×
Ad

​ಅಸ್ಸಾಂ- ಮೇಘಾಲಯ ಗಡಿ ವಿವಾದದ ಚೆಂಡು ಕೇಂದ್ರದ ಅಂಗಳಕ್ಕೆ

Update: 2022-01-24 07:33 IST
ಹಿಮಾಂತ ಬಿಸ್ವ ಶರ್ಮಾ

ಗುವಾಹತಿ: ಅಸ್ಸಾಂ ಹಾಗೂ ಗುವಾಹತಿ ನಡುವೆ ಸುಧೀರ್ಘ ಕಾಲದಿಂದ ಬಾಕಿ ಇರುವ ಗಡಿ ವಿವಾದವನ್ನು ಇತ್ಯರ್ಥಪಡಿಸುವ ಸಂಬಂಧ ಉಭಯ ರಾಜ್ಯಗಳು ಮಾಡಿರುವ ಶಿಫಾರಸ್ಸಿನ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ.

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದೀಗ ಚೆಂಡು ಕೇಂದ್ರದ ಅಂಗಳದಲ್ಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾವು ಶಿಫಾರಸ್ಸನ್ನು ಸಲ್ಲಿಸಿದ್ದೇವೆ. ಮುಂದಿನ ಚರ್ಚೆಗೆ ನಮ್ಮನ್ನು ಯಾವಾಗ ಕರೆಯುತ್ತಾರೆ ಎನ್ನುವುದು ಅವರಿಗೆ ಬಿಟ್ಟ ವಿಚಾರ" ಎಂದು ಹೇಳಿದರು.

ಇತ್ತೀಚೆಗೆ ಉಭಯ ರಾಜ್ಯಗಳ ನಡುವೆ ಆಗಿರುವ ಒಪ್ಪಂದದ ಪ್ರಕಾರ ಆರು ವಿವಾದಿತ ಪ್ರದೇಶಗಳನ್ನು "ಕೊಡು-ಕೊಳ್ಳುವ ಸೂತ್ರ"ದ ಮೂಲಕ ವಿನಿಮಯ ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಶರ್ಮಾ ಈ ಹೇಳಿಕೆ ನೀಡಿದ್ದಾರೆ. ಈ ಒಪ್ಪಂದದ ಅನ್ವಯ ಒಟ್ಟು ಆರು ಪ್ರದೇಶಗಳ 36.79 ಚದರ ಕಿಲೋಮೀಟರ್ ವಿವಾದಿತ ಪ್ರದೇಶದ ಪೈಕಿ ಅಸ್ಸಾಂ 18.51 ಚದರ ಕಿಲೋಮೀಟರ್ ಭೂಪ್ರದೇಶವನ್ನು ಪಡೆಯಲಿದ್ದು, ಮೇಘಾಲಯ 18.28 ಚದರ ಕಿಲೋಮೀಟರ್ ಪಡೆಯಲಿದೆ.

ಅಸ್ಸಾಂ ತನ್ನ ಇತರ ನೆರೆ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಜತೆಗೂ ಗಡಿ ವಿವಾದ ಹೊಂದಿದೆ. ಅಸ್ಸಾಂ ವಿಧಾನಸಭೆ ದಾಖಲೆಗಳ ಪ್ರಕಾರ ರಾಜ್ಯದ ಒಟ್ಟು ವಿವಾದಿತ ಪ್ರದೇಶದ ವಿಸ್ತೀರ್ಣ 690 ಚದರ ಕಿಲೋಮೀಟರ್.

"ಕಾಂಗ್ರೆಸ್ ಪಕ್ಷ ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸುವ ಮುನ್ನ, ಮೇಘಾಲಯ ರಾಜ್ಯವನ್ನು ಅಸ್ಸಾಂನಿಂದ ಕಾಂಗ್ರೆಸ್ ಪಕ್ಷವೇ ಕತ್ತರಿಸಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ನಮ್ಮ ರಾಜಧಾನಿಯಾಗಿದ್ದ ಶಿಲ್ಲಾಂಗ್ ಬಿಟ್ಟು ಕೊಡಬೇಕಾಯಿತು ಮತ್ತು ದಿಸ್‌ಪುರದಲ್ಲಿ ಹೊಸ ರಾಜಧಾನಿ ರೂಪಿಸಬೇಕಾಯಿತು" ಎಂದು ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News