೆ: ಓ ಪ್ರಿಯತಮೆ!/ ಹೋಗದಿರು ದೂರ/ ಬಳ್ಳಿಯಂತೆ ಬಾ ನನ್ನ ದೇಹದ ಸುತ್ತ/ ಹತ್ತು ಮರವನ್ನು/ ಬಾ, ಅಪ್ಪಿಕೋ ನನ್ನ ಹೋಗದಿರು ದೂರ/ ಹಕ್ಕಿಯೊಂದರ ರೆಕ್ಕೆಗಳನ್ನು ಕತ್ತರಿಸುವಂತೆ ನಾನೂ ಕತ್ತರಿಸಿದ್ದೇನೆ ನಿನ್ನ ರೆಕ್ಕೆಗಳನ್ನು/ ಇಟ್ಟಿದ್ದೇನೆ ನಿನ್ನ ಹೃದಯದಲ್ಲಿ ನನ್ನ ಹೃದಯವನ್ನು/ ಸೂರ್ಯ ಭೂಮಿಯನ್ನು ಮುಚ್ಚುವ ಹಾಗೆ/ ನಾನೂ ಮುಚ್ಚುತ್ತೇನೆ ನಿನ್ನ ದೇಹವನ್ನು/ ಮಾಡುತ್ತೇನೆ ನನ್ನ ದೇಹವನ್ನು ನನ್ನ ಭೂಮಿ/ ಬಿತ್ತುತ್ತೇನೆ ನಿನ್ನಲ್ಲಿ ಬೀಜವನ್ನು/ ಬಾ ನನ್ನ ಪ್ರಿಯತಮೆ/ ಬಾ ನನ್ನ ಹೃದಯದೊಳಕ್ಕೆ/ ಹೋಗದಿರು ದೂರ ಓ ಪ್ರಿಯತಮೆ!

ಇಂತಹ ಪ್ರೇಮಗೀತೆಗಳನ್ನು ಓದಿ ಜನರಿಗೆ ಪ್ರೀತಿಯ ಸಹಬಾಳ್ವೆಯ ಸಂದೇಶ ನೀಡಬೇಕಾದ ನಮ್ಮ ತತಾಕಥಿತ ಅಧ್ಯಾತ್ಮವಾದಿಗಳ, ಅಡ್ಡಪಲ್ಲಕ್ಕಿಯ ಯಲ್ಲಿ ಮೆರವಣಿಗೆ ಹೋಗುತ್ತಾ ಸಂಭ್ರಮಪಡುವ ಧಾರ್ಮಿಕ ನಾಯಕರ ಮೌನ ಆಶ್ಚರ್ಯ ಹುಟ್ಟಿಸುತ್ತದೆ, ಆತಂಕ ಮೂಡಿಸುತ್ತದೆ.

ಸಾಮೂಹಿಕ ಹತ್ಯೆಗೆ ಸಾರ್ವಜನಿಕವಾಗಿ ನೀಡುವ ಕರೆ ಒಂದೆಡೆಯಾದರೆ ಸದ್ದಿಲ್ಲದೆ ಗುಪ್ತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸ್‌ಆ್ಯಪ್ ಗಳಲ್ಲಿ ದಿನಬೆಳಗಾದರೆ ಹರಿದಾಡುವ ದ್ವೇಷ ಸಂದೇಶಗಳು ನಯವಾದ ಮಾತುಗಳಲ್ಲಿ ಕತೆ ಹೇಳುವ ಹಾಗೆ ಕಲ್ಪಿತ ಘಟನಾವಳಿಗಳ ಮೂಲಕ ರವಾನಿಸಲಾಗುವ ಸಾಮಾನ್ಯೀಕರಣಗಳು ಸಮಾಜವನ್ನು ಕಾಡುತ್ತಿರುವ ಆಧುನಿಕ ಪೀಡೆಗಳಾಗಿವೆ. ಪರಸ್ಪರ ಸಾಮರಸ್ಯದಿಂದ ಬದುಕುವ ಸಮುದಾಯಗಳ ನಡುವೆ ಮತ, ಪಂಥ, ಧರ್ಮದ ಹೆಸರಿನಲ್ಲಿ ಮಿದುಳುತೊಳೆತದ ಮೂಲಕ ಒಡಕು ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಧಾರ್ಮಿಕ ಶಕ್ತಿಗಳ ಕುರಿತು ಜನರು ಜಾಗೃತ ರಾಗುವುದು ಇಂದಿನ ಸಾಮಾಜಿಕ ತುರ್ತು ಆಗಿದೆ. ಮಧ್ಯಯುಗದಲ್ಲಿ ನಡೆದ ಕ್ರುಸೇಡ್(ಪವಿತ್ರ ಯುದ್ಧ)ಗಳೂ ಸೇರಿದಂತೆ ವಿಶ್ವಾದ್ಯಂತ ಧರ್ಮದ ಹೆಸರಿನಲ್ಲಿ ನಡೆದ ಘರ್ಷಣೆ, ಯುದ್ಧಗಳಲ್ಲಿ ಲಕ್ಷಗಟ್ಟಲೆ ಜನರ ಹತ್ಯೆ ನಡೆದಿದೆಯೇ ಹೊರತು ಅವುಗಳಿಂದ ಇನ್ಯಾವ ಧನಾತ್ಮಕ ಪರಿಣಾಮವೂ ಆಗಿಲ್ಲ ಎಂಬುದನ್ನು ಇತಿಹಾಸ ಓದಿದವರಾದರೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

bhaskarrao599@gmail.com

Writer - ಬಿ. ಭಾಸ್ಕರ ರಾವ್

contributor

Editor - ಬಿ. ಭಾಸ್ಕರ ರಾವ್

contributor

Similar News