ಜೆಎನ್ಯು ವಿದ್ಯಾರ್ಥಿ ಶರ್ಜೀಲ್ ಇಮಾಂ ವಿರುದ್ಧ ದೇಶದ್ರೋಹ ಆರೋಪ ರೂಪಿಸಿ ದಿಲ್ಲಿ ಕೋರ್ಟ್ ಆದೇಶ

Update: 2022-01-24 17:57 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಪ್ರದೇಶದಲ್ಲಿ ಶರ್ಜೀಲ್ ಇಮಾಮ್ ಮಾಡಿದ ಆಪಾದಿತ ʼಪ್ರಚೋದಕʼ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿ ನ್ಯಾಯಾಲಯವು ಸೋಮವಾರ ಅವರ ವಿರುದ್ಧ ದೇಶದ್ರೋಹ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದೆ ಎಂದು livelaw ವರದಿ ಮಾಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಸೆಕ್ಷನ್ 124A (ದೇಶದ್ರೋಹ), 153A (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಇತ್ಯಾದಿ), 153B (ಆರೋಪಗಳು, ರಾಷ್ಟ್ರೀಯ ಏಕೀಕರಣಕ್ಕೆ ಹಾನಿಕರವಾದ ಸಮರ್ಥನೆಗಳು), 505 (ಸಾರ್ವಜನಿಕರಿಗೆ ದುಷ್ಕೃತ್ಯದ ಹೇಳಿಕೆಗಳು) ಅಡಿಯಲ್ಲಿ ಆರೋಪಗಳನ್ನು ರಚಿಸಿದ್ದಾರೆ. ಜೊತೆಗೆ ಯುಎಪಿಎಯ ಸೆಕ್ಷನ್ 13 (ಕಾನೂನುಬಾಹಿರ ಚಟುವಟಿಕೆಗಳಿಗೆ ಶಿಕ್ಷೆ)ಅನ್ನೂ ದಾಖಲಿಸಲಾಗಿದೆ.

ಇಮಾಮ್ ಅವರ ಪರವಾಗಿ ವಾದ ಮಂಡಿಸಿದ ವಕೀಲ ತನ್ವೀರ್ ಅಹ್ಮದ್ ಮಿರ್ ಅವರು "ಇಮಾಮ್ ಮಾಡಿದ ಭಾಷಣಗಳಲ್ಲಿ ಯಾವುದೇ ಹಿಂಸಾಚಾರದ ಕರೆ ಇಲ್ಲ ಮತ್ತು ಪ್ರಾಸಿಕ್ಯೂಷನ್ ಮಾಡಿದ ಆರೋಪಗಳು ಸತ್ಯಕ್ಕೆ ದೂರವಾಗಿದೆ ಮತ್ತು ಯಾವುದೇ ಆಧಾರವಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿಕೆ ಸಲ್ಲಿಸಿದರು. ಸರ್ಕಾರವನ್ನು ಟೀಕಿಸುವುದು ದೇಶದ್ರೋಹಕ್ಕೆ ಕಾರಣವಾಗುವುದಿಲ್ಲ ಮತ್ತು ಶುದ್ಧ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಆರೋಪ ಹೊರಿಸಲಾಗುವುದಿಲ್ಲ ಎಂದು ಅವರು ಹೇಳಿದರು.

ಮತ್ತೊಂದೆಡೆ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಈ ವಾದವನ್ನು ವಿರೋಧಿಸಿದರು, ಪ್ರತಿಭಟನೆಯ ಮೂಲಭೂತ ಹಕ್ಕು ಸಾರ್ವಜನಿಕರಿಗೆ ಸಮಸ್ಯೆ ಉಂಟುಮಾಡುವ ಮಿತಿಯನ್ನು ಮೀರಿ ಹೋಗುವುದಿಲ್ಲ. ಆಪಾದಿತ ದೇಶದ್ರೋಹದ ಭಾಷಣಗಳನ್ನು ಮಾಡುವ ಮೂಲಕ, ಇಮಾಮ್ ಭಾರತದ ಸಾರ್ವಭೌಮತೆಗೆ ಸವಾಲು ಹಾಕಿದರು ಮತ್ತು ಮುಸ್ಲಿಮರಲ್ಲಿ 'ಹತಾಶತೆ ಮತ್ತು ಅಭದ್ರತೆಯ ಭಾವನೆ'ಯನ್ನು ತುಂಬಲು ಪ್ರಯತ್ನಿಸಿದರು, ಅವರು ದೇಶದಲ್ಲಿ ಯಾವುದೇ ಭರವಸೆ ಉಳಿದಿಲ್ಲ ಎಂದು ಹೇಳಿದ್ದರು ಎಂದು ಅವರು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News