ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಶಿವಸೇನೆ 25 ವರ್ಷ ವ್ಯರ್ಥ ಮಾಡಿತು: ಉದ್ಧವ್ ಠಾಕ್ರೆ

Update: 2022-01-24 06:17 GMT

ಮುಂಬೈ:  ತಮ್ಮ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗಿನ ಮೈತ್ರಿಯನ್ನು ಮುರಿಯಲು ನಿರ್ಧರಿಸಿದ ಎರಡು ವರ್ಷಗಳ ನಂತರ  ಮಹಾರಾಷ್ಟ್ರ ಸಿಎಂ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬಿಜೆಪಿಯೊಂದಿಗಿನ ಮೈತ್ರಿಯ ಭಾಗವಾಗಿ ತಮ್ಮ ಪಕ್ಷವು 25 ವರ್ಷಗಳನ್ನು ವ್ಯರ್ಥ ಮಾಡಿದೆ ಎಂದು ನನಗೆ ಈಗಲೂ ಅನಿಸುತ್ತಿದೆ ಎಂದು ರವಿವಾರ ಹೇಳಿದ್ದಾರೆ.

ಪಕ್ಷದ ಸಂಸ್ಥಾಪಕ ಹಾಗೂ ತನ್ನ  ತಂದೆ ಬಾಳಾಸಾಹೇಬ್ ಠಾಕ್ರೆ ಅವರ 96 ನೇ ಜನ್ಮದಿನದ ಸಂದರ್ಭದಲ್ಲಿ ವರ್ಚುವಲ್ ಮೋಡ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಠಾಕ್ರೆ, ಶಿವಸೇನೆಯ ಮಾಜಿ ಮೈತ್ರಿ ಪಾಲುದಾರ ಬಿಜೆಪಿಯ ಬಗ್ಗೆ ಕಟುವಾದ ಕಾಮೆಂಟ್‌ಗಳನ್ನು ಮಾಡಿದರು.

ಶಿವಸೇನೆಯು 25 ವರ್ಷಗಳ ಕಾಲ ಬಿಜೆಪಿಯೊಂದಿಗೆ ತನ್ನ ಸಮಯವನ್ನು ವ್ಯರ್ಥ ಮಾಡಿದೆ ಎಂದು ಹೇಳುವ ಮೂಲಕ ಉದ್ಧವ್ ಠಾಕ್ರೆ  ಮಾತು ಪ್ರಾರಂಭಿಸಿದರು. "ನನ್ನ ಏಕೈಕ ನಿರಾಶೆ ಎಂದರೆ ಒಂದು ಕಾಲದಲ್ಲಿ ಅವರು ನಮ್ಮ ಸ್ನೇಹಿತರಾಗಿದ್ದರು. ನಾವು ಅವರನ್ನು ಬೆಳೆಸಿದ್ದೇವೆ. ನಾನು ಮೊದಲೇ ಹೇಳಿದಂತೆ ಬಿಜೆಪಿಯೊಂದಿಗೆ ನಮ್ಮ 25 ವರ್ಷಗಳ ಮೈತ್ರಿ ವ್ಯರ್ಥವಾಯಿತು" ಎಂದು ಠಾಕ್ರೆ ಹೇಳಿದರು.

ಶಿವಸೇನೆ ತನ್ನ ಹಿಂದುತ್ವದ ನಿಲುವನ್ನು ಬಿಟ್ಟಿಲ್ಲ ಎಂದು ಒತ್ತಿ ಹೇಳಿದ ಸಿಎಂ ಠಾಕ್ರೆ, "ಶಿವಸೇನಾ ಪ್ರಮುಖರು ನಮಗೆ ಹಿಂದುತ್ವದ ಬಗ್ಗೆ ಹೇಳಿದ್ದರು. ನಮಗೆ ಹಿಂದುತ್ವಕ್ಕೆ ಅಧಿಕಾರ ಬೇಕು. ನಾವು ಈಗ ನೋಡುತ್ತಿರುವುದು ಇವರಿಂದ (ಬಿಜೆಪಿ) ಅನುಸರಿಸುತ್ತಿರುವ ಹಿಂದುತ್ವ. ಅದು ಕೇವಲ ನೆಪ ಮಾತ್ರ.ಅವರ ಹಿಂದುತ್ವ ಅಧಿಕಾರಕ್ಕಾಗಿ ಇದೆ. ಜನರು ನಮ್ಮನ್ನು ಕೇಳುತ್ತಾರೆ ನಾವು  ಹಿಂದುತ್ವ ಬಿಟ್ಟಿದ್ದೇವೆಯೇ ಎಂದು. ಆದರೆ ನಾವು ಬಿಜೆಪಿ ಬಿಟ್ಟಿದ್ದೇವೆಯೇ ಹೊರತು ಹಿಂದುತ್ವವನ್ನಲ್ಲ. ಬಿಜೆಪಿ ಎಂದರೆ ಹಿಂದುತ್ವವಲ್ಲ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News