292 ಕಿಮೀ ದೂರವನ್ನು 75 ನಿಮಿಷದಲ್ಲಿ ಕ್ರಮಿಸಿ ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ʼಕೈʼ ಕಸಿ

Update: 2022-01-22 14:16 GMT
Photo: Newindianexpress

ವಡೋದರ: ಗುಜರಾತ್‌ನ ಸೂರತ್‌ನಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ಅವರ ಕೈಗಳನ್ನು ಮುಂಬೈನಲ್ಲಿರುವ ಮಹಿಳೆಯೊಬ್ಬರಿಗೆ ದಾನ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ, ಸೂರತ್‌ನಿಂದ ಮುಂಬೈಗೆ ಬರೋಬ್ಬರಿ 292 ಕಿಮೀ ದೂರವನ್ನು ವಾಯುಮಾರ್ಗ ಬಳಸಿ 75 ನಿಮಿಷದಲ್ಲಿ ತಲುಪಿಸಲಾಗಿದೆ. 
 
ಸೂರತ್ ನಗರದ ನಿವಾಸಿ 67 ವರ್ಷದ ಕನು ವಶ್ರಂಭಾಯಿ ಪಟೇಲ್ ಜನವರಿ 18 ರಂದು ಪಾರ್ಶ್ವವಾಯು ದಾಳಿಗೆ ಒಳಗಾಗಿದ್ದರು. ಪಟೇಲ್ ಅವರನ್ನು ನಗರ ಮೂಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. CT ಸ್ಕ್ಯಾನ್ ತನಿಖೆಯು ವರದಿಯು ಅವರ ಮೆದುಳಿನಲ್ಲಿ ತೀವ್ರವಾದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವ  ಆಗುತ್ತಿರುವುದನ್ನು ಪತ್ತೆ ಹಚ್ಚಿತ್ತು. ನಂತರ, ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ನಡೆಸಲಾಯಿತು.
 
ಶಸ್ತ್ರಚಿಕಿತ್ಸೆ ಅವರ ಜೀವ ಉಳಿಸಲು ಕೊನೆಗೂ ಫಲ ನೀಡಿರಲಿಲ್ಲ, ಜನವರಿ 20 ರಂದು ಅವರ ಮೆದುಳು ನಿಷ್ಕ್ರಿಯಗೊಂಡಿದ್ದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದರು.   ಆಸ್ಪತ್ರೆಯ ಆಡಳಿತವು ಅಂಗಾಂಗ ದಾನಕ್ಕಾಗಿ ರೋಗಿಯ ಕುಟುಂಬ ಸದಸ್ಯರಿಗೆ ಸಮಾಲೋಚನೆಗಾಗಿ ಡೊನೇಟ್ ಲೈಫ್' ಅನ್ನು ಸಂಪರ್ಕಿಸಿತು.

ಅದರಂತೆ, ಡೊನೇಟ್ ಲೈಫ್ ಸ್ವಯಂಸೇವಕರ ತಂಡವು ಪಟೇಲ್ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ , ಅಂಗಾಂಗ ಕಸಿ ಅಗತ್ಯವಿರುವ ಇತರರ ಜೀವಗಳನ್ನು ಉಳಿಸಲು ಪ್ರಮುಖ ಅಂಗಗಳನ್ನು ದಾನ ಮಾಡುವ ಬಗ್ಗೆ ಅವರ ಮನವೊಲಿಸಿದ್ದಾರೆ.
ಅಂಗಾಂಗ ದಾನಕ್ಕೆ ಒಪ್ಪಿಕೊಂಡ ಕುಟುಂಬಸ್ಥರು ಎರಡು ಕೈಗಳನ್ನು, ಕಿಡ್ನಿ, ಲಿವರ್‌ ಹಾಗೂ ಕಾರ್ನಿಯಾಗಳ ದಾನಕ್ಕೆ ಅನುಮತಿಸಿದ್ದಾರೆ. 

ದೇಹದಿಂದ ಕೈಗಳನ್ನು ಬೇರ್ಪಡಿಸಿದ 6 ರಿಂದ 8 ಗಂಟೆಯೊಳಗೆ ಅದನ್ನು ಜೋಡಿಸಬೇಕಾಗಿದ್ದರಿಂದ  ಗ್ರೀನ್‌ ಕಾರಿಡಾರ್‌ ನಿರ್ಮಿಸಿ ಸೂರತ್‌ನಿಂದ ಮುಂಬೈಗೆ ಕೈಗಳನ್ನು ತಲುಪಿಸಲಾಗಿದೆ. ಬರೋಬ್ಬರಿ 292 ಕಿಲೋ ಮೀಟರುಗಳನ್ನು ಬರೀ 75 ನಿಮಿಷದೊಳಗೆ ವಾಯುಮಾರ್ಗದ ಮೂಲಕ ಕ್ರಮಿಸಿ ಮುಂಬೈಗೆ ತಲುಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News