ಮುಚ್ಚಿದ ದೇವಾಲಯದ ಎದುರೇ ವಿವಾಹ !

Update: 2022-01-24 03:01 GMT

ಚೆನ್ನೈ: ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಹೇರಿರುವ ಲಾಕ್‌ಡೌನ್ ಕಾರಣದಿಂದ ತಮಿಳುನಾಡಿನಲ್ಲಿ ರವಿವಾರ ಎಲ್ಲ ದೇವಾಲಯಗಳನ್ನು ಮುಚ್ಚಲಾಗಿದ್ದು, ಮುಚ್ಚಿದ ದೇವಾಲಯದ ಎದುರೇ ಹಲವು ಜೋಡಿಗಳು ವಿವಾಹ ಬಂಧನಕ್ಕೊಳಗಾದ ಸ್ವಾರಸ್ಯಕರ ಘಟನೆ ಕುಡ್ಡಲೂರು ಜಿಲ್ಲೆಯ ಪ್ರಸಿದ್ಧ ದೇವಾಲಯವೊಂದರಲ್ಲಿ ನಡೆದಿದೆ.

ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇವಾಲಯದ ಎದುರು ರಸ್ತೆ ಮಧ್ಯದಲ್ಲಿ ಪುರೋಹಿತರು ಶಾಸ್ತ್ರೋಕ್ತವಾಗಿ ವಿವಾಹದ ವಿಧಿವಿಧಾನ ನೆರವೇರಿಸಿದರು. ಒಂದು ವಿವಾಹ ಮಾತ್ರವಲ್ಲದೇ ದೇವಾಲಯದ ಸುತ್ತಮುತ್ತಲ ತಮಿಳರಿಗೆ ಪವಿತ್ರ ಎನಿಸಿದ "ಮುಹೂರ್ತ ನಾಲ್" ದಿನವಾದ ರವಿವಾರ ಹಲವು ವಿವಾಹಗಳು ನೆರವೇರಿದವು.

ಈ ವಿಷ್ಣು ದೇವಾಲಯದಲ್ಲಿ ವಿವಾಹ ಬಂಧನಕ್ಕೆ ಒಳಗಾಗುವುದು ಪವಿತ್ರ ಎಂದು ಸಾಂಪ್ರದಾಯಿಕವಾಗಿ ಜನ ನಂಬಿಕೊಂಡು ಬಂದಿದ್ದಾರೆ. ರಾಜ್ಯದಲ್ಲಿ ಕೋವಿಡ್ ನಿರ್ಬಂಧ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಇತರ ದೇವಾಲಯಗಳಂತೆ ಈ ದೇಗುಲ ಕೂಡ ಶುಕ್ರವಾರ, ಶನಿವಾರ ಹಾಗೂ ರವಿವಾರ ಮುಚ್ಚಿತ್ತು. ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ಇಲ್ಲಿನ ವಡಪಲಾನಿ ಮುರುಗನ್ ದೇವಾಲಯದಲ್ಲಿ ಕುಂಭಾಭಿಷೇಕವನ್ನು ಕೂಡಾ ಕನಿಷ್ಠ ಸಂಖ್ಯೆಯ ಜನರ ಎದುರು ನಿರ್ವಹಿಸಲಾಯಿತು.

ರವಿವಾರದ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ, ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಜನ ಸಂಚಾರ ವಿರಳವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News