ಗಣರಾಜ್ಯೋತ್ಸವ ಪೆರೇಡ್: ಎರಡು ಡೋಸ್ ಲಸಿಕೆ ಪಡೆಯದವರಿಗೆ ಪ್ರವೇಶವಿಲ್ಲ
ಹೊಸದಿಲ್ಲಿ: ಜನವರಿ 26ರಂದು ರಾಜಧಾನಿಯಲ್ಲಿ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ನಡೆಯಲಿರುವ ಪೆರೇಡ್ ವೀಕ್ಷಿಸಲು ಆಗಮಿಸುವ ಜನರು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು ಹಾಗೂ 15 ವರ್ಷ ಕೆಳಗಿನ ಮಕ್ಕಳಿಗೆ ಸಮಾರಂಭದಲ್ಲಿ ಭಾಗವಹಿಸಲು ಅನುಮತಿಸಲಾಗುವುದಿಲ್ಲ ಎಂದು ದಿಲ್ಲಿ ಪೊಲೀಸರು ಬಿಡುಗಡೆಗೊಳಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಸಹಿತ ಇತರ ಎಲ್ಲಾ ಕೋವಿಡ್ ನಿಯಮಾವಳಿಗಳನ್ನೂ ಪಾಲಿಸಬೇಕಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ತಮ್ಮ ಲಸಿಕೆ ಪ್ರಮಾಣಪತ್ರವನ್ನೂ ತೋರಿಸಬೇಕಿದೆ ಎಂದು ದಿಲ್ಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಆಸನಗಳಲ್ಲಿ ಆಸೀನರಾಗಲು ಬೆಳಿಗ್ಗೆ 7 ಗಂಟೆಯಿಂದ ಅನುಮತಿಸಲಾಗುವುದು. ಪಾರ್ಕಿಂಗ್ ಸೌಲಭ್ಯ ಸೀಮಿತವಾಗಿರುವುದರಿಂದ ಜನರು ಕಾರ್ ಪೂಲಿಂಗ್ ವ್ಯವಸ್ಥೆ ಮೂಲಕ ಅಥವಾ ಟ್ಯಾಕ್ಸಿ ಮೂಲಕ ಆಗಮಿಸಬೇಕು, ಮಾನ್ಯವಾದ ಗುರುತು ಕಾರ್ಡ್ ಕೂಡ ಹೊಂದಿರಬೇಕು ಹಾಗೂ ಭದ್ರತಾ ತಪಾಸಣೆಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ರಿಮೋಟ್ ಕಂಟ್ರೋಲ್ ಕಾರುಗಳ ಕೀಲಿಗಳನ್ನು ಅಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿ ಸಂಬಂಧಿತರಲ್ಲಿ ನೀಡುವ ಸೌಲಭ್ಯವೂ ಇರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ವ್ಯವಸ್ಥೆಗೆ ರಾಜಧಾನಿಯಲ್ಲಿ 27,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ಥಾನ ಹೇಳಿದ್ದಾರೆ.