×
Ad

ಜ. 26ರಂದು ಸ್ವಾಭಿಮಾನ ಯಾತ್ರೆ : ಬಿ.ಕೆ.ಹರಿಪ್ರಸಾದ್

Update: 2022-01-24 16:53 IST

ಮಂಗಳೂರು, ಜ.24: ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ನಿರಾಕರಿಸಿರುವುದನ್ನು ವಿರೋಧಿಸಿ ಜ. 26ರಂದು ಸ್ವಾಭಿಮಾನ ಯಾತ್ರೆ ನಡೆಸಲಾಗುತ್ತಿದ್ದು, ಎಲ್ಲರೂ ಭಾಗವಹಿಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ತಿಳಿಸಿದ್ದಾರೆ.

ಬಿಜೆಪಿಯವರು ಕಾಂಗ್ರೆಸ್‌ ಪಕ್ಷಕ್ಕೆ ಸವಾಲು ಹಾಕುವ ಧೈರ್ಯ ತೋರಿಸುವುದು ಬೇಡ. ಬ್ರಿಟೀಷರಿಗೆ ಗುಲಾಮರಾದವರಿಂದ ನಾವು ಕಲಿಯಬೇಕಾದಂತದ್ದಿಲ್ಲ, ಬ್ರಿಟೀಷರ ಚಾಲೆಂಜ್‌ಗೇ ಭಯ ಪಡದ ಕಾಂಗ್ರೆಸ್ಸಿಗರು ನಾವು ಎಂದು ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಬಿಜೆಪಿ ನಾಯಕರ ಹೇಳಿಕೆಯೊಂದರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆಂದರೆ ಅದಕ್ಕೆ ವಿರುದ್ಧವಾಗಿ ನೂರು ಪಟ್ಟು ಹೆಚ್ಚಾಗಿ ಪ್ರತಿಭಟನೆ ಮಾಡುವ ಶಕ್ತಿ ನಮಗಿದೆ ಎಂದರು.

ಬಿಜೆಪಿಯವರ ಸವಾಲು, ಪ್ರತಿಭಟನೆಗಳು ಉತ್ತರ ಕುಮಾರನ ಪೌರುಷ ಒಲೆಯ ಮುಂದೆ ಎಂಬ ರೀತಿಯಲ್ಲಿ. ಅವರೂ ಈ ವಿಷಯದಲ್ಲಿ ಪ್ರತಿಭಟನೆ ನಡೆಸುತ್ತಾರೆಂದರೆ ತಪ್ಪನ್ನು ಒಪ್ಪಿಕೊಂಡ ಹಾಗಾಗಿದೆ ಎಂದರು.

ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿಯನ್ನು ವಿಶ್ವಗುರು ಮಾಡುವ ಆತುರದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ದಾರ್ಶನಿಕರು, ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನ ಮಾಡುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ ಅವರು, ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ನಿರಾಕರಣೆ ಮಾಡುವ ಮೂಲಕ ಅವಮಾನ ಮಾಡಿದ್ದಾರೆ. ಆರೆಸ್ಸೆಸ್‌ನವರು ಪ್ರಾತಸ್ಮರಣೆ ಮಾಡುವುದಾಗಿ ಹೇಳುತ್ತಾರೆ. ಆದರೆ ನಾರಾಯಣಗುರುಗಳ ಮೂಲಮಂತ್ರವಾದ ಒಂದೇ ಜಾತಿ ಒಂದೇ ಮತ ಎಂಬುದನ್ನು ಒಪ್ಪಿಕೊಳ್ಳಲು ಅವರು ತಯಾರಿಲ್ಲ. ಕೇರಳದಲ್ಲಿ ಎಸ್‌ಎನ್‌ಡಿಪಿಯನ್ನು ಒಡೆದು ರಾಜಕೀಯ ಮಾಡಲು ಹೊರಟು ನಾರಾಯಣ ಗುರುಗಳ ತತ್ವದ ಕಾರಣದಿಂದ ಬಿಜೆಪಿ ಅಲ್ಲಿ ಸೀಟು ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ಆದ್ದರಿಂದಲೇ ಪರೋಕ್ಷವಾಗಿ ಬಿಜೆಪಿ ಮಾಡುತ್ತಿರುವ ಷಡ್ಯಂತ್ರ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಮೊಯ್ದಿನ್ ಬಾವಾ, ಐವನ್ ಡಿಸೋಜಾ, ಇಬ್ರಾಹೀಂ ಕೋಡಿಜಾಲ್, ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಬಿ. ಇಬ್ರಾಹೀಂ, ಪುರುಷೋತ್ತ ಚಿತ್ರಾಪುರ, ಗಣೇಶ್ ಪೂಜಾರಿ, ಚಿತ್ತರಂಜನ್, ಲುಕ್ಮಾನ್ ಬಂಟ್ವಾಳ, ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.

ಜ. 26ರಂದು ಸ್ವಾಭಿಮಾನ ಯಾತ್ರೆ

ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ನಿರಾಕರಿಸಿರುವುದನ್ನು ವಿರೋಧಿಸಿ ಜ. 26ರಂದು ಸ್ವಾಭಿಮಾನ ಯಾತ್ರೆ ನಡೆಸಲಾಗುತ್ತಿದ್ದು, ಎಲ್ಲರೂ ಭಾಗವಹಿಸಬೇಕು ಎಂದು ಬಿ.ಕೆ. ಹರಿಪ್ರಸಾದ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News